ಭಾರತ್‌ ಜೋಡೋ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮ: ಪಿ.ಚಿದಂಬರಂ

By Kannadaprabha NewsFirst Published Sep 8, 2022, 3:00 AM IST
Highlights

ದೇಶ ವಿಭಜಿಸುವ ಶಕ್ತಿಗಳ ವಿರುದ್ಧ ಕಾಂಗ್ರೆಸ್‌ ಹೋರಾಟ, ದೇಶದ ರಾಜಕೀಯ ಇತಿಹಾಸಕ್ಕೆ ಯಾತ್ರೆಯಿಂದ ತಿರುವು

ಕನ್ಯಾಕುಮಾರಿ(ಸೆ.08):  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಚಾಲನೆ ನೀಡಿದ ‘ಭಾರತ್‌ ಜೋಡೋ ಯಾತ್ರೆ’ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಇದು ದೇಶವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಜಯಗಳಿಸುವವರೆಗೂ ನಡೆಯಲಿದೆ ಎಂದು ಕಾಂಗ್ರೆಸ್‌ ಹೇಳಿದೆ. ಅಲ್ಲದೆ ಈ ಯಾತ್ರೆ ದೇಶದ ರಾಜಕೀಯ ಇತಿಹಾಸದಲ್ಲೊಂದು ಮಹತ್ವದ ತಿರುವಾಗಿದ್ದು, ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ‘ನಮ್ಮ ಭಾರತ್‌ ಜೋಡೋ ಯಾತ್ರೆಯನ್ನು ಟೀಕಿಸುತ್ತಿರುವವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ಪಾತ್ರ ವಹಿಸಿರಲಿಲ್ಲ. ಈಗ ನಡೆಯುತ್ತಿರುವ 2ನೇ ಸ್ವಾತಂತ್ರ್ಯ ಹೋರಾಟದಲ್ಲೂ ನಿಮ್ಮ (ಬಿಜೆಪಿ) ಪಾತ್ರ ಇಲ್ಲ. ದೇಶವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಗೆಲ್ಲುವವರೆಗೂ ಈ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದ್ದಾರೆ.

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi

ಪಕ್ಷದ ಇನ್ನೊಬ್ಬ ಇರಿಯ ನಾಯಕ ಜೈರಾಂ ರಮೇಶ್‌ ಮಾತನಾಡಿ , ‘2022ರ ಸೆ.7ರಂದು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ, ಅತ್ಯಂತ ಸುದೀರ್ಘ ಪಾದಯಾತ್ರೆಗೆ ಚಾಲನೆ ನೀಡುತ್ತಿದೆ. ಇದು ಭಾರತದ ರಾಜಕೀಯಕ್ಕೆ ತಿರುವು ನೀಡುವ ಹಂತ. ಇದು ಹೊಸ ಅಧ್ಯಾಯದ ಆರಂಭ. ದೇಶ ಮತ್ತು ಪಕ್ಷ ಎರಡನ್ನೂ ಪುನರುಜ್ಜೀವನಗೊಳಿಸುವ ಮಹತ್ವದ ನಿರ್ಣಾಯಕ ಘಟ್ಟ. ಈ ಯಾತ್ರೆ ಬಗ್ಗೆ ದೇಶಾದ್ಯಂತ ಇರುವ ಪಕ್ಷದ ಕಾರ್ಯಕರ್ತರಲ್ಲಿ ಭಾರೀ ಉತ್ಸಾಹವಿದೆ. ಇದು ಸ್ವತಂತ್ರ್ಯ ಭಾರತದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಜನಸಮೂಹವನ್ನು ಒಗ್ಗೂಡಿಸುವ ಕಾರ್ಯಕ್ರಮ’ ಎಂದು ಹೇಳಿದ್ದಾರೆ.

ಜಿ23 ಬೆಂಬಲ: 

ಈ ನಡುವೆ ಪಕ್ಷ ಆಯೋಜಿಸಿರುವ ಯಾತ್ರೆಗೆ ಜಿ23 ನಾಯಕರು ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಆನಂದ್‌ ಶರ್ಮಾ, ಈ ಯಾತ್ರೆ ಪ್ರಜಾಪ್ರಭುತ್ವದ ಸಮಗ್ರ ಒಳಗೊಳ್ಳುವಿಕೆ ಮತ್ತು ಐಕ್ಯತೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಇದರ ನೇತೃತ್ವ ವಹಿಸಿರುವ ರಾಹುಲ್‌ ಗಾಂಧಿಗೆ ಶುಭ ಹಾರೈಕೆಗಳು ಎಂದಿದ್ದಾರೆ.
 

click me!