ಕಾಂಗ್ರೆಸ್ ಸರ್ಕಾರದ 5ನೇ ಹಾಗೂ ಕೊನೆಯ ಗ್ಯಾರಂಟಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಶಕ್ತಿ ಕೇಂದ್ರದಿಂದಲೇ ಮುಂಬರುವ ಲೋಕಸಭಾ ಚುನಾವಣೆಗೆ ಕೈ ಪಡೆ ಸಿದ್ಧತೆ ನಡೆಸಲು ಮುಂದಾಗಿದೆ.
ಶಿವಮೊಗ್ಗ (ಜ.04): ಕಾಂಗ್ರೆಸ್ ಸರ್ಕಾರದ 5ನೇ ಹಾಗೂ ಕೊನೆಯ ಗ್ಯಾರಂಟಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಶಕ್ತಿ ಕೇಂದ್ರದಿಂದಲೇ ಮುಂಬರುವ ಲೋಕಸಭಾ ಚುನಾವಣೆಗೆ ಕೈ ಪಡೆ ಸಿದ್ಧತೆ ನಡೆಸಲು ಮುಂದಾಗಿದೆ. ಚುನಾವಣೆಗೂ ಮುನ್ನವೇ ಐದನೇ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿ ಮಾಡಿದೆ. ಈಗ ಗ್ಯಾರಂಟಿ ಯೋಜನೆಗಳ ಕುರಿತು ವಿರೋಧ ಪಕ್ಷದ ಅಪಪ್ರಚಾರದ ನಡುವೆಯೂ ಲೋಕಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಐದನೇ ಗ್ಯಾರಂಟಿಯನ್ನೂ ಕೊಡಲು ಸಿದ್ಧತೆ ನಡೆಸಿದೆ.
ಜ.12ರಂದು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಯುವನಿಧಿಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ. ಗ್ಯಾರಂಟಿಗೆ ಚಾಲನೆ ನೀಡುವ ಸ್ಥಳ ಆಯ್ಕೆಯಲ್ಲೂ ರಾಜ್ಯ ಸರ್ಕಾರ ಜಾಣ ನಡೆ ಅನುಸರಿಸಿದೆ. ಕೇಂದ್ರ ಸ್ಥಾನ ಬೆಂಗಳೂರು ಬಿಟ್ಟು, ಜಿಲ್ಲಾ ಕೇಂದ್ರದಲ್ಲಿ ಚಾಲನೆ ನೀಡಲು ಭರ್ಜರಿ ತಯಾರಿ ನಡೆಸಿದೆ.
ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಸರಿಗಟ್ಟುವ ನಾಯಕರಲ್ಲ: ಶಾಸಕ ಜಿ.ಟಿ.ದೇವೇಗೌಡ
1 ಲಕ್ಷ ಯುವಜನ: ಮಲೆನಾಡು ಸೇರಿದಂತೆ ಮಧ್ಯ ಕರ್ನಾಟಕ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಪ್ಲಾನ್ ಹಾಕಿಕೊಂಡಿರುವ ಕೈ ಪಡೆ ಕೊನೆ ಗ್ಯಾರಂಟಿಯ ಚಾಲನೆಗೆ ಬೆಂಗಳೂರು ಬಿಟ್ಟು, ಶಿವಮೊಗ್ಗವನ್ನು ಆಯ್ಕೆ ಮಾಡಿಕೊಂಡಿದೆ. ಇದು ಗ್ಯಾರಂಟಿ ಯೋಜನೆ ಮೂಲಕ ಬಿಜೆಪಿ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ನ ಸೀಕ್ರೆಟ್ ಪ್ಲಾನ್ ಎನ್ನಲಾಗುತ್ತಿದೆ. ಬಿಜೆಪಿಯತ್ತ ಆಕರ್ಷಿತರಾಗಿರುವ ಯುವ ಸಮುದಾಯವನ್ನು ತನ್ನತ್ತ ಸೆಳೆಯಲು ಹೊಸ ತಂತ್ರ ರೂಪಿಸಿಕೊಂಡಿದೆ. ಹೀಗಾಗಿ, ಯುವನಿಧಿ ಯೋಜನೆ ಚಾಲನೆಗೆ ಕನಿಷ್ಠ 1 ಲಕ್ಷ ಯುವಜನರನ್ನು ಸೇರಿಸಿ, ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಯಿಂದಲೂ ಯುವಕರ ಕರೆತರಲು ಸಿದ್ಧತೆ ನಡೆಸಿದೆ. ಯುವನಿಧಿ ಯೋಜನೆಯಡಿ ಡಿಪ್ಲೊಮಾ- ಪದವೀಧರರ ಖಾತೆಗೆ ಪ್ರತಿ ತಿಂಗಳು ಹಣ ಹಾಕಲಿದೆ. ಈ ಮೂಲಕ ಯುವಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ.
ಜಿಲ್ಲೆಯಲ್ಲಿ ಬೀಡುಬಿಟ್ಟ ಸಚಿವರು: ರಾಜ್ಯ ಸರ್ಕಾರದ ಮೂವರು ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಶಿವಮೊಗ್ಗದಲ್ಲೇ ಬಿಡುಬಿಟ್ಟಿದ್ದಾರೆ. ಯುವನಿಧಿ ಯೋಜನೆಗೆ ಚಾಲನೆ ನೀಡುವ ಕುರಿತು ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಬುಧವಾರ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿರುವ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ , ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಕಾರ್ಯಕ್ರಮ ನಡೆಸುವ ಸ್ಥಳವಾದ ಫ್ರೀಡಂ ಪಾರ್ಕ್‌ಗೆ ಭೇಟಿ ಸ್ಥಳ ಪರಿಶೀಲನೆ ನಡೆಸಿದರು.
ಕಾರ್ಯಕ್ರಮಕ್ಕೆ ಜಿಲ್ಲೆಯ ಯುವನಿಧಿ ಯೋಜನೆಯ ವಿದ್ಯಾವಂತ ನಿರುದ್ಯೋಗಿ ಫಲಾನುಭವಿಗಳಲ್ಲದೇ, ಅಂತಿಮ ವರ್ಷಗಳ ಸೆಮಿಸ್ಟರ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಡಿಪ್ಲೊಮಾ, ಪದವಿ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ವ್ಯವಸ್ಥಿತ ಆಯೋಜನೆಗಾಗಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗುವುದು
- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ರೌಡಿಶೀಟರ್ ಪರ ಬಿಜೆಪಿ ಹೋರಾಡುತ್ತಿರುವುದು ನಾಚಿಕೆಗೇಡು : ಸಚಿವ ಎಂ.ಬಿ.ಪಾಟೀಲ್
ಯುವನಿಧಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಕರೆತರಲು ಸಾಕಷ್ಟು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಬಸ್‌ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದಲ್ಲದೇ, ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಹೆಸರು ಮತ್ತು ಮೊಬೈಲ್ ನಂಬರ್ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
- ಡಾ. ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ