ಲೆಕ್ಕಾಚಾರ ಬುಡಮೇಲು: ರಾಜ್ಯದಲ್ಲಿ ಸರ್ಕಾರ ರಚಿಸುವ ಬಿಜೆಪಿ ಪ್ಲ್ಯಾನ್ ಠುಸ್..!

Published : Dec 12, 2018, 11:58 AM IST
ಲೆಕ್ಕಾಚಾರ ಬುಡಮೇಲು: ರಾಜ್ಯದಲ್ಲಿ ಸರ್ಕಾರ ರಚಿಸುವ ಬಿಜೆಪಿ ಪ್ಲ್ಯಾನ್ ಠುಸ್..!

ಸಾರಾಂಶ

ಪಂಚರಾಜ್ಯ ಚುನಾವಣೆ ಫಲಿತಾಂಶ ನೋಡಿ ಆಪರೇಷನ್‌ ಕಮಲ ನಡೆಸುವ ಯೋಚನೆಯಲ್ಲಿದ್ದ ನಾಯಕರ ಲೆಕ್ಕಾಚಾರ ಬುಡಮೇಲಾಗಿದೆ. ಇದ್ರಿಂದ ರಾಜ್ಯದಲ್ಲಿ ಸರ್ಕಾರ ರಚಿಸುವ ಬಿಜೆಪಿ ಆಸೆಗೆ ತಣ್ಣೀರು..!

ಬೆಂಗಳೂರು, [ಡಿ.12]: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಅತೃಪ್ತ ಶಾಸಕರನ್ನು ಸೆಳೆದು ತಮ್ಮ ಸರ್ಕಾರ ರಚಿಸುವುದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಕನಸು ಕಾಣುತ್ತಿದ್ದ ಬಿಜೆಪಿಗೆ ಪಂಚ ರಾಜ್ಯಗಳ ಚುನಾವಣೆ ತಣ್ಣೀರು ಎರಚಿದಂತಾಗಿದೆ.

ರಾಜ್ಯ ಬಿಜೆಪಿಯ ನಾಯಕರು ಈ ಪಂಚ ರಾಜ್ಯಗಳ ಚುನಾವಣೆಯನ್ನೇ ಎದುರು ನೋಡುತ್ತಿದ್ದರು. ಇದರಲ್ಲಿ ಪಕ್ಷ ಮೇಲುಗೈ ಸಾಧಿಸಿದಲ್ಲಿ ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಮೂಲಕ ತಮ್ಮದೇ ಸರ್ಕಾರ ರಚಿಸಬೇಕು ಎಂಬ ದಿಕ್ಕಿನಲ್ಲಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದುದು ಗುಟ್ಟಾಗಿಯೇನೂ ಉಳಿದಿರಲಿಲ್ಲ.

ಬಿಜೆಪಿ ಗಪ್-ಚುಪ್: ರಾಜ್ಯ ಕಾಂಗ್ರೆಸ್‌ ಅತೃಪ್ತ ನಾಯಕರ ಆಟ ಬಂದ್‌..?

ಮೇಲಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅಸಮಾಧಾನಿತ ಶಾಸಕರಿಗೆ ರಾಜೀನಾಮೆ ನೀಡಿ ಹೊರಬಂದರೂ ಮತ್ತೆ ಗೆಲ್ಲುವುದು ಸವಾಲಾಗಿಯೇ ಕಾಡುತ್ತಿತ್ತು. 

ಅದಕ್ಕೆ ಪರಿಹಾರವನ್ನೂ ಒದಗಿಸಿದ್ದ ಬಿಜೆಪಿಯ ಕೆಲವು ಮುಖಂಡರು, ಲೋಕಸಭಾ ಚುನಾವಣೆಯ ಜೊತೆಗೆ ಉಪಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಬಲದೊಂದಿಗೆ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಸಲಹೆ ನೀಡಿದ್ದರು.

 ಬೇಕಾದರೆ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾದು ನೋಡಿ. ಇಲ್ಲಿ ಗೆದ್ದ ಮೇಲೆ ದೇಶಾದ್ಯಂತ ಬಿಜೆಪಿ ಅಲೆ ಎದ್ದು, ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ನೆರವಾಗುತ್ತದೆ ಎನ್ನುತ್ತಿದ್ದರು.

ಆಪರೇಷನ್‌ ಕಮಲ ಭೀತಿ ಕ್ಷೀಣ: ನಿಟ್ಟುಸಿರು ಬಿಟ್ಟ ಮೈತ್ರಿ ಸರ್ಕಾರ

ಮೇಲಾಗಿ ವಿವಾದದ ಕಿಡಿ ಹೊತ್ತಿಸಬಾರದು ಎಂಬ ಉದ್ದೇಶದಿಂದ ಈ ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಆಪರೇಷನ್‌ ಕಮಲ ಕೈಗೊಳ್ಳುವುದು ಬೇಡ ಎಂಬ ನಿರ್ದೇಶನವನ್ನೂ ರಾಜ್ಯ ಬಿಜೆಪಿ ನಾಯಕರಿಗೆ ವರಿಷ್ಠರು ನೀಡಿದ್ದರು ಎನ್ನಲಾಗಿದೆ.

ಹೀಗಾಗಿ, ರಾಜ್ಯ ಬಿಜೆಪಿ ನಾಯಕರು ಫಲಿತಾಂಶ ಹೊರಬೀಳುವುದನ್ನೇ ಕಾದು ಕುಳಿತಿದ್ದರು. ತೆರೆಮರೆಯಲ್ಲಿ ಎಲ್ಲದಕ್ಕೂ ಸಜ್ಜಾಗಿದ್ದರು. ಆದರೆ, ಮಂಗಳವಾರ ಹೊರಬಿದ್ದ ಫಲಿತಾಂಶ ಬಿಜೆಪಿ ನಾಯಕರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದಂತಾಗಿದೆ.

ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು ಮಧ್ಯಾಹ್ನದ ನಂತರ ಸಪ್ಪೆ ಮೋರೆ ಹಾಕಿದ್ದರು.

ಸರ್ಕಾರ ರಚಿಸುವುದಿರಲಿ. ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿಯುವುದರಿಂದ ಹೇಗೆ ಎದುರಿಸಬೇಕು ಎಂಬ ಚಿಂತೆಯ ಕಾರ್ಮೋಡ ಪಕ್ಷದ ಪಾಳೆಯದಲ್ಲಿ ಕವಿದಂತೆ ಕಂಡು ಬಂತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ