ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 22 ಸ್ಥಾನ: ಸಚಿವ ಈಶ್ವರ ಖಂಡ್ರೆ

By Govindaraj SFirst Published Feb 7, 2024, 8:03 AM IST
Highlights

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಗಳೂರು (ಫೆ.07): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭರವಸೆ ನೀಡಿದಂತೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರು ಆಶೀರ್ವಾದ ಮಾಡಲಿದ್ದಾರೆ ಎಂದರು. ರಾಜ್ಯದಲ್ಲಿ ಬಹಳಷ್ಟು ಯೋಗ್ಯ, ಅರ್ಹ ಅಭ್ಯರ್ಥಿಗಳಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಕ್ಷವು ಯಾರನ್ನೇ ಕಣಕ್ಕಿಳಿಸಿದರೂ ಗೆಲ್ಲಿಸುತ್ತೇನೆ ಎಂದು ಹೇಳಿದರು.

ಸವದಿ ಬಿಜೆಪಿಗೆ ಹೋಗಲ್ಲ: ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದಾರೆ. ಆದರೆ ಲಕ್ಷ್ಮಣ ಸವದಿ ಆಗಲೀ, ಬೇರೆ ಯಾರೂ ಕೂಡ ಹೋಗಲ್ಲ. ಎಲ್ಲರೂ ಕಾಂಗ್ರೆಸ್ ಜತೆಗಿದ್ದಾರೆ. ಫೆಬ್ರವರಿ 17ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಭೆ ನಡೆಯಲಿದ್ದು, ಪಕ್ಷದ ಗೆಲುವಿಗಾಗಿ ನಾವೆಲ್ಲರೂ ಶ್ರಮಿಸುತ್ತಿದ್ದೇವೆ ಎಂದರು.

ಸರ್ಕಾರಿ ದುಡ್ಡಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ: ಕೆ.ಎಸ್.ಈಶ್ವರಪ್ಪ

ಕೇಂದ್ರದಿಂದ ಘೋರ ಅನ್ಯಾಯ: ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನ ನೀಡದೆ ತಾರತಮ್ಯ, ಘೋರ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ. ಕೇಂದ್ರ ಸರ್ಕಾರ ಈ ಅನ್ಯಾಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲು ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಖಂಡ್ರೆ ಹೇಳಿದರು. ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ ಮತ್ತು 3000 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಅಪರೂಪದ ಕಡಲಾಮೆ ಮೊಟ್ಟೆ ರಕ್ಷಣಾ ಸ್ಥಳಕ್ಕೆ ಭೇಟಿ: ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಅರಣ್ಯ ಇಲಾಖೆ ಸಂರಕ್ಷಣೆ ಮಾಡಿರುವ ಅತ್ಯಪರೂಪದ ಆಲೀವ್ ರೆಡ್ ಲೇ ಆಮೆಯ ಮೊಟ್ಟೆಗಳ ಸ್ಥಳವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪರಿಶೀಲನೆ ಮಾಡಿದರು. ತಣ್ಣೀರುಬಾವಿ ಬೀಚ್‌ನಲ್ಲಿ ಅಪರೂಪದ ಆಲೀವ್ ರೆಡ್ ಲೇ ಆಮೆ 1985ರ ಬಳಿಕ ಇದೇ ಮೊದಲ ಬಾರಿಗೆ ಸಾವಿರಾರು ಮೊಟ್ಟೆ ಇಟ್ಟಿದ್ದು, ಇದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಈ ಮೊಟ್ಟೆಗಳು ಮರಿಯಾದ ಬಳಿಕ ಸುರಕ್ಷಿತವಾಗಿ ಕಡಲಿಗೆ ಬಿಡುವಂತೆ ಸೂಚಿಸಿದರು.

ಈ ಅಪರೂಪದ ಆಮೆಗಳ ಮೊಟ್ಟೆ ನಾಯಿ ಮತ್ತು ಪಕ್ಷಿಗಳ ಪಾಲಾಗದಂತೆ ಸುತ್ತಲೂ ಕಟ್ಟೆ ಕಟ್ಟಿ ಸಂರಕ್ಷಿಸಿರುವ ಅರಣ್ಯ ಸಿಬ್ಬಂದಿಯ ಕಾಳಜಿ ಮತ್ತು ತಣ್ಣೀರುಬಾವಿ ಕಡಲ ತೀರವನ್ನು ಅತ್ಯಂತ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಕೆ.ಎಸ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಳನ್ ಮತ್ತಿತರರು ಇದ್ದರು.

ತೆರಿಗೆ ನ್ಯಾಯಕ್ಕಾಗಿ ಚಲೋ ದಿಲ್ಲಿ: ಸಿದ್ದು ನೇತೃತ್ವದಲ್ಲಿ #ನನ್ನತೆರಿಗೆನನ್ನಹಕ್ಕು ಹ್ಯಾಶ್‌ಟ್ಯಾಗ್‌ ಅಡಿ ಹೋರಾಟ

ಕಡಲಾಮೆ ಮೊಟ್ಟೆ ಪತ್ತೆಹಚ್ಚಿದ ಮೀನುಗಾರರಿಗೆ ಬಹುಮಾನ- ತಣ್ಣೀರುಬಾವಿಯ ಕಡಲ ತೀರದಲ್ಲಿ ಅಪರೂಪದ ಕಡಲಾಮೆ ಮೊಟ್ಟೆ ಇಟ್ಟಿರುವುದನ್ನು ಪತ್ತೆ ಮಾಡಿ ಸಂರಕ್ಷಣೆಗೆ ನೆರವಾದ ಸಸಿಹಿತ್ಲು ಗ್ರಾಮದ ಮೀನುಗಾರರಾದ ಆನಂದ ಕೋಟ್ಯಾನ್ ಮತ್ತು ವಾಸು ಕೋಟ್ಯಾನ್ ಅವರಿಗೆ ಸಚಿವರು 5 ಸಾವಿರ ರು.ಗಳ ನಗದಿನೊಂದಿಗೆ ಪ್ರಶಂಸಾ ಪತ್ರ ಪ್ರದಾನ ಮಾಡಿದರು.

click me!