ಕೊರೋನಾ ವೈರಸ್ ಇದೀಗ ಭಾರತದಲ್ಲಿ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳು ರದ್ದಾಗುತ್ತಿದೆ. ಭಾರತದಲ್ಲಿ 28ಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಶೂಟಿಂಗ್ ಸೇರಿದಂತೆ ಹಲವು ಕ್ರೀಡೆಗಳು ರದ್ದಾಗುತ್ತಿದೆ.
ನವದೆಹಲಿ(ಮಾ.07): ಕೊರೋನಾ ವೈರಸ್ ಬಿಸಿ ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟ, ಟೂರ್ನಿಗಳಿಗೆ ಮಾತ್ರವಲ್ಲ ಭಾರತೀಯ ಕ್ರೀಡೆಗೂ ತಟ್ಟುತ್ತಿದೆ. ಮಾ.15ರಿಂದ 25ರ ವರೆಗೂ ಇಲ್ಲಿ ನಡೆಯಬೇಕಿದ್ದ ಶೂಟಿಂಗ್ ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಕೊರೋನಾ ಸಮಸ್ಯೆಯಿಂದಾಗಿ ಭಾರತದಲ್ಲಿ ಮುಂದೂಡಲ್ಪಟ್ಟಮೊದಲ ಪ್ರತಿಷ್ಠಿತ ಟೂರ್ನಿ ಇದಾಗಿದೆ.
ಇದನ್ನೂ ಓದಿ: ಕೊರೋನಾ ವೈರಸ್‌ನಿಂದ IPL 2020 ರದ್ದಾಗುತ್ತಾ? ಮೌನ ಮುರಿದ ಗಂಗೂಲಿ!
ಈ ಟೂರ್ನಿ ರದ್ದಾದ ಕಾರಣ, ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದ ಶೂಟರ್‌ಗಳಿಗೆ ತೊಂದರೆಯಾಗಿದೆ. ಒಲಿಂಪಿಕ್ಸ್‌ಗೂ ಮುನ್ನ ಎರಡು ವಿಭಾಗಗಳಲ್ಲಿ ವಿಶ್ವಕಪ್ ನಡೆಸಲಾಗುವುದು ಎಂದು ಅಂತಾರಾಷ್ಟ್ರೀಯ ಶೂಟಿಂಗ್ ಫೆಡರೇಷನ್ (ಐಎಸ್‌ಎಸ್‌ಎಫ್) ತಿಳಿಸಿದೆ. ಚೀನಾ, ಇಟಲಿ, ದ.ಕೊರಿಯಾ, ಜಪಾನ್ ಹಾಗೂ ಇರಾನ್ ರಾಷ್ಟ್ರಗಳ ಶೂಟರ್‌ಗಳಿಗೆ ವೀಸಾ ನೀಡಲು ಸಾಧ್ಯವಿಲ್ಲದ ಕಾರಣ ಭಾರತೀಯ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಟೂರ್ನಿಯನ್ನು ಮುಂದೂಡುವಂತೆ ಐಎಸ್‌ಎಸ್‌ಎಫ್‌ಗೆ ಮನವಿ ಸಲ್ಲಿಸಿತ್ತು. ಒಟ್ಟಾರೆ ವಿಶ್ವಕಪ್‌ನಿಂದ 22 ದೇಶಗಳ ಸ್ಪರ್ಧಿಗಳು ಹಿಂದೆ ಸರಿದ ಕಾರಣ ಟೂರ್ನಿಯನ್ನು ಮುಂದೂಡಲು ನಿರ್ಧರಿಸಲಾಯಿತು. ಇದೇ ವೇಳೆ ಏ.16ರಿಂದ ಟೋಕಿಯೋದಲ್ಲಿ ನಡೆಯಬೇಕಿದ್ದ ಒಲಿಂಪಿಕ್ ಪರೀಕ್ಷಾರ್ಥ ಶೂಟಿಂಗ್ ಪಂದ್ಯಾವಳಿ ರದ್ದುಗೊಂಡಿದೆ.
ಇದನ್ನೂ ಓದಿ: ಭಾರತ ಮೊದಲ ಬಾರಿ ಫೈನಲ್ ಪ್ರವೇಶ, ಚೊಚ್ಚಲ ಟಿ20 ಮಹಿಳಾ ವಿಶ್ವಕಪ್ ಗೆಲ್ಲೋ ವಿಶ್ವಾಸ!...
ಸಾಯ್‌ನಲ್ಲಿ ಬಯೋಮೆಟ್ರಿಕ್ ಹಾಜರಾತಿಗೆ ವಿನಾಯಿತಿ!
ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಮುಂದಿನ ಒಂದೆರೆಡು ದಿನಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಮುಂದಿನ ಆದೇಶದ ವರೆÜಗೂ ಸಿಬ್ಬಂದಿ ಬಯೋಮೆಟ್ರಿಕ್ ಹಾಜರಾತಿ ನೀಡುವ ಅವಶ್ಯಕತೆ ಇಲ್ಲ. ಸಾಧನದ ಮೇಲೆ ವ್ಯಕ್ತಿಯ ಕೈಬೆರಳು ಅಚ್ಚು ಬೀಳುವ ಕಾರಣ, ಅನೇಕರು ಉಪಯೋಗಿಸಿದರೆ ಸೋಂಕು ಹರಡಬಹುದು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಯ್ ಅಧಿಕಾರಿಗಳು ತಿಳಿಸಿದ್ದಾರೆ.
ಆಲ್ ಇಂಗ್ಲೆಂಡ್ ಟೂರ್ನಿಗೆ ತಾರಾ ಶಟ್ಲರ್‌ಗಳು ಗೈರು
ಮುಂದಿನ ವಾರದಿಂದ ಆರಂಭಗೊಳ್ಳಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಭಾರತದ ತಾರಾ ಶಟ್ಲರ್‌ಗಳಾದ ಎಚ್.ಎಸ್.ಪ್ರಣಯ್, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್, ಸಮೀರ್ ವರ್ಮಾ, ಸೌರಭ್ ವರ್ಮಾ ಹಿಂದೆ ಸರಿದಿದ್ದಾರೆ. ಈ ವರ್ಷದ ಮೊದಲ ಸೂಪರ್ 1000 ಪಂದ್ಯಾವಳಿ ಇದಾಗಿದ್ದು, ಕೊರೋನಾ ಭೀತಿಯಿಂದ ಇಂಗ್ಲೆಂಡ್‌ಗೆ ತೆರಳದಿರಲು ಶಟ್ಲರ್‌ಗಳು ನಿರ್ಧರಿಸಿದ್ದಾರೆ. ಆದರೆ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಪಿ.ವಿ.ಸಿಂಧು, ಅಶ್ವಿನಿ ಪೊನ್ನಪ್ಪ, ಸಿಕ್ಕಿ ರೆಡ್ಡಿ, ಪ್ರಣವ್ ಚೋಪ್ರಾ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಖಚಿತಪಡಿಸಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪ್ರತಿಷ್ಠಿತ ಟೂರ್ನಿಗಳಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆಗೆ ಸೈನಾ, ಶ್ರೀಕಾಂತ್ ಸೇರಿದಂತೆ ಇನ್ನೂ ಕೆಲವರು ಸಿಲುಕಿದ್ದಾರೆ.
ದ್ಯುತಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ಅನುಮಾನ!
ಭಾರತದ ತಾರಾ ಅಥ್ಲೀಟ್ ದ್ಯುತಿ ಚಂದ್ 2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನವೆನಿಸಿದೆ. ದ್ಯುತಿ ಒಲಿಂಪಿಕ್ಸ್‌ಗೆ ಇನ್ನೂ ಅರ್ಹತೆ ಗಿಟ್ಟಿಸಿಲ್ಲ. ಕೊರೋನಾ ಸೋಂಕಿನಿಂದಾಗಿ ಹಲವಾರು ಕ್ರೀಡಾಕೂಟಗಳು ರದ್ದಾಗಿವೆ ಇಲ್ಲವೇ ಮುಂದೂಡಲ್ಪಟ್ಟಿವೆ. ಹೀಗಾಗಿ ದ್ಯುತಿಗೆ ಸ್ಪರ್ಧಿಸಿ ಅರ್ಹತೆ ಪಡೆಯುವ ಅವಕಾಶವೇ ಸಿಗುತ್ತಿಲ್ಲ. ‘ನಾನು ಸ್ಪರ್ಧಿಸಬೇಕಿದ್ದ ಮೂರು ಕ್ರೀಡಾಕೂಟಗಳು ರದ್ದಾಗಿವೆ. ಇದೇ ಸ್ಥಿತಿ ಮುಂದುವರಿದರೆ ಬಹುತೇಕ ರಾಷ್ಟ್ರಗಳ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ದ್ಯುತಿ ಹೇಳಿದ್ದಾರೆ.