ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ 100 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್.
ಮೈಸೂರು(ಮಾ.10): ಮೈಸೂರಿನಲ್ಲಿ ಮಾರ್ಚ್ 26 ರಂದು ನಡೆಯುವ ಜೆಡಿಎಸ್ ಪಂಚರತ್ನ ಸಮಾರೋಪ ಸಮಾವೇಶ ಐತಿಹಾಸಿಕ ದಾಖಲೆಯಾಗಲಿದೆ. ಸುಮಾರು 10 ಲಕ್ಷ ಜನರನ್ನು ಸೇರಿಸಲು ನಿರ್ಧರಿಸಿದ್ದೇವೆ ಎಂದು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ತಿಳಿಸಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿರುವ ಮೈಸೂರಿನ ಉತ್ತನಹಳ್ಳಿ ಬಳಿಯ ಶ್ರೀ ತ್ರಿಪುರಸುಂದರಮ್ಮಣಿ ದೇವಸ್ಥಾನದ ಪಕ್ಕದ ಜಾಗದಲ್ಲಿ ವೇದಿಕೆ ನಿರ್ಮಾಣಕ್ಕೆ ಗುರುವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ 100 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
undefined
ಮಹಿಳೆಯರಿಗೆ ಶೇ. 50ರಷ್ಟು ಸ್ಥಾನಗಳ ಮೀಸಲಾತಿ ನೀಡಿ : ಸಾ.ರಾ. ಮಹೇಶ್
ನಮ್ಮ ನಾಯಕರಾದ ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು ಮಾರ್ಗದರ್ಶನದಲ್ಲಿ ಕೆ. ಮಹದೇವು, ಎಂ. ಅಶ್ವಿನ್‌ಕುಮಾರ್ ಸೇರಿದಂತೆ ಎಲ್ಲಾ ಹಿರಿಯ ಮುಖಂಡರು ಚರ್ಚೆ ಮಾಡಿದ್ದೆವು. ಪಂಚರತ್ನಯಾತ್ರೆ ಸಮಾರೋಪ ಮೈಸೂರಿನಲ್ಲಿ ಆಗಬೇಕು ಎಂದು ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿದ್ದೆವು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ಹೀಗಾಗಿ, ಸಂಬಂಧಿಸಿದ ಕೆಲಸ ಆರಂಭಿಸಿದ್ದೇವೆ. ಎಚ್.ಡಿ. ಕುಮಾರಸ್ವಾಮಿ ಕೂಡ ಎರಡು ದಿನಗಳ ಹಿಂದೆ ಸದರಿ ಸ್ಥಳವನ್ನು ಪರಿಶೀಲಿಸಿದ್ದಾರೆ. ಹೀಗಾಗಿ, ಸಿದ್ಧತಾ ಕಾರ್ಯಕ್ಕೆ ಗುದ್ದಲಿ ಪೂಜೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಪಂಚರತ್ನ ರಥಯಾತ್ರೆಗೆ ಎಲ್ಲೆಡೆ ಸ್ಪಂದನೆ ದೊರೆತಿದೆ. ಹಳೇ ಮೈಸೂರು ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪಂಚರತ್ನ ಯೋಜನೆಗಳು ತಮಗೆ ಅನುಕೂಲ ಆಗುತ್ತವೆ ಎನ್ನುವ ನಂಬಿಕೆ ಜನರಿಗೆ ಬಂದಿದೆ. ಆ ಉತ್ಸಾಹದಿಂದ ಮೈಸೂರು ಜಿಲ್ಲೆಯಲ್ಲೂ ಇದೆ. ಇಲ್ಲೇ ಬೃಹತ್ ಸಮಾರೋಪ ಸಮಾರಂಭ ನಡೆಸಿ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುತ್ತೇವೆ. ಕಾರ್ಯಕ್ರಮ ಯಶಸ್ಸಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದರು.
ಕಾರ್ಯಕರ್ತರೆ ಜೆಡಿಎಸ್ ಶಕ್ತಿ. ಬಲಿಷ್ಠ ಕಾರ್ಯಕರ್ತರ ಪಡೆ ಇರುವವರೆಗೂ ಪಕ್ಷಕ್ಕೆ ಯಾವುದೇ ಸಮಸ್ಯೆಯಾಗಲ್ಲ. ಯಾರೇ ಹೋದರೂ ಪಕ್ಷಕ್ಕೆ ಹಾನಿಯಾಗುವುದಿಲ್ಲ. ಮೈಸೂರು ಜಿಲ್ಲೆ ಎಚ್.ಡಿ. ಕೋಟೆ, ನಂಜನಗೂಡು, ಚಾಮರಾಜ, ನರಸಿಂಹರಾಜ ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಮಾ.26ರ ನಂತರ ಎರಡನೇ ಪಟ್ಟಿಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.
ಮೈಸೂರಿನವರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಆಡಳಿತ ನಡೆಸಿದರು. ರಾಜ್ಯದಲ್ಲೇ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಇಂದು ಬಿಜೆಪಿ ಸರ್ಕಾರ ಅವರನ್ನು ಮೀರಿಸಿದೆ ಎಂದು ದೂರಿದರು. ಆದ್ದರಿಂದ ಎರಡು ರಾಷ್ಟ್ರೀಯ ಪಕ್ಷಗಳನ್ನು ಧಿಕ್ಕರಿಸಿ ಅನೇಕ ಜನ ಜೆಡಿಎಸ್ ಕಡೆ ಬರುತ್ತಿದ್ದಾರೆ. ಪಂಚರತ್ನ ಯಾತ್ರೆಗೆ ರಾಜ್ಯದ ಎಲ್ಲೆಡೆ ಉತ್ತಮ ಬೆಂಬಲ ಸಿಕ್ಕಿದೆ. ಈ ಬಾರಿ ಜೆಡಿಎಸ್‌ಗೆ ಬಹುಮತ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮೇಲ್ಜಾತಿಯವರಲ್ಲವೇ? : ಲಕ್ಷ್ಮಣ್
ಶಾಸಕರಾದ ಸಿ.ಎಸ್. ಪುಟ್ಟರಾಜು, ಕೆ. ಮಹದೇವ್, ಎಂ. ಅಶ್ವಿನ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮುಖಂಡರಾದ ಕೆ.ವಿ. ಮಲ್ಲೇಶ್ ಮೊದಲಾದವರು ಇದ್ದರು.
ಕಾಂಗ್ರೆಸ್ ಮತ್ತು ಬಿಜೆಪಿಯವರು ಜೆಡಿಎಸ್ ಶಾಸಕರು ತಮ್ಮ ಪಕ್ಷಕ್ಕೆ ಬರುವುದಾಗಿ ಹೇಳುತ್ತಿದ್ದಾರೆ ಅಷ್ಟೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯ ಅನೇಕ ನಾಯಕರು ಜೆಡಿಎಸ್‌ಗೆ ಬಂದಿದ್ದಾರೆ. ಕೆಲವು ಹಾಲಿ ಶಾಸಕರು ಕೂಡ ಬರಲು ಮುಂದಾಗಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಅವರ ಬಳಿಯೂ ಚರ್ಚೆ ನಡೆಸಿದ್ದಾರೆ ಅಂತ ಶಾಸಕ ಸಾ.ರಾ. ಮಹೇಶ್ ತಿಳಿಸಿದ್ದಾರೆ.