ಮಧ್ವರಾಜ್‌, ವರ್ತೂರ್‌ ಸೇರಿದಂತೆ ಸಪ್ತ ನಾಯಕರು ಕಮಲ ತೆಕ್ಕೆಗೆ!

By Kannadaprabha News  |  First Published May 8, 2022, 5:15 AM IST

- ಹಳೇ ಮೈಸೂರು, ಕರಾವಳಿಯಲ್ಲಿ ಮತ್ತಷ್ಟುಬಲ

- ಸಂದೇಶ್‌ ಸೇರಿ 7 ಮಂದಿಗೆ ಸಿಎಂ ಕಟೀಲ್‌ ಸ್ವಾಗತ

- ರಾಜಕಾರಣ ನಿಂತ ನೀರಲ್ಲ ಎಂದ ಬಸವರಾಜ ಬೊಮ್ಮಾಯಿ
 


ಬೆಂಗಳೂರು (ಮೇ.8): ಹಳೆ ಮೈಸೂರು ಭಾಗ (Old Mysore Region) ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್‌ (Congress) ಮತ್ತು ಜೆಡಿಎಸ್‌ (JDS) ಪ್ರಾಬಲ್ಯದ ಪ್ರದೇಶಗಳಲ್ಲಿ ನೆಲೆವೂರಲು ಆ ಪ್ರದೇಶಗಳ ನಾಯಕರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಇದರ ಭಾಗವಾಗಿ ಶನಿವಾರ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ಮುಖಂಡ ಪ್ರಮೋದ್‌ ಮಧ್ವರಾಜ್‌ (Pramod Madhwaraj ), ಮಾಜಿ ಸಚಿವ ವರ್ತೂರು ಪ್ರಕಾಶ್‌ (Varthur Prakash), ಜೆಡಿಎಸ್‌ನ ಸಂದೇಶ್‌ ನಾಗರಾಜ್‌ (Sandesh Nagaraj) ಸೇರಿದಂತೆ ಏಳು ಮಂದಿ ನಾಯಕರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾರ್ಯಕ್ರಮದಲ್ಲಿ ನಡೆದ ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌, ವರ್ತೂರು ಪ್ರಕಾಶ್‌, ಜೆಡಿಎಸ್‌ ನಾಯಕ ಸಂದೇಶ ನಾಗರಾಜ್‌, ಮಾಲೂರು ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್‌ ಗೌಡ, ಒಕ್ಕಲಿಗ ಸಂಘದ ನಿರ್ದೇಶಕ ಮಂಡ್ಯದ ಅಶೋಕ್‌ ಜಯರಾಂ, ಮಾಜಿ ಐಆರ್‌ಎಸ್‌ ಅಧಿಕಾರಿ ಲಕ್ಷ್ಮೇ ಅಶ್ವಿನ್‌ಗೌಡ, ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ.ಕೃಷ್ಣ ಮೂರ್ತಿ ಬಿಜೆಪಿಗೆ ಸೇರಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ), ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌  (Nalin Kumar Katil)ಪಕ್ಷದ ಬಾವುಟ ನೀಡಿ ಏಳು ಮಂದಿಯನ್ನು ಪಕ್ಷಕ್ಕೆ ಬರಮಾಡಿಕೊಂಡರು.

Tap to resize

Latest Videos

ರಾಜಕಾರಣ ನಿಂತ ನೀರಲ್ಲ- ಸಿಎಂ ಟಾಂಗ್‌: ಪಕ್ಷಕ್ಕೆ ಏಳು ಮಂದಿಯನ್ನು ಬರಮಾಡಿಕೊಂಡ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕರ್ನಾಟಕ ನಮ್ಮ ಕಪಿಮುಷ್ಟಿಯಲ್ಲಿದೆ ಎಂದು ಕೆಲವು ಪಕ್ಷಗಳು ಭಾವಿಸಿವೆ. ಆದರೆ, ರಾಜಕಾರಣ ನಿಂತ ನೀರಲ್ಲ. ಜನ ಬದಲಾವಣೆ ಬಯಸಿದ್ದು, ಬಿಜೆಪಿ ಪರ ಒಲವು ಹೊಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ಗೆ ಪಾಠ ಕಲಿಸಲಿದ್ದಾರೆ. ಐದು ರಾಜ್ಯಗಳ ಚುನಾವಣೆ ಬಳಿಕ ಪ್ರತಿಪಕ್ಷದ ಹಲವು ನಾಯಕರು ಪಕ್ಷದತ್ತ ಬರುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಹೊಸ ಶಕ್ತಿ ಬರಲಿದೆ. ಹಲವು ವರ್ಷಗಳ ಕಾಲ ಕೇವಲ ಎರಡು ಪಕ್ಷ ಬೆಂಬಲಿಸಿ ಈ ಭಾಗದ ಜನ ಭ್ರಮ ನಿರಸನಗೊಂಡಿದ್ದಾರೆ. ಬಿಜೆಪಿ ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನತೆಗೆ ವಿಶ್ವಾಸ ಬಂದಿದೆ ಎಂದು ಹೇಳಿದರು.

ಕಾಂಗ್ರೆಸ್ಸಲ್ಲಿ ಈಗಲೇ ‘ಮಂತ್ರಿ ಜಗಳ’: 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಸಾಧಿಸುವ ಉಮೇದಿ ಇಮ್ಮಡಿಗೊಂಡಿದೆ. ಆದರೆ, ಕಾಂಗ್ರೆಸ್‌ನಲ್ಲಿ ಚುನಾವಣೆಗೂ ಮೊದಲೇ ಸಚಿವ ಸಂಪುಟದ ಸ್ಥಾನಕ್ಕಾಗಿ ಜಗಳ ನಡೆದಿದೆ. ಅವರ ಭ್ರಮೆ ಕೇವಲ ಭ್ರಮೆಯಾಗಿಯೇ ಉಳಿಯಲಿದೆ. ಕಾಂಗ್ರೆಸ್‌ನ ದೌರ್ಭಾಗ್ಯದ ಸರ್ಕಾರ ಬೇಡ ಎಂದು ಜನರು ತೀರ್ಮಾನಿಸಿದ್ದಾರೆ. ಪ್ರತಿಪಕ್ಷದಲ್ಲಿಯೂ ದೊಡ್ಡ ಬದಲಾವಣೆಯಾಗಲಿದೆ. ಸ್ವಾಭಿಮಾನ, ಸ್ವಾವಲಂಬನೆಯ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ರಾಜ್ಯದ ಬಜೆಟ್‌ ಮಂಡನೆ ಬಳಿಕ ಜನರು ಮತ್ತಷ್ಟು ವಿಶ್ವಾಸ ಇಟ್ಟಿದ್ದಾರೆ. ಬಜೆಟ್‌ನಲ್ಲಿ ಘೋಷಣೆಯಾದ ಕಾರ್ಯಕ್ರಮಗಳು ಎಲ್ಲರಿಗೂ ತಲುಪುವ ಕೆಲಸ ಮಾಡಲಾಗುತ್ತಿದೆ. ಬಜೆಟ್‌ ನೀಡುವುದು ಮಾತ್ರವಲ್ಲದೇ, ಅದನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನೂ ಸಹ ಮಾಡುತ್ತಿದ್ದೇವೆ. ನಮ್ಮ ಸಾಧನೆಯನ್ನು ಜನರ ಮುಂದಿಟ್ಟು ಮತ ಕೇಳುತ್ತೇವೆ ಎಂದರು.

ಬಿಜೆಪಿ ಮೇಲೆ ವಿಶ್ವಾಸ ಇಮ್ಮಡಿ- ಕಟೀಲ್‌: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಹಳ್ಳಿಯಿಂದ ರಾಜ್ಯದವರೆಗೆ ಬಿಜೆಪಿ ಮೇಲೆ ವಿಶ್ವಾಸ ಹೆಚ್ಚಾಗಿದೆ. ಅದಕ್ಕಾಗಿ ಹಲವು ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ. ಮುಂದಿನ ದಿನದಲ್ಲಿ ಬಿಜೆಪಿಗೆ ಮತ್ತಷ್ಟುಮಂದಿ ಬರಲಿದ್ದು, ಕಾಂಗ್ರೆಸ್‌ ಮನೆ ಖಾಲಿಯಾಗಲಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಾಂಗ್ರೆಸ್‌ನ ಒಳ ಜಗಳ ಮತ್ತಷ್ಟುತೀವ್ರಗೊಳ್ಳಲಿದೆ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮತ್ತು ಕೋಮುಗಲಭೆಗಳು ನಡೆದಿದ್ದವು. ನಾಲ್ಕು ಲಕ್ಷ ಕೋಟಿ ರು. ಮೊತ್ತದ ಭ್ರಷ್ಟಾಚಾರ ಹಗರಣಗಳು ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನಡೆದಿದ್ದವು ಎಂದು ಟೀಕಾಪ್ರಹಾರ ನಡೆಸಿದರು.

ಯತ್ನಾಳ್ 2500 ಕೋಟಿ ಹೇಳಿಕೆ ತನಿ​ಖೆ​ಯಾ​ಗ​ಲಿ ಎಂದ ಸಿದ್ದರಾಮಯ್ಯ!

ಸರ್ಕಾರದಲ್ಲಿ ಸಚಿವರಾಗಿರುವ ಮುಖಂಡರು ಪಕ್ಷದ ವಿಚಾರಧಾರೆ ಒಪ್ಪಿ ಬಂದಿದ್ದಾರೆ. ಅವರನ್ನು ಕೇಳಿ ಇಲ್ಲಿ ಹಾಲು ಇದೆ. ಸಕ್ಕರೆಯಾಗಿ ಹಲವು ಮಂದಿ ಬಂದಿದ್ದಾರೆ. ಎಲ್ಲರೂ ಸೇರಿ ಪಕ್ಷವನ್ನು ಸಿಹಿಯನ್ನಾಗಿ ಮಾಡೋಣ. ಪಕ್ಷವನ್ನು ಕಟ್ಟಿಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.

ಮುಸ್ಲಿಮರ ಓಲೈಕೆಗೆ ಮುಂದಾದ ಬಿಜೆಪಿ ಸಚಿವ! ಮತ್ತೆ ಹಳೆ ಕ್ಷೇತ್ರಕ್ಕೆ ಮರಳಿ ಬರ್ತಾರಾ ಸಚಿವ ಶ್ರೀರಾಮುಲು?

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಕ್ರೀಡಾ ಸಚಿವ ನಾರಾಯಣ ಗೌಡ, ಅಬಕಾರಿ ಸಚಿವ ಗೋಪಾಲಯ್ಯ, ತೋಟಗಾರಿಕೆ ಸಚಿವ ಮುನಿರತ್ನ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.


ಬಿಜೆಪಿ ಸೇರಿದವರು

1. ಪ್ರಮೋದ್‌ ಮಧ್ವರಾಜ್‌

ಮೊಗವೀರ- ಉಡುಪಿ

2. ವರ್ತೂರು ಪ್ರಕಾಶ್‌

ಕುರುಬ- ಕೋಲಾರ

3. ಸಂದೇಶ ನಾಗರಾಜ್‌

ಒಕ್ಕಲಿಗ- ಮೈಸೂರು

4. ಮಂಜುನಾಥ್‌ ಗೌಡ

ಒಕ್ಕಲಿಗ- ಕೋಲಾರ

5. ಅಶೋಕ್‌ ಜಯರಾಂ

ಒಕ್ಕಲಿಗ- ಮಂಡ್ಯ

6. ಲಕ್ಷ್ಮೇ ಅಶ್ವಿನ್‌ಗೌಡ

ಒಕ್ಕಲಿಗ- ಮಂಡ್ಯ

7. ಕೆ.ಬಿ.ಕೃಷ್ಣಮೂರ್ತಿ

ಬೆಂಗಳೂರು
 

click me!