ಕಾಂಗ್ರೆಸ್ ಆಹಾರ ಭದ್ರತಾ ಕಾಯ್ದೆಯನ್ನು ತಂದರೂ, ನೀವು (ಬಿಜೆಪಿ) ಏನೂ ಮಾಡಲಿಲ್ಲ. ನೀವು 5 ಕೆಜಿ ನೀಡುತ್ತಿದ್ದೀರಿ, ಇಂಡಿಯಾ ಕೂಟದ ಸರ್ಕಾರ ರಚನೆಯಾದರೆ, ನಾವು ಬಡವರಿಗೆ 10 ಕೆಜಿ ಉಚಿತ ಪಡಿತರ ನೀಡುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ(ಮೇ.16): ಕೇಂದ್ರದಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಬಡವರಿಗೆ ನೀಡುತ್ತಿರುವ ಉಚಿತ ಪಡಿತರ ಪ್ರಮಾಣವನ್ನು ದ್ವಿಗುಣಗೊಳಿಸುತ್ತೇವೆ. ಅರ್ಥಾತ್ 10 ಕೇಜಿ ಉಚಿತ ಪಡಿತರ ನೀಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಘೋಷಿಸಿದ್ದಾರೆ.
ಸಮಾಜವಾದಿ ಪಾರ್ಟಿ ನೇತಾರ ಅಖಿಲೇಶ್ ಯಾದವ್ ತಜೆಗೂಡಿ ಬುಧವಾರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ‘ಕಾಂಗ್ರೆಸ್ ಆಹಾರ ಭದ್ರತಾ ಕಾಯ್ದೆಯನ್ನು ತಂದರೂ, ನೀವು (ಬಿಜೆಪಿ) ಏನೂ ಮಾಡಲಿಲ್ಲ. ನೀವು 5 ಕೆಜಿ ನೀಡುತ್ತಿದ್ದೀರಿ, ಇಂಡಿಯಾ ಕೂಟದ ಸರ್ಕಾರ ರಚನೆಯಾದರೆ, ನಾವು ಬಡವರಿಗೆ 10 ಕೆಜಿ ಉಚಿತ ಪಡಿತರ ನೀಡುತ್ತೇವೆ’ ಎಂದು ಹೇಳಿದರು.
ಕಾಂಗ್ರೆಸ್ ಗೆದ್ರೆ 15 % ಬಜೆಟ್ ಮುಸ್ಲಿಂಗೆ ಮೀಸಲು: ಪ್ರಧಾನಿ ಮೋದಿ
ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನಾವು ಈಗಾಗಲೇ ಇದನ್ನು ಮಾಡಿದ್ದೇವೆ. ಹೀಗಾಗಿ ನಾನು ಇದನ್ನು ಗ್ಯಾರಂಟಿಯಿಂದ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.
ಇತ್ತೀಚೆಗೆ ಪ್ರಚಾರ ಭಾಷಣದಲ್ಲಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಬೇಕೆಂದು ಒತ್ತಾಯಿಸಿದರು, ಬಡವರಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡುವ ಮೋದಿ ಸರ್ಕಾರದ ಯೋಜನೆಯು ಪರಿಹಾರವಲ್ಲ ಎಂದು ಹೇಳಿದರು.
ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದರೆ ಬಡವರಿಗೆ ವಿತರಿಸುವ ಪಡಿತರ ಗುಣಮಟ್ಟ ಸುಧಾರಿಸಲಾಗುವುದು ಎಂದು ಯಾದವ್ ಇದೇ ವೇಳೆ ಹೇಳಿದರು. ಆದರೆ, ಇತ್ತೀಚಿನ ಸಮಾವೇಶವೊಂದರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ‘ಉಚಿತ ಪಡಿತರ ನಿಮ್ಮ ಭವಿಷ್ಯ ನಿರ್ಮಿಸದು. ಅದರ ಬದಲು ಉದ್ಯೋಗಾವಕಾಶ ಸೃಷ್ಟಿಸಬೇಕು’ ಎಂದಿದ್ದರು. ಬಿಜೆಪಿ ತನ್ನ ಇತ್ತೀಚಿನ ಪ್ರಣಾಳಿಕೆಯಲ್ಲಿ 2029ರವರೆಗೆ 5 ಕೇಜಿ ಉಚಿತ ಪಡಿತರ ನೀಡುವ ಯೋಜನೆ ಮುಂದುವರಿಸುವುದಾಗಿ ಘೋಷಿಸಿತ್ತು.