ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ 74 ಕೋಟಿ ರು.ಗಳ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿರುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದರು.
ಕೋಲಾರ (ಆ.06): ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ 74 ಕೋಟಿ ರು.ಗಳ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿರುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ 26 ಕೋಟಿ ರು., ಕೆಜಿಎಫ್ ನಗರಕ್ಕೆ 15 ಕೋಟಿ, ಬಂಗಾರಪೇಟೆಗೆ 10 ಕೋಟಿ ರು.ಗಳು ಸೇರಿದಂತೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 74 ಕೋಟಿ ರು.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ಕೋಲಾರಕ್ಕೆ 5 ಟಿಎಂಸಿ ಎತ್ತಿನಹೊಳೆ ನೀರು: ಎತ್ತಿನ ಹೊಳೆ ಯೋಜನೆಯೂ ತುಮಕೂರಿನ ಬೈರಗೊಂಡ್ಲಹಳ್ಳಿ ಬಳಿಯ ಜಮೀನಿಗೆ ಸಂಬಂಧಿಸಿದಂತೆ ಅಡೆತಡೆಗಳಿರುವುದನ್ನು ಬಗೆಹರಿಸುವ ಪ್ರಯತ್ನ ಮಂದುವರೆದಿದೆ, ಕೋಲಾರ ಜಿಲ್ಲೆಗೆ 5 ಟಿ.ಎಂ.ಸಿ. ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಕೆ.ಸಿ.ವ್ಯಾಲಿಯ 3ನೇ ಹಂತದ ಶುದ್ಧೀಕರಣಕ್ಕೆ ಕ್ರಮ ಕೈಗೊಂಡಿದೆ, ಜಿಲ್ಲೆಯ ರಸ್ತೆಗಳನ್ನು ಉನ್ನತೀಕರಣ ಮಾಡಲಾಗುವುದು, ರಿಂಗ್ ರಸ್ತೆಗೆ ಈಗಾಗಲೇ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಯಿಂದ ಜನರ ಬದುಕಿನಲ್ಲಿ ಬದಲಾವಣೆ: ಸಚಿವ ಎಂ.ಸಿ.ಸುಧಾಕರ್
ಯರಗೋಳ್ ಯೋಜನೆಯಲ್ಲಿ ಈಗಾಗಲೇ ಶೇ.87ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. 4 ಓವರ್ ಹೆಡ್‌ಟ್ಯಾಂಕ್‌ಗಳಲ್ಲಿ ನೀರು ಶೇಖರಣೆ ಮಾಡಲಾಗುವುದು, ಈಗಾಗಲೇ ಎರಡು ಓವರ್ ಹೆಡ್ ಟ್ಯಾಂಕ್‌ಗಳು ಪೂರ್ಣಗೊಂಡಿರುವುದರಿಂದ ನೀರು ಪೂರೈಕೆಗೆ ಚಾಲನೆ ನೀಡಲು ಸೂಚಿಸಿದೆ. ಕೆ.ಸಿ.ವ್ಯಾಲಿ ನೀರು ಯರಗೋಳ್ ನೀರಿಗೆ ಸೇರ್ಪಡೆಯಾಗಲು ಬಿಡುವುದಿಲ್ಲ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಕೆ.ಸಿ.ವ್ಯಾಲಿ ನೀರಿಗೂ ಸಂಬಂಧವಿಲ್ಲ ಎಂದು ಪ್ರತಿ ಪಾದಿಸಿದರು.
ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಜಿಲ್ಲೆಯ ಹಲವಾರು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದು ನಿಜ ಶೇ.60 ರಷ್ಟುಮಾತ್ರ ಭರ್ತಿ ಇದೆ. ಉಳಿದಂತೆ ಭರ್ತಿ ಮಾಡಲು ಪ್ರಸ್ತಾವನೆ ಸರ್ಕಾರದ ಮುಂದಿದೆ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವರ ಸ್ಪಷ್ಟನೆಗೆ ಧ್ವನಿಗೂಡಿಸಿದ ಶಾಸಕ ಕೊತ್ತೂರು ಮಂಜುನಾಥ್ ಕೋಲಾರ ನಗರಸಭೆಯಲ್ಲಿ ಈಗ 15 ಮಂದಿ ಸಿಬ್ಬಂದಿಗಳ ನೇಮಕ ಮಾಡಲು ಸರ್ಕಾರದಿಂದ ಅನುಮತಿ ಪಡೆದಿದ್ದು ಪೌರಾಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೋಲಾರಮ್ಮ ಕೆರೆಯ ಅಭಿವೃದ್ದಿಪಡಿಸಿ ಪ್ರವಾಸಿ ತಾಣವಾಗಿ ಪರಿವರ್ತಿಸಲು 20 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಇದರ ಜೂತೆಗೆ ಉದ್ಯಾನವನಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳು ಕಳಪೆ ಇದ್ದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸ ಬೇಕಾಗಿರುವುದು ಸಂಬಂಧ ಪಟ್ಟಅಧಿಕಾರಿಗಳ ಜವಾಬ್ದಾರಿಯಾಗಿದೆ ಇಲ್ಲದಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸುತ್ತೇವೆ ಎಂದು ಉತ್ತರಿಸಿದರು.
ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಆದ್ಯತೆ ನೀಡಿ: ಶಾಸಕ ಪ್ರದೀಪ್ ಈಶ್ವರ್
ಬಡವರಿಗೆ ನಿವೇಶನ: ನಗರ ಹೊರವಲಯದ 500 ಎಕರೆ ಜಾಗದಲ್ಲಿ ಕೆ.ಯು.ಡಿ.ಎ. ಲೇಔಟ್ ಅಭಿವೃದ್ದಿಪಡಿಸಿ ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡಲು ಚಿಂತಿಸಿದೆ, ಇದರಲ್ಲಿ ಜಮೀನು ನೀಡುವಂತ ರೈತರಿಗೆ ಶೇ.50 ನಿವೇಶಗಳನ್ನು ನೀಡಲಾಗುವುದು, ಉಳಿದ ಶೇ.50 ನಿವೇಶಗಳು ಕೆ.ಯು.ಡಿ.ಎ. ಸ್ವಾಧೀನಕ್ಕೆ ಪಡೆಯುವಂತ ಯೋಜನೆ ರೂಪಿಸಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ರೂಪಕಲಾ ಶಶಿಧರ್, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ಮುಖಂಡರಾದ ಆಂಜನಪ್ಪ, ಚಂಜಿಮಲೆ ರಮೇಶ್, ಸೀಸಂದ್ರ ಗೋಪಾಲ್, ವೈ.ಶಿವಕುಮಾರ್ ಇದ್ದರು.