ವಿನೇಶ್ ಪೋಗಟ್ ಕನಸು, ಶ್ರಮವನ್ನೇ ನುಂಗಿ ಹಾಕಿತಲ್ಲಾ ನೂರೇ ನೂರು ಗ್ರಾಂ ತೂಕ!

By Shobha MCFirst Published Aug 7, 2024, 1:37 PM IST
Highlights

ಕುಸ್ತಿ ಅಖಾಡದ ಒಳಗೂ- ಹೊರಗೂ ‘ದಂಗಲ್​’. ಪ್ಯಾರೀಸ್ ಒಲಂಪಿಕ್ಸ್‌ನಲ್ಲಿ ಸೋತು ಗೆದ್ದ ಕುಸ್ತಿ ಅಖಾಡದ ಹೆಣ್ಣು ಹುಲಿ ವಿನೇಶ್ ಫೋಗಟ್!

ಆಕೆ ಸೋತಿಲ್ಲ. ಈ ಸೋಲು ಆಕೆಯ ಸೋಲಲ್ಲ. ಅದು ಸೋತು ಗೆದ್ದ ಹೆಣ್ಣು ಹುಲಿ. ಕೇವಲ 100 ಗ್ರಾಂ ತೂಕ ಆಕೆಯ ವರ್ಷದ ಶ್ರಮ, ಹರಿಸಿದ ಬೆವರು, ನಡೆಸಿದ ಕಸರತ್ತು ಎಲ್ಲವನ್ನೂ ನುಂಗಿ ಹಾಕಿದೆ. ಒಲಿಂಪಿಕ್ಸ್​ನಲ್ಲಿ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದು ಬರುತ್ತಾಳೆಂದು ಕಾದು ಕುಳಿತ್ತಿದ್ದ ಲಕ್ಷಾಂತರ ಭಾರತೀಯರಿಗೆ ಆಘಾತ ಮೂಡಿಸಿದೆ. ಬಂಗಾರದ ಬೇಟೆಗೆ ಕಾದು ಕುಳಿತಿದ್ದ ವಿನೇಶಾ ಫೋಗಟ್​​, ಒಲಿಂಪಿಕ್ಸ್​ನಲ್ಲಿ ಅನರ್ಹಗೊಂಡು, ಗಾಯಗೊಂಡ ಹೆಣ್ಣು ಹುಲಿಯಂತಾಗಿದ್ದಾಳೆ. ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಹೆಚ್ಚು ತೂಕವಿದ್ದ ವಿನೇಶಾಳನ್ನು ಒಲಿಂಪಿಕ್ಸ್​ನಿಂದ ಹೊರದಬ್ಬಿದ್ದಾರೆ. 

50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಫೈನಲ್ ಪ್ರವೇಶಿಸಿದ್ದ ವಿನೇಶಾ, ಚಿನ್ನ ಗೆಲ್ಲುವ ವಿಶ್ವಾಸದಲ್ಲಿ ಬೀಗುತ್ತಿದ್ದಳು. ಅವಳೊಂದಿಗೆ ಅವಳ ಲಕ್ಷಾಂತರ ಅಭಿಮಾನಿಗಳು, ಭಾರತೀಯರು ಆಕೆ ಬಂಗಾರ ತೊಟ್ಟು ಬರುವುದನ್ನೇ ಕಾತುರದಿಂದ ನೋಡುತ್ತಿದ್ದರು. ಆದರೆ,  ನಿನ್ನೆ ಒಂದೇ 3 ಕುಸ್ತಿ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ವಿನೇಶಾಳನ್ನು ಅನರ್ಹಗೊಳಿಸುವ ಮೂಲಕ, ಭಾರತೀಯರ ಕನಸು ನುಚ್ಚು ಮಾಡಿದ್ದಾರೆ ತೀರ್ಪುಗಾರರು. ಒಲಿಂಪಿಕ್ಸ್​ ಅನರ್ಹಗೊಳಿಸಿದ್ದಕ್ಕೆ ಭಾರತ ಆಕ್ರೋಶ ಹೊರಹಾಕಿದ್ದು, ತೀರ್ಪುಗಾರರ ವಿರುದ್ಧವೂ ಪ್ರತಿಭಟಿಸಿದೆ. ರಾತ್ರಿ 11.30ಕ್ಕೆ ನಡೆಯಬೇಕಿದ್ದ ಫೈನಲ್​ ಪಂದ್ಯಕ್ಕೆ ಸಿದ್ಧವಾಗುತ್ತಿದ್ದ ವಿನೇಶಾ, ತೀರ್ಪುಗಾರರ ಅನರ್ಹ ಆದೇಶದಿಂದ ಕುಸಿದು ಹೋಗಿದ್ದಾಳೆ. 

ವಿಶ್ವಚಾಂಪಿಯನ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ವಿನೇಶ್ ಒಟ್ಟು ಆಸ್ತಿ ಎಷ್ಟಿದೆ?

Latest Videos

ಆದರೆ, ಆಕೆ ಗಟ್ಟಿಗಿತ್ತಿ. ಈ ಸೋಲಿಗೆ ಹೆದರುವವಳಲ್ಲ. ಏಕೆಂದರೆ, ಆಕೆಯ ಬದುಕೇ ಹೋರಾಟ. ಕುಸ್ತಿ ಅಖಾಡಕ್ಕೆ ಹೆಣ್ಮಕ್ಕಳಿಗೆ ಅವಕಾಶ ಬೇಕೆಂದು ಹೋರಾಟ ನಡೆಸಿ, ಗೆದ್ದಳು. ಒಮ್ಮೆ ಅಖಾಡಕ್ಕೆ ಇಳಿದ ಮೇಲೆ ಹಿಂದುರುಗಿ ನೋಡಲೇ ಇಲ್ಲ. ಆಕೆಯ ಅಗ್ರೆಷನ್​, ಸಿಡಿದೆದ್ದು ಹೋರಾಡುವ ಛಾತಿ ಗೊತ್ತಾಗಿದ್ದೇ ಕಳೆದ ವರ್ಷ. ಆಕೆ ಬೇರಾರೂ ಅಲ್ಲ, ಒಲಂಪಿಕ್ಸ್​ನಲ್ಲಿ ಫೈನಲ್​ ತಲುಪಿ ಅನರ್ಹಗೊಂಡ, ಕುಸ್ತಿ ಪಟು ವಿನೇಶಾ ಫೋಗಟ್​. ವಿಶ್ವದ ನಂಬರ್ 1 ಆಟಗಾರ್ತಿ, ಟೋಕಿಯೋ ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಆಟಗಾರ್ತಿ ಯೂಯಿ ಸುಸಾಕಿಯನ್ನು ಕೆಡವಿ, ಸೋಲಿಸಿ ಫೈನಲ್​ಗೆ ಬಂದು ನಿಂತವಳು.

ಆಕೆಗೆ ಈ ಗೆಲುವು ತುಂಬಾ ಅನಿವಾರ್ಯವಾಗಿತ್ತು. ವ್ಯವಸ್ಥೆ ವಿರುದ್ಧ ಸಿಡಿದು ತೊಡೆ ತಟ್ಟಿ ನಿಂತಾಗ ಅನುಭವಿಸಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಿತ್ತು. ತನ್ನನ್ನು ಹಣಿದವರನ್ನು ಅಖಾಡದಲ್ಲಿ ಕೆಡವಿಹಾಕಬೇಕಿತ್ತು. ಆಕೆಯ ವಿರುದ್ಧ ನಿಂಥವರ ಕಪಾಳಕ್ಕೆ ಬಿಗಿಯುವಂಥ ಖುಷಿ ಕಾಣಬೇಕಿತ್ತು. ಆದರೆ, ಆಕೆಯ ಈ ಎಲ್ಲ ಕನಸಗಳನ್ನು ಕೇವಲ 100 ಗ್ರಾಂ ತೂಕವೇ ನುಂಗಿ ಹಾಕಿತು. 

ಹರಿಯಾಣದ 29 ವರ್ಷದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಅಂಗಳಕ್ಕೆ ಬರುವವರೆಗೂ ಅನುಭವಿಸಿದ ಅವಮಾನ, ನೋವು ಅಷ್ಟಿಷ್ಟಲ್ಲ. ಅದಕ್ಕೆ ಕಾರಣ,  2023ರಲ್ಲಿ ರಾಷ್ಟ್ರೀಯ ಕುಸ್ತಿ ಒಕ್ಕೂಟದ ಮಾಜಿ  ಮುಖ್ಯಸ್ಥ ಬ್ರಿಜ್​ ಭೂಷಣ್​ ವಿರುದ್ಧದ ಹೋರಾಟ. ಅಧ್ಯಕ್ಷನ ಕಿರುಕುಳ ಖಂಡಿಸಿ, ಆತನನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಬಿಗಿಪಟ್ಟು ಹಿಡಿದ ವಿನಿಶಾ, ದಿಲ್ಲಿಯ ಬೀದಿಗಳಲ್ಲಿ 40 ದಿನಗಳ ಕಾಲ ಪ್ರತಿಭಟನೆ ನಡೆಸಿದಳು. 40 ದಿನಗಳು ಆಕೆಯದ್ದು ಕಠಿಣ ಹೋರಾಟ,  ಪೊಲೀಸರೊಂದಿಗೆ ಸಂಘರ್ಷ. ಸೋಷಿಯಲ್ ಮೀಡಿಯಾದಲ್ಲಿ ಆಕೆಯ ವಿರುದ್ಧ ದೊಡ್ಡ ಅಭಿಯಾನವೇ ನಡೆಯಿತು. ಆಕೆಯ ಸಾಧನೆಯನ್ನು ಕಾಲ ಕೆಳಗೆ ಹೊಸಕಿ ಹಾಕಿದರು. ಆಕೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇದಾವುದಕ್ಕೂ ಒಮ್ಮೆಯೂ ಹೆದರದ ದಿಟ್ಟೆ ವಿನೇಶಾ, ಆ ಹೋರಾಟದಲ್ಲೂ ಯಶಸ್ವಿಯಾದಳು. ಇದು ಮುಗಿಯುತ್ತಿದ್ದಂತೆ, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದರು. 

ಸೆಮೀಸ್‌ಗೆ ಲಗ್ಗೆಯಿಟ್ಟ ವಿನೇಶ್ ಫೋಗಟ್: ಪದಕಕ್ಕೆ ಇನ್ನೊಂದೇ ಹೆಜ್ಜೆ ಬಾಕಿ

ಇಷ್ಟೆಲ್ಲ ಹೋರಾಟ, ಸವಾಲುಗಳು, ಅಡೆತಡೆಗಳ ಮಧ್ಯೆಯೂ ಒಲಿಂಪಿಕ್ಸ್ ಅರ್ಹತೆ ಪಡೆದ ವಿನಿಶಾ, ಚಿನ್ನದ ಅಂಚಿಗೆ ಬಂದು ನಿಂತಿದ್ದಳು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ನಾಯು ಸೆಳೆತದಿಂದ ಹೊರ ಉಳಿದಿದ್ದ ವಿನಿಶಾ, ದೃಢ ವಿಶ್ವಾಸ, ಆತ್ಮವಿಶ್ವಾಸದಿಂದ ಕಮ್‌ ಬ್ಯಾಕ್ ಮಾಡಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಳು.  ಸತತ 3 ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಡೆದಿದ್ದಳು ವಿನೇಶಾ.  ಇದೀಗ ಒಲಂಪಿಕ್ಸ್​ನಲ್ಲಿ ಬಂಗಾರ ಬೇಟೆಗೆ ಇನ್ನೊಂದೇ ಮೆಟ್ಟಿಲು ಅನ್ನುವಾಗಲೇ ವಿನೇಶಾಗೆ ದೊಡ್ಡ ಆಘಾತ ಕೊಟ್ಟಿದ್ದು ಆಕೆಯ ದೇಹದ ತೂಕ. ಫೈನಲ್​ ಹಂತದಲ್ಲಿ ಆಕೆಯ ದೇಹ ತೂಕ ನಿಗದಿಗಿಂತ ಕೇವಲ 100 ಗ್ರಾಂ ಹೆಚ್ಚಿತ್ತು. ಅಷ್ಟೇ ಸಾಕಿತ್ತು ತೀರ್ಪುಗಾರರಿಗೆ. ಕುಸ್ತಿ ಅಖಾಡಕ್ಕೆ ಎಂಟ್ರಿ ಕೊಡುವಷ್ಟರಲ್ಲೇ ಅದೃಷ್ಟ ಕೈಕೊಟ್ಟಿತು. ತೀರ್ಪುಗಾರರು ಅನರ್ಹಳೆಂದು ಘೋಷಿಸಿ, ವಿನೇಶಾಳ ಕನಸು ಛಿದ್ರಗೊಳಿಸಿದರು. 

ಕೊರಳಲ್ಲಿ ಪದಕ ಹೊತ್ತು ಬಂದರೆ ವಿನಿತಾಳನ್ನು ಹೆಗಲ ಮೇಲೆ ಹೊತ್ತು ಮೆರೆಸಲು ಸಜ್ಜಾಗಿದ್ದ ಕೋಟ್ಯಂತರ ಅಭಿಮಾನಿಗಳು, ಅನರ್ಹತೆ ಸುದ್ದಿ ಕೇಳುತ್ತಿದ್ದಂತೆ, ಶಾಕ್​ಗೊಳಗಾಗಿದ್ದಾರೆ. ಅನರ್ಹತೆ ತೀರ್ಪು ಬಗ್ಗೆ ಹತ್ತಾರು ಅನುಮಾನದ ಮಾತುಗಳು ಕೇಳಿಬರುತ್ತಿವೆ. ಅದೇನೇ ಆಗಲಿ, ಹೋರಾಟವನ್ನೇ ಬದುಕಾಗಿಸಿಕೊಂಡೇ, ಸೆಣಸಾಡುತ್ತಲೇ ಬಂದ  ವಿನೇಶಾಗೆ, ಮತ್ತೆ ಕುಸ್ತಿಯಲ್ಲಿ ಹೋರಾಡಿ ಗೆಲ್ಲುವುದು ಕಷ್ಟವೇನಲ್ಲ ಬಿಡಿ. 

ಶಬ್ಬಾಶ್‌..! ಕುಸ್ತಿಯಲ್ಲಿ ಸೋಲೇ ಕಾಣದ ಜಪಾನ್ ಆಟಗಾರ್ತಿಗೆ ಶಾಕ್ ಕೊಟ್ಟ ವಿನೇಶ್‌ ಫೋಗಟ್..!

ಮನೆಯೊಳಗೂ, ಹೊರಗೂ ಕಿರುಕುಳ, ಮಾನಸಿಕ ತುಳಿತ ಅನುಭವಿಸುತ್ತಾ, ಪ್ರತಿಭಟಿಸುವ ಧೈರ್ಯವಿಲ್ಲದೇ ಮನಸ್ಸೊಳಗೇ ಕುಸ್ತಿ ಮಾಡುತ್ತಿರುವ ಲಕ್ಷಾಂತರ ದುಡಿಯುವ ಹೆಣ್ಮಕ್ಕಳ ಪಾಲಿಗೆ ವಿನೇಶಾ ಗೆಲುವು ದೊಡ್ಡ ಶಕ್ತಿ ಮತ್ತು ಅಸ್ತ್ರವಾಗುತ್ತಿತ್ತು. ಭಾರತೀಯ ಕುಸ್ತಿಯಲ್ಲಿ ಚರಿತ್ರೆ ಸೃಷ್ಟಿಸಬೇಕಿದ್ದ ವಿನೇಶಾ ಫೋಗಟ್​ ಎಂಬ ಹೆಣ್ಣು ಹುಲಿಯ ಯಶೋಗಾಥೆಯೊಂದು ಅನರ್ಹತೆಯೊಂದಿಗೆ ದುರಂತ ಅಂತ್ಯ ಕಂಡಿದೆ.
 

click me!