
ಬೆಂಗಳೂರು (ಅ.30): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗುತ್ತಾ ಬಂತು. ತನ್ನ ಪಾಲುದಾರಿಕೆಯ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ಕೇಂದ್ರ ಸರ್ಕಾರ ನಯಾಪೈಸೆ ಅನುದಾನ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವ ನಿಮ್ಮ ಸರ್ಕಾರಕ್ಕೆ ಕನ್ನಡಿಗರ ಕಲ್ಯಾಣ ಕಾರ್ಯಕ್ರಮಗಳು ಹೊರೆಯಾದವೇ? ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದ ಯೋಜನೆಗಳು ಬಂದ್ ಆಗಲಿವೆ ಎಂದಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆ ನಿಜ ಮಾಡಲು ಹೊರಟಿದ್ದೀರಾ ಎಂದೂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಭಾನುವಾರ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ತನ್ನ ಪ್ರಾಯೋಜಕತ್ವದ ಯೋಜನೆಗಳಲ್ಲಿ ಕೇಂದ್ರ ಅನ್ಯಾಯ ಮಾಡಿದ್ದು, ರಾಜ್ಯದ ಪಾಲಿನ ಅನುದಾನಕ್ಕೆ ಕೊಕ್ಕೆ ಇಡಲಾಗಿದೆ. ತೆರಿಗೆ ಪಾಲಲ್ಲಿ ರಾಜ್ಯಕ್ಕೆ ವಂಚಿಸುತ್ತಿದ್ದು ಕನ್ನಡಿಗರ ಬೆವರಿನ ಹಣ ಉತ್ತರ ಭಾರತದ ರಾಜ್ಯಗಳ ಪಾಲಾಗುತ್ತಿವೆ ಎಂದು ಕಿಡಿಕಾರಿದ್ದಾರೆ. ಕೇಂದ್ರ ಪ್ರಾಯೋಜಕತ್ವದ ಹಲವು ಜನಪರ ಯೋಜನೆಗಳ ಅನುದಾನಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೊಕ್ಕೆ ಹಾಕಿದ್ದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪದೆ ಸಂಕಷ್ಟದಲ್ಲಿದ್ದಾರೆ. ಕನ್ನಡಿಗರ ಪಾಲಿನ ಅನುದಾನ ಕತ್ತರಿಸಿ ಅದಾನಿಯ ಕೈಗಿತ್ತರೆ ದೇಶ ಅಭಿವೃದ್ಧಿ ಆಗುವುದೇ? ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯ 14ನೇ ಹಣಕಾಸು ಆಯೋಗ ನಿಗದಿಪಡಿಸಿದ್ದ ತೆರಿಗೆ ಪಾಲು ಶೇ.4.72ಕ್ಕೆ ಕತ್ತರಿ ಹಾಕಿ, ನಿಮ್ಮ ಸರ್ಕಾರದ ಅವಧಿಯ 15ನೇ ಹಣಕಾಸು ಆಯೋಗವು ಶೇ. 3.64ಕ್ಕೆ ಇಳಿಸಿದೆ. ಕನ್ನಡಿಗರಿಗೆ ಸಿಗಬೇಕಿದ್ದ 45,000 ಕೋಟಿ ರು. ತೆರಿಗೆ ಹಣ ವಂಚಿಸಿದವರು ನೀವೇ ಅಲ್ಲವೇ ಎಂದು ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾದ ನಷ್ಟ ತುಂಬಿಕೊಡಲು 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 5,495 ಕೋಟಿ ರು. ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ನಮ್ಮದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ, ಕೇಂದ್ರ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಶಿಫಾರಸನ್ನು ತಿರಸ್ಕರಿಸಿ, ನಾಡದ್ರೋಹ ಎಸಗಿದರು. ಮೋದಿ ಮುಖ ನೋಡಿ ಮತ ನೀಡಿ ಎನ್ನುವ ನಿಮ್ಮವರ ಅನ್ಯಾಯಕ್ಕೆ ಕನ್ನಡಿಗರು ಯಾರ ಬಳಿ ನ್ಯಾಯ ಕೇಳಬೇಕು ಎಂದು ಅವರು ಬಿಜೆಪಿ ನಾಯಕರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.