ರಾಜ್ಯ ಸರ್ಕಾರ ನಗರದ ಸುಮಾರು ಮೂರು ಸಾವಿರ ಕೋಟಿ ರುಪಾಯಿ ಮೌಲ್ಯದ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಲೀಸ್‌ಗೆ ಕೊಡುವ ಮೂಲಕ ಪರೋಕ್ಷ ಮಾರಾಟಕ್ಕೆ ಮುಂದಾಗಿದೆ.
ಬೆಂಗಳೂರು (ಮೇ.08): ರಾಜ್ಯ ಸರ್ಕಾರ ನಗರದ ಸುಮಾರು ಮೂರು ಸಾವಿರ ಕೋಟಿ ರುಪಾಯಿ ಮೌಲ್ಯದ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಲೀಸ್‌ಗೆ ಕೊಡುವ ಮೂಲಕ ಪರೋಕ್ಷ ಮಾರಾಟಕ್ಕೆ ಮುಂದಾಗಿದೆ. ಇದರ ಹಿಂದೆ 200 ಕೋಟಿ ರು.ಗೂ ಮೇಲ್ಪಟ್ಟು ಕಿಕ್ ಬ್ಯಾಕ್ ಇದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆಪಾದನೆ ಮಾಡಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಎಚ್‌ಎಸ್‌ಆರ್‌ಲೇಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ರ್ಆ.ಟಿ.ನಗರ, ಸದಾಶಿವನಗರದ ಬಿಡಿಎ ಸ್ವತ್ತುಗಳನ್ನು ನುಂಗಣ್ಣಗಳು ನುಂಗಲು ಹೊರಟಿದ್ದಾರೆ. 2013-18ರಲ್ಲಿ ಇದೇ ಮಾದರಿಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಇದರ ವಿರುದ್ಧ ಬೆಂಗಳೂರಿನ ಜನರು ಪ್ರತಿಭಟನೆ ಮಾಡಿದ ಬಳಿಕ ನಿಂತು ಹೋಗಿತ್ತು ಎಂದರು. ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಬೇರೆ ಮಾರ್ಗ ನೋಡಲಿ. ಕೂಡಲೇ ಈ ಟೆಂಡರ್ ರದ್ದುಪಡಿಸಲಿ, ಇಲ್ಲವಾದರೆ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಈ ಕಡತ ಬಂದಿತ್ತು. ಇದು ಲೂಟಿ ಮಾಡುವ ಸ್ಟೀಮ್ ಎಂದಿದ್ದಕ್ಕೆ ಯಡಿಯೂರಪ್ಪ ಅದನ್ನು ವಾಪಸ್ ಕಳುಹಿಸಿದರು. ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಈ ಲೂಟಿ ಮಾಫಿಯಾ ಮತ್ತೆ ಮುಂದೆ ಬಂದಿತ್ತು. ಆಗಲೂ ಮನವಿ ವಜಾ ಮಾಡಲಾಗಿತ್ತು. ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಕಪ್ಪ ನೀಡಲು ಆಸ್ತಿ ಲೂಟಿ ಮಾಡಲುಹೊರಟಿದ್ದಾರೆ. ಬೆಂಗಳೂರಿನ ಜನರು ಕೂಡ ಇದರ ವಿರುದ್ಧ ನಿಲ್ಲಬೇಕು ಎಂದು ಕೋರಿದರು.
ಪ್ರಜ್ವಲ್ ರೇವಣ್ಣನದ್ದು ಅತಿರೇಕದ ಹೇಯ ಕೃತ್ಯ: ಸಚಿವ ಎಂ.ಬಿ.ಪಾಟೀಲ್
ಇದೇನು ಕಾಂಗ್ರೆಸ್ಸಿಗರ ಅಪ್ಪನ ಆಸ್ತಿ ಅಲ್ಲ, ಬಿಡಿಎ ಹಿಂದಿನ ಅಧ್ಯಕ್ಷರು ಆಸ್ತಿಗಳನ್ನು ಉಳಿಸಿ ಬೆಳೆಸಿದ್ದಾರೆ. 'ದಿನವೂ ಕೋಳಿ ಮೊಟ್ಟೆ ತಿನ್ನೋದ್ಯಾಕೆ? ಅದರ ಬದಲು ಕೋಳಿಯನ್ನೇ ತಿಂದರೆ ಹೇಗೆ' ಎಂದು ಇವರು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಕಾಂಗ್ರೆಸ್ ನುಂಗಣ್ಣಗಳ ಪಾಲಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದರು.