ಕನ್ನಡ ರಾಜ್ಯೋತ್ಸವ ದಿನದಂದು ಜೆಡಿಎಸ್‌ ಪಂಚರತ್ನ ಯಾತ್ರೆ: ಎಚ್‌ಡಿಕೆ

Published : Sep 27, 2022, 02:45 AM IST
ಕನ್ನಡ ರಾಜ್ಯೋತ್ಸವ ದಿನದಂದು ಜೆಡಿಎಸ್‌ ಪಂಚರತ್ನ ಯಾತ್ರೆ: ಎಚ್‌ಡಿಕೆ

ಸಾರಾಂಶ

ಕನ್ನಡಿಗರ ಪಾಲಿನ ಪುಣ್ಯದಿಂದ ಕರ್ನಾಟಕ ರಾಜ್ಯೋತ್ಸವ ದಿನವಾದ ನ.1ರಂದು ಜೆಡಿಎಸ್‌ನ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು (ಸೆ.27): ಕನ್ನಡಿಗರ ಪಾಲಿನ ಪುಣ್ಯದಿಂದ ಕರ್ನಾಟಕ ರಾಜ್ಯೋತ್ಸವ ದಿನವಾದ ನ.1ರಂದು ಜೆಡಿಎಸ್‌ನ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸೋಮವಾರ ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಥಯಾತ್ರೆ ಕಳೆದ ತಿಂಗಳು ಪ್ರಾರಂಭವಾಗಬೇಕಿತ್ತು. ಆದರೆ, ಮಳೆಯಿಂದ ಮುಂದೂಡಿಕೆ ಮಾಡಲಾಗಿತ್ತು. ಸ್ವತಂತ್ರ ಸರ್ಕಾರ ಬಂದರೆ ಏನು ಮಾಡುತ್ತೇವೆ ಎನ್ನುವುದನ್ನು ಜನರಿಗೆ ಹೇಳುತ್ತೇವೆ. 

ಕೆಲ ತಿಂಗಳ ಹಿಂದೆ ಯಶಸ್ವಿಯಾಗಿ ಜನತಾ ಜಲಧಾರೆ ಸಮಾವೇಶ ಮಾಡಿದ್ದೆವು. ನೀರಾವರಿ ಯೋಜನೆಗಳ ಜಾರಿಗೆ ಕೊನೆ ಪಕ್ಷ 3-4 ಲಕ್ಷ ಕೋಟಿ ರು. ಬೇಕಾಗಿದೆ. ಅದಕ್ಕೆ ಯಾವ ರೀತಿಯ ದೂರದೃಷ್ಟಿಇದೆ ಎನ್ನುವುದನ್ನು ಜನತೆಗೆ ತಿಳಿಸುತ್ತೇವೆ ಎಂದು ತಿಳಿಸಿದರು. ಇತ್ತೀಚೆಗೆ ಸಿ.ಎಂ.ಇಬ್ರಾಹಿಂ ಅವರು ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ರಾಜ್ಯ ಕಾರ್ಯಕಾರಿಣಿಗೆ ಹೊಸ ಸದಸ್ಯರನ್ನು ನೇಮಕ ಮಾಡಲಾಗಿತ್ತು. 27 ಪದಾಧಿಕಾರಿ ಮತ್ತು 40 ಹೆಚ್ಚುವರಿ ಪದಾಧಿಕಾರಿಗಳ ನೇಮಕ ಆಗಿತ್ತು. ಈಗ ಅವರೆಲ್ಲರ ಜತೆ ಚರ್ಚೆ ನಡೆಸಲಾಗಿದೆ. ಅವರೆಲ್ಲರಿಗೂ ಮುಂದಿನ ಆರು ತಿಂಗಳ ಕಾಲ ಹೇಗೆ ಕೆಲಸ ಮಾಡಬೇಕು ಎಂಬುದರ ನಿರ್ದೇಶನ ನೀಡಿದ್ದೇವೆ. ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಆಯ್ಕೆಯಾದ ಮೇಲೆ ಕೆಲವರಿಗೆ ಜಿಲ್ಲಾ ಉಸ್ತುವಾರಿ ನೀಡುವ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ನೇಮಕ ಮಾಡುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಲಾಪ ಮುಗಿಯುತ್ತಿದ್ದಂತೆ ವಿದ್ಯುತ್‌ ದರ ಏರಿಕೆ: ಎಚ್‌ಡಿಕೆ ಕಿಡಿ

ಅ.8ರಂದು ಜನತಾ ಮಿತ್ರ ಸಮಾರೋಪ: ಹಲವು ಬಾರಿ ಮುಂದೂಡಿಕೆಯಾಗಿದ್ದ ಪಕ್ಷದ ಜನತಾ ಮಿತ್ರ ಸಮಾರೋಪ ಸಮಾರಂಭವನ್ನು ಬರುವ ಅ.8ರಂದು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಉದ್ದಗಲಕ್ಕೂ ಜನತಾಮಿತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಲವು ಕಾರಣದಿಂದ ಸಮಾರೋಪ ಸಮಾರಂಭ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಈಗ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಜನತೆಗೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ನಮಗೊಂದು ಸಲ ಅವಕಾಶ ನೀಡಿ: ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿ ನಮಗೊಂದು ಅವಕಾಶ ನೀಡಿ. ನಿಮ್ಮ ತೆರಿಗೆ ಹಣದಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತೇನೆ. ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡದಿದ್ದರೆ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಜೆಡಿಎಸ್‌ ಜನತಾ ಜಲಧಾರೆ ನಾಡಿನ 30 ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ತೆಲಂಗಾಣ ರಾಜ್ಯದ ಕಾಳೇಶ್ವರದಲ್ಲಿ ಆಣೆಕಟ್ಟು 120 ಕೋಟಿಗಳಲ್ಲಿ ನಿರ್ಮಿಸಿ 23 ಜಿಲ್ಲೆಗಳಲ್ಲಿ ನದಿಯ ನೀರಿನ ಬಳಕೆ ಆಗುತ್ತಿದೆ. ಅದೇ ಮಾದರಿಯಲ್ಲಿ ನೀರಾವರಿ ಸೌಲಭ್ಯವನ್ನು ನೀಡಲಾಗುವುದು. ಜೆಡಿಎಸ್‌ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ, ನೀರಾವರಿ ಯೋಜನೆಗಳಗೆ ಹೆಚ್ಚು ಮಹತ್ವ ಕೊಡಲಾಗುವುದು ಎಂದರು.

ಎಚ್‌ಡಿಕೆ ಆರೋಪ ಸುಳ್ಳು, ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನಲ್ಲಿ ಅಕ್ರಮ ಆಗಿಲ್ಲ: ಸಚಿವ ಅಶ್ವತ್ಥ್‌

ಏನಿದು ಪಂಚರತ್ನ?: ಉಚಿತ ಶಿಕ್ಷಣ, ಆರೋಗ್ಯ, ಯುವಜನತೆಗೆ ಸ್ವಉದ್ಯೋಗ, ರೈತರ ಉನ್ನತಿ, ವಸತಿ ಸೌಕರ್ಯ ಎಂಬ ಐದು ಅಂಶಗಳು ‘ಪಂಚರತ್ನ’ಗಳಾಗಿವೆ. ಈ ಹಿಂದೆಯೂ ಈ ಹೆಸರಲ್ಲಿ ಯಾತ್ರೆ ನಡೆದಿತ್ತು. ಮುಂದೆಯೂ ಇವುಗಳನ್ನು ಇಟ್ಟುಕೊಂಡು ಜನತೆ ಬಳಿ ಹೋಗಿ ರಾಜ್ಯಾದ್ಯಂತ ಮತ ಕೇಳಲು ಆರಂಭಿಸಲಾಗುವುದು. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ವೈಫಲ್ಯಗಳನ್ನು ಜನರ ಮುಂದಿಡುವುದರ ಜತೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಕ್ಕೆ ದ್ರೋಹ ಮಾಡಿವೆ ಎಂದು ತಿಳಿಸಲು ರಣತಂತ್ರ ರೂಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ