
ಬೆಂಗಳೂರು (ಜು.01): ರಾಜ್ಯದಲ್ಲಿ ‘ಶಕ್ತಿ’ ಯೋಜನೆಯು ಯಶ ಕಂಡಿದ್ದು, ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ ಸೇರಿದಂತೆ ನಾಲ್ಕೂ ನಿಗಮಗಳ ಆದಾಯದಲ್ಲಿ ಸರಾಸರಿ 4.41 ಕೋಟಿ ರು. ಹೆಚ್ಚಳವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಕ್ತಿ ಯೋಜನೆ ಜಾರಿ ನಂತರ ರಾಜ್ಯದ ನಾಲ್ಕೂ ನಿಗಮಗಳ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಶಕ್ತಿ ಯೋಜನೆಗೂ ಮುನ್ನ ನಿತ್ಯ ಸರಾಸರಿ 84.91 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಅದೇ ಈಗ ಸರಾಸರಿ 1.09 ಕೋಟಿ ಜನರು ಸಂಚರಿಸುತ್ತಿದ್ದಾರೆ.
ಆದಾಯದಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಯೋಜನೆ ಜಾರಿಗೂ ಮುನ್ನ ಪ್ರತಿದಿನ ಸರಾಸರಿ 24.48 ಕೋಟಿ ರು. ಆದಾಯ ಬರುತ್ತಿತ್ತು. ಈಗ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯವೂ ಸೇರಿದಂತೆ ನಿತ್ಯ ಸರಾಸರಿ 28.89 ಕೋಟಿ ರು. ಬರುತ್ತಿದ್ದು, ಒಟ್ಟಾರೆ 4.41 ಕೋಟಿ ರು. ಆದಾಯ ಹೆಚ್ಚಾಗುವಂತಾಗಿದೆ. ಅಲ್ಲದೆ ಪ್ರಸ್ತುತ ಮಹಿಳಾ ಪ್ರಯಾಣಿಕರನ್ನು ಹೊರತುಪಡಿಸಿ ಇತರ ಪ್ರಯಾಣಿಕರ ಸರಾಸರಿ ಆದಾಯ 16.87 ಕೋಟಿ ರು. ಬರುತ್ತಿದೆ ಎಂದರು.
ಮಳೆ ಕೊರತೆ ಹಿನ್ನೆಲೆ ಕುಡಿವ ನೀರು ಸಮಸ್ಯೆಯಾಗದಿರಲಿ: ಶಾಸಕ ಬಿ.ವೈ.ವಿಜಯೇಂದ್ರ
ಸಿಬ್ಬಂದಿಗೆ ನಿಗದಿತ ಅವಧಿಯಲ್ಲಿ ವೇತನ: ಶಕ್ತಿ ಯೋಜನೆ ಜಾರಿಯಿಂದ ಸಿಬ್ಬಂದಿ ವೇತನ ಪಾವತಿಯಲ್ಲಿ ತೊಂದರೆಯಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಎಲ್ಲವೂ ಲೆಕ್ಕಾಚಾರದಂತೆಯೇ ನಡೆಯುತ್ತಿದ್ದು, ಸಿಬ್ಬಂದಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿಸಲಾಗುವುದು. ಯಾವುದೇ ಸಾಲ ಮಾಡದೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗಲಾಗುವುದು ಎಂದರು.
4 ಸಾವಿರ ಬಸ್‌ಗಳ ಖರೀದಿ: ಸದ್ಯ ನಾಲ್ಕು ಸಾವಿರ ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿನ 25 ಸಾವಿರ ಹಳ್ಳಿಗಳ ಪೈಕಿ 300 ಹಳ್ಳಿಗಳಿಗೆ ಮಾತ್ರ ಸರ್ಕಾರಿ ಸಾರಿಗೆ ಬಸ್ ಸೇವೆ ನೀಡಲಾಗುತ್ತಿಲ್ಲ. ಉಳಿದಂತೆ ಎಲ್ಲ ಹಳ್ಳಿಗಳಿಗೂ ಬಸ್ ಸೇವೆ ನೀಡಲಾಗುತ್ತಿದೆ. ಸದ್ಯ ನಾಲ್ಕೂ ನಿಗಮಗಳಲ್ಲಿ 24 ಸಾವಿರ ಬಸ್‌ಗಳಿವೆ. ಅವುಗಳಲ್ಲಿ ಹಲವು ಬಸ್‌ಗಳು ಹಳತಾಗಿದ್ದು ಅವನ್ನು ಬದಲಿಸಬೇಕಿದೆ. ಸಾರಿಗೆ ನಿಗಮಗಳ ಷೆಡ್ಯೂಲ್ ಆಧಾರದಲ್ಲಿ 34 ಸಾವಿರದಿಂದ 36 ಸಾವಿರ ಬಸ್‌ಗಳ ಅವಶ್ಯಕತೆಯಿದೆ ಎಂದು ಶ್ರೀನಿವಾಸಮೂರ್ತಿ ವರದಿಯಲ್ಲಿ ತಿಳಿಸಲಾಗಿದೆ. ಅದಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ವಿವರಿಸಿದರು.
ಪಕ್ಷದ ವಿರುದ್ಧ ಬಹಿರಂಗ ಟೀಕೆ ಸರಿಯಲ್ಲ: ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಸಲಹೆ
ಶಕ್ತಿ ಯೋಜನೆಗೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ನಿಗದಿ ಮಾಡಿಲ್ಲ. ಆದರೆ, ಜುಲೈ 7ರಂದು ಮಂಡಿಸಲಾಗುವ ರಾಜ್ಯ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಮೀಸಲಿಡಲಾಗುವುದು. ಹೀಗಾಗಿ ಆಗಸ್ಟ್‌ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೆ, ಜೂನ್ ತಿಂಗಳ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ಮೊತ್ತವನ್ನು ರಾಜ್ಯ ಸರ್ಕಾರ ಕೊಡುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ಆದರೂ, ನಿಗಮಗಳು ಆ ಅನುದಾನ ಕಾಯದೆ ಖರ್ಚನ್ನು ನಿಭಾಯಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿವೆ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.