Bharat Jodo Yatra: ಕೊಪ್ಪಳದಿಂದ 50 ಸಾವಿರ ಜನರು ಭಾಗಿ -ಶಿವರಾಜ ತಂಗಡಗಿ

By Kannadaprabha News  |  First Published Sep 25, 2022, 10:49 AM IST
  • ಭಾರತ ಏಕತಾ ಯಾತ್ರೆಗೆ ಕೊಪ್ಪಳದಿಂದ 50 ಸಾವಿರ ಜನರು
  • ಭಾರತ ಏಕತಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಶಿವರಾಜ ತಂಗಡಗಿ
  • ಪಾದಯಾತ್ರೆಯುದ್ದಕ್ಕೂ ದಾಖಲೆಯ ಜನರು ಭಾಗಿ

ಕೊಪ್ಪಳ (ಸೆ.25) : ಬಳ್ಳಾರಿಗೆ ಆಗಮಿಸುವ ಭಾರತ ಏಕತಾ ಯಾತ್ರೆಗೆ ಕೊಪ್ಪಳ ಜಿಲ್ಲೆಯಿಂದ ಸುಮಾರು 50 ಸಾವಿರ ಜನರು ಭಾಗಿಯಾಗುತ್ತಿದ್ದಾರೆ. ಪ್ರತಿನಿತ್ಯವೂ ರಾಜ್ಯದಲ್ಲಿನ ಪಾದಯಾತ್ರೆಯಲ್ಲಿ 25 ಸಾವಿರಕ್ಕೂ ಅಧಿಕ ಜನರು ಭಾಗವಹಿಸುತ್ತಾರೆ ಎಂದು ಕಾಂಗ್ರೆಸ್‌ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.

ಭಾರತ ಐಕ್ಯತಾ ಯಾತ್ರೆಗೆ ಸೋನಿಯಾ, ಪ್ರಿಯಾಂಕಾ ಭಾಗಿ: ಡಿ.ಕೆ.ಶಿವಕುಮಾರ್‌

Tap to resize

Latest Videos

undefined

ಭಾರತ ಏಕತಾ ಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದಿಂದ ಭಾರತ ಛಿದ್ರವಾಗುವಂತೆ ಆಗಿದೆ. ಜಾತಿ ಮತ್ತು ಧರ್ಮದ ವಿಷಬೀಜವನ್ನು ಬಿತ್ತಿ ಹಾಳು ಮಾಡಲಾಗುತ್ತಿದೆ. ಹೀಗಾಗಿ ದೇಶದ ಏಕತೆಗಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾರತ ಏಕತಾ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಇದಕ್ಕೆ ದೇಶವ್ಯಾಪಿ ಭರ್ಜರಿ ಬೆಂಬಲ ಸಿಗುತ್ತಿದೆ. ದೇಶದ ಏಕತೆಗಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸುಮಾರು 3875 ಕಿಲೋಮೀಟರ್‌ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅದು ಆರು ತಿಂಗಳ ಕಾಲ. ಇಂಥ ಯಾತ್ರೆಯೇ ದೇಶದಲ್ಲಿಯೇ ಪ್ರಥಮವಾಗಿದೆ ಎಂದರು. ಮತದಾರರು ರೊಚ್ಚಿಗೆದ್ದಿದ್ದಾರೆ. ಅವರೇ ಈ ಸರ್ಕಾರಗಳನ್ನು ಕಿತ್ತೊಗೆಯಲು ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಭಾರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ರಾಜ್ಯದಲ್ಲಿ 40 ಪರ್ಸೆಂಟೇಜ್‌ ಸರ್ಕಾರ ಇದೆ. ಇದನ್ನು ನಾವು ಹೇಳುತ್ತಿಲ್ಲ. ಗುತ್ತಿಗೆದಾರರು ದೂರು ನೀಡಿದ್ದಾರೆ. ಇಂಥ ಕೆಟ್ಟಸರ್ಕಾರವನ್ನು ಎಂದೂ ನೋಡಿರಲಿಲ್ಲ. ಉದ್ಯೋಗ ಇಲ್ಲ. ದೇಶದಲ್ಲಿ ನೆಮ್ಮದಿ ಇಲ್ಲ. ಇದರ ವಿರುದ್ಧ ದೊಡ್ಡ ಹೋರಾಟವಾಗಬೇಕಾಗಿದೆ. ಜನಜಾಗೃತಿಗೊಂಡಿದ್ದು, ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದರು.

ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಸಂತೋಷ ಲಾಡ್‌ ಮಾತನಾಡಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೇಶವನ್ನು ಬಿಜೆಪಿ ಒಡೆಯುತ್ತಿದೆ. ಇದರ ವಿರುದ್ಧ ಜಾಗೃತಿಯನ್ನು ಮೂಡಿಸಲು ದೇಶದಾದ್ಯಂತ ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಜೋಡೊ ಯಾತ್ರೆ ನಡೆಯುತ್ತಿದೆ. ಇದಕ್ಕೆ ವ್ಯಾಪಕ ಬೆಂಬಲ ನೀಡುವಂತೆ ಕೋರಿದರು. ರಾಹುಲ್‌ ಗಾಂಧಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವಂತೆ ಮನವಿ ಮಾಡಿದರು.

ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅದಾನಿ, ಅಂಬಾನಿಯಂಥವರೇ ಶ್ರೀಮಂತರಾಗುತ್ತಿದ್ದಾರೆ. 8 ಬಿಲಿಯನ್‌ ಇದ್ದ ಅದಾನಿ ಅವರ ಆಸ್ತಿ ಕೇವಲ ಮೂರು ವರ್ಷಗಳಲ್ಲಿ 141 ಬಿಲಿಯನ್‌ ಆಗಿದೆ. ದೇಶದಲ್ಲಿ ನೋಟ್‌ಬ್ಯಾನ್‌ ಮಾಡುವ ಮೂಲಕ ಮೋದಿ ಅವರು ದೇಶದ ಆರ್ಥಿಕ ಸ್ಥಿತಿಯ ಮೇಲೆ ಹೊಡೆತ ನೀಡಿದರು ಎಂದು ಕಿಡಿಕಾರಿದರು. ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರು ಪರಿತಪಿಸುವಂತಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಹಿರಿಯ ಮುಖಂಡರಾದ ಶಾಂತಣ್ಣ ಮುದಗಲ್‌, ಕೆ. ಬಸವರಾಜ ಹಿಟ್ನಾಳ, ಎಸ್‌.ಬಿ. ನಾಗರಳ್ಳಿ, ಕೆ.ಎಂ. ಸಯ್ಯದ್‌, ಗೂಳಪ್ಪ ಹಲಿಗೇರಿ, ಇಂದಿರಾ ಭಾವಿಕಟ್ಟಿ, ಅಮ್ಜಾದ್‌ ಪಟೇಲ್‌, ಎಚ್‌.ಎಂ.ಎಫ್‌. ಮುಲ್ಲಾ, ಕೃಷ್ಣಾರಡ್ಡಿ ಗಲಬಿ, ಕಾಟನ್‌ಪಾಶಾ, ಶೈಲಜಾ ಹಿರೇಮಠ, ಜ್ಯೋತಿ ಗೊಂಡಬಾಳ, ಸಾವಿತ್ರಿ ಗೋರಂಟ್ಲಿ, ರವಿ ಕುರಗೋಡ ಮೊದಲಾದವರು ಇದ್ದರು.

ಕಾಂಗ್ರೆಸ್‌ ಸೇರ್ಪಡೆ: ಬಹದ್ದೂರುಬಂಡಿ ಗ್ರಾಮ ಸೇರಿದಂತೆ ನಾನಾ ಗ್ರಾಮಗಳ ನೂರಾರು ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋಗೆ ಜನರಿಂದ ವ್ಯಾಪಕ ಸ್ಪಂದನೆ: ರಮಾನಾಥ ರೈ

click me!