* ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ನಡೆಯಿತು ವಿಚಿತ್ರ ಘಟನೆ
* ರಷ್ಯಾ ಹಾಗೂ ಕೆನಡಾ ನಡುವಿನ ಐಸ್ ಹಾಕಿ ಪಂದ್ಯದ ವೇಳೆ ಮಾಸ್ಕ್ ತೊಟ್ಟು ಕಣಕ್ಕಿಳಿದ ಆಟಗಾರ್ತಿಯರು
* ರಷ್ಯಾ ಎದುರು ಕೆನಡಾ 6-1ರಲ್ಲಿ ಜಯಭೇರಿ
ಬೀಜಿಂಗ್(ಫೆ): ಚಳಿಗಾಲದ ಒಲಿಂಪಿಕ್ಸ್‌ನಲ್ಲಿ (Winter Olympics 2022) ಸೋಮವಾರ ವಿಭಿನ್ನ ಪ್ರಸಂಗವೊಂದು ನಡೆದಿದೆ. ರಷ್ಯಾ ಹಾಗೂ ಕೆನಡಾ ನಡುವಿನ ಐಸ್ ಹಾಕಿ (ICC Hockey) ಪಂದ್ಯದ ವೇಳೆ ಎರಡೂ ತಂಡಗಳ ಆಟಗಾರ್ತಿಯರು ಮಾಸ್ಕ್ ಧರಿಸಿ ಆಟವಾಡಿದ್ದು ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ. ರಷ್ಯಾ ಆಟಗಾರ್ತಿಯರ ಕೋವಿಡ್ ಪರೀಕ್ಷಾ ವರದಿ (COVID 19 Test Report) ನಿರೀಕ್ಷಿತ ಸಮಯಕ್ಕೆ ಬರಲಿಲ್ಲ. ಹೀಗಾಗಿ ಪಂದ್ಯ ವಿಳಂಬವಾಯಿತು.
ಒಂದು ಗಂಟೆಗೂ ಹೆಚ್ಚು ಸಮಯ ಕಾಯ್ದರೂ ವರದಿ ಬರದಿದ್ದಾಗ ಎರಡೂ ತಂಡದ ಆಟಗಾರ್ತಿಯರು ಮಾಸ್ಕ್ ಧರಿಸಿ ಅಂಕಣಕ್ಕಿಳಿಯಲು ನಿರ್ಧರಿಸಿದರು. ಮೊದಲಾರ್ಧ ಮುಕ್ತಾಯಗೊಂಡ ಬಳಿಕ ವರದಿ ಪಂದ್ಯದ ಅಧಿಕಾರಿಗಳು ಕೈಸೇರಿತು. ಎಲ್ಲಾ ಆಟಗಾರ್ತಿಯರ ವರದಿ ನೆಗೆಟಿವ್ ಎಂದು ಬಂದಿದ್ದ ಕಾರಣ, ಮಾಸ್ಕ್ ತೆಗೆದು ಆಟ ಮುಂದುವರಿಸಿದರು. ಕೆನಡಾ 6-1ರಲ್ಲಿ ಜಯಿಸಿತು.
ಪ್ರೊ ಲೀಗ್ ಹಾಕಿ: ಇಂದು ಭಾರತಕ್ಕೆ ಫ್ರಾನ್ಸ್ ಸವಾಲು
ಪಾಟ್‌ಶೆಫ್‌ಸ್ಟೂ್ರಟ್(ದ.ಆಫ್ರಿಕಾ): 2022ರ ಮೊದಲ ಸವಾಲಿಗೆ ಭಾರತ ಪುರುಷರ ಹಾಕಿ ತಂಡ ಸಿದ್ಧವಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐತಿಹಾಸಿಕ ಕಂಚಿನ ಪದಕವನ್ನು ಗೆದ್ದ ತಂಡ, ಮಂಗಳವಾರ 2021-22ರ ಎಫ್‌ಐಎಚ್ ಪ್ರೊ ಲೀಗ್‌ನ (FIH Pro League) ಮೊದಲ ಪಂದ್ಯದಲ್ಲಿ ಫ್ರಾನ್ಸ್ ಸವಾಲನ್ನು ಎದುರಿಸಲಿದೆ.
ಬಳಿಕ ಬುಧವಾರ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ವಿಶ್ವ ನಂ.3 ಭಾರತ, 2015ರ ವಿಶ್ವ ಲೀಗ್ ಸೆಮಿಫೈನಲ್ ಬಳಿಕ ವಿಶ್ವ ನಂ.13 ಫ್ರಾನ್ಸ್ ತಂಡವನ್ನು ಎದುರಿಸಿಲ್ಲ. ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿರುವ ಮನ್‌ಪ್ರೀತ್ ಸಿಂಗ್ ಪಡೆಗೆ ಫೆ.12ರಂದು ಮತ್ತೊಮ್ಮೆ ಫ್ರಾನ್ಸ್ ಎದುರಾಗಲಿದೆ. ಫೆ.13ರಂದು ದ.ಆಫ್ರಿಕಾ ವಿರುದ್ಧ ಆಡುವ ಮೂಲಕ ಭಾರತ ತಂಡ ಪ್ರವಾಸವನ್ನು ಮುಕ್ತಾಯಗೊಳಿಸಲಿದೆ.
ಪಂದ್ಯ: ರಾತ್ರಿ 9.30ಕ್ಕೆ
ಬೆಂಗಳೂರು ಓಪನ್ ಟೆನಿಸ್: ಸಾಕೇತ್‌ಗೆ ಸೋಲು
ಬೆಂಗಳೂರು ಓಪನ್ (Bengaluru Open) ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಭಾರತದ ತಾರಾ ಟೆನಿಸಿಗರಾದ ಸಾಕೇತ್ ಮೈನೇನಿ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದಾರೆ. ಟೂರ್ನಿಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ ಸಾಕೇತ್, ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಇಟಲಿಯ ಜಿಯಾನ್ ಮಾರ್ಕೊ ವಿರುದ್ಧ 1-6, 1-6 ನೇರ ಸೆಟ್‌ಗಳಲ್ಲಿ ಸೋಲು ಅನುಭವಿಸಿದರು.
ಸಾಕೇತ್ ಪಂದ್ಯದುದ್ದಕ್ಕೂ ಹಲವು ತಪ್ಪುಗಳನ್ನೆಸೆಗಿದರು. ಭಾರತೀಯನ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಜಿಯಾನ್ ಸುಲಭ ಗೆಲುವು ದಾಖಲಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿದರು. 3ನೇ ಶ್ರೇಯಾಂಕಿತ ಆಸ್ಪ್ರೇಲಿಯಾದ ಅಲೆಕ್ಸಾಂಡರ್ ವುಕಿಚ್, 4ನೇ ಶ್ರೇಯಾಂಕಿತ ಫ್ರಾನ್ಸ್‌ನ ಹ್ಯುಗೊ ಗ್ರೆನಿಯರ್ ಸಹ ಅಂತಿಮ 16ರ ಸುತ್ತು ಪ್ರವೇಶಿಸಿದರು.
Pro Kabaddi League: ಗುಜರಾತ್ ಎದುರು ಬೆಂಗಳೂರು ಬುಲ್ಸ್‌ಗೆ ಆಘಾತಕಾರಿ ಸೋಲು..!
ಇನ್ನು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಮೂಲಕ ಅರ್ಜುನ್ ಖಾಡೆ ಪ್ರಧಾನ ಸುತ್ತಿಗೆ ಪ್ರವೇಶ ಪಡೆದರೆ, ಮುಕುಂದನ್ ಶಶಿಕುಮಾರ್ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿದರು. ಮಂಗಳವಾರ ಭಾರತದ ರಾಮ್‌ಕುಮಾರ್ ರಾಮನಾಥನ್, ಖಾಡೆ, ಪ್ರಜ್ನೇಶ್ ಗುಣೇಶ್ವರನ್, ಪ್ರಜ್ವಲ್ ದೇವ್, ರಿಶಿ ರೆಡ್ಡಿ ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ. ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ-ದಿವಿಜ್ ಶರಣ್, ಶಶಿಕುಮಾರ್-ಆದಿಲ್ ಕಲ್ಯಾಣ್‌ಪುರ್ ಕಣಕ್ಕಿಳಿಯಲಿದ್ದಾರೆ. ಅರ್ಜುನ್ ಖಾಡೆ, ಚೈನೀಸ್ ತೈಪೆಯ ಸೆಂಗ್ ಚುನ್ ಜೊತೆ ಆಡಲಿದ್ದಾರೆ.
ಟೆನಿಸ್ ರ‍್ಯಾಂಕಿಂಗ್: ಟಾಪ್ 100ಗೆ ರಾಮ್ ಪ್ರವೇಶ
ನವದೆಹಲಿ: ಭಾರತದ ರಾಮ್‌ಕುಮಾರ್ ರಾಮನಾಥನ್ ಟೆನಿಸ್ ವಿಶ್ವ ರ‍್ಯಾಂಕಿಂಗ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರ 100ರೊಳಗೆ ಸ್ಥಾನ ಪಡೆದಿದ್ದಾರೆ. ರೋಹನ್ ಬೋಪಣ್ಣ ಜೊತೆ ಮಹಾರಾಷ್ಟ್ರ ಓಪನ್ ಪ್ರಶಸ್ತಿ ಗೆದ್ದ ರಾಮ್, ತಮ್ಮ ವೃತ್ತಿಬದುಕಿನ ಶ್ರೇಷ್ಠ 94ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಬೋಪಣ್ಣ 8 ಸ್ಥಾನಗಳ ಜಿಗಿತ ಕಂಡಿದ್ದು 35ನೇ ಸ್ಥಾನ ಪಡೆದಿದ್ದಾರೆ.