ಲೋಕಸಭೆ ಚುನಾವಣೆ ಹಿನ್ನೆಲೆ: ಲಿಂಗಾಯತರ ಮತ ಸೆಳೆಯಲು ಬಿಎಸ್‌ವೈ ಪುತ್ರ ರಾಘವೇಂದ್ರಗೆ ಕೇಂದ್ರ ಮಂತ್ರಿ ಸ್ಥಾನ?

Published : Jul 01, 2023, 04:23 AM IST
ಲೋಕಸಭೆ ಚುನಾವಣೆ ಹಿನ್ನೆಲೆ: ಲಿಂಗಾಯತರ ಮತ ಸೆಳೆಯಲು ಬಿಎಸ್‌ವೈ ಪುತ್ರ ರಾಘವೇಂದ್ರಗೆ ಕೇಂದ್ರ ಮಂತ್ರಿ ಸ್ಥಾನ?

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಚರ್ಚೆ ನಡೆದಿದ್ದು, ಕರ್ನಾಟಕದಿಂದ ಒಬ್ಬರು ಸಂಪುಟಕ್ಕೆ ಸೇರ್ಪಡೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ. 

ಬೆಂಗಳೂರು (ಜು.01): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಚರ್ಚೆ ನಡೆದಿದ್ದು, ಕರ್ನಾಟಕದಿಂದ ಒಬ್ಬರು ಸಂಪುಟಕ್ಕೆ ಸೇರ್ಪಡೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಕಹಿ ಅನುಭವದ ಆಧಾರದ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ವಿಶ್ವಾಸವನ್ನು ಲೋಕಸಭಾ ಚುನಾವಣೆಯಲ್ಲಾದರೂ ಕಳೆದು ಹೋಗದಂತೆ ಹಿಡಿದಿಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಲೆಕ್ಕಾಚಾರ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಪುತ್ರರೂ ಆಗಿರುವ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸದ್ಯ ಒಟ್ಟು ಐದು ಮಂದಿ (ಮೂವರು ಲೋಕಸಭಾ ಸದಸ್ಯರು ಹಾಗೂ ಇಬ್ಬರು ರಾಜ್ಯಸಭಾ ಸದಸ್ಯರು) ಕೇಂದ್ರದ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಹ್ಲಾದ್‌ ಜೋಶಿ, ನಿರ್ಮಲಾ ಸೀತಾರಾಮನ್‌, ರಾಜೀವ್‌ ಚಂದ್ರಶೇಖರ್‌, ಎ.ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಕೇಂದ್ರದ ಸಚಿವರು. ಈ ಪೈಕಿ ಭಗವಂತ ಖೂಬಾ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದರೆ, ಅವರು ಸಂಪುಟ ದರ್ಜೆ ಸಚಿವರಲ್ಲ. ಮೇಲಾಗಿ ಖೂಬಾ ಅವರ ಕಾರ್ಯವೈಖರಿ, ಸಾಧನೆ ಬಗ್ಗೆ ಪಕ್ಷದ ವರಿಷ್ಠರು ಅಷ್ಟೇನೂ ಸಮಾಧಾನ ಹೊಂದಿಲ್ಲ. ಮೇಲಾಗಿ ಸಚಿವರಾದ ಬಳಿಕ ಲಿಂಗಾಯತ ಸಮುದಾಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಗಳಿಸುವಲ್ಲಿ ಖೂಬಾ ಸಫಲರಾಗಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಪಕ್ಷದ ವಿರುದ್ಧ ಬಹಿರಂಗ ಟೀಕೆ ಸರಿಯಲ್ಲ: ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಸಲಹೆ

ಹೆಚ್ಚೂ ಕಡಮೆ ಕಳೆದ 2004ರಿಂದ ಇತ್ತೀಚಿನ ವಿಧಾನಸಭಾ ಚುನಾವಣೆಗೂ ಮೊದಲು ನಡೆದ ಹಲವು ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯನ್ನು ಅಪ್ಪಿಕೊಂಡಿತ್ತು. ಲಿಂಗಾಯತರು ಬಿಜೆಪಿಯನ್ನು ತೊರೆಯಲಾರರು ಎಂಬ ಅತಿ ವಿಶ್ವಾಸದಲ್ಲೇ ಬಿಜೆಪಿ ವರಿಷ್ಠರು ಇದ್ದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಆ ವಿಶ್ವಾಸಕ್ಕೆ ದೊಡ್ಡ ಹೊಡೆತ ಬಿತ್ತು. ಅದುವರೆಗೆ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಮತ್ತು ನಂತರದ ಬೆಳವಣಿಗೆಗಳ ಪಾಲೂ ಇದರಲ್ಲಿ ದೊಡ್ಡದು. ಇದಕ್ಕೆ ಪೂರಕವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತಿತರರು ಬಿಜೆಪಿ ತೊರೆದಿದ್ದು ಸಮುದಾಯದಲ್ಲಿ ಪಕ್ಷದ ಮೇಲಿನ ನಂಬಿಕೆ ಕುಸಿಯಿತು. ಅದರ ಪರಿಣಾಮ ಚುನಾವಣಾ ಫಲಿತಾಂಶದಲ್ಲೂ ಸ್ಪಷ್ಟವಾಗಿ ಗೋಚರಿಸಿತು.

ಜಾತಿಗೊಂದು ಜಯಂತಿ ಮಾಡಿ ತಪ್ಪು ಗ್ರಹಿಕೆ ಬೇರೂರುತ್ತಿದೆ: ಶಾಸಕ ಜಿ.ಟಿ.ದೇವೇಗೌಡ

ಹೀಗಾಗಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 28 ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ವರಿಷ್ಠರಿಗೆ ಈಗ ಆತಂಕ ಶುರುವಾಗಿದೆ. ಈಗ ಕೇಂದ್ರದ ಸಚಿವ ಸಂಪುಟ ಪುನಾರಚನೆ ಮಾಡುವುದೇ ಆದಲ್ಲಿ ಲಿಂಗಾಯತ ಸಮುದಾಯದ ವಿಶ್ವಾಸವನ್ನು ಮತ್ತೆ ಗಳಿಸುವ ರೀತಿಯಲ್ಲಿ ಯಡಿಯೂರಪ್ಪ ಪುತ್ರ ಹಾಗೂ ಶಿವಮೊಗ್ಗ ಸಂಸದ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದರೆ ಅದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಬಹುದು ಎಂಬ ಅನಿಸಿಕೆ ವರಿಷ್ಠರಿಗೆ ತಲುಪಿದೆ. ಇದು ಎಷ್ಟರ ಮಟ್ಟಿದೆ ಅನುಷ್ಠಾನಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ