ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಸೋಲಿಸಿದ್ದು ಸಾಮಾನ್ಯ ಕುಸ್ತಿಪಟುವನ್ನೇನು ಅಲ್ಲ. ಜಪಾನಿನ ಕುಸ್ತಿಪಟು ಸೋಲೇ ಕಂಡಿರಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ಮಹಿಳೆಯ 50 ಕೆ.ಜಿ ಪ್ರೀಸ್ಟೈಲ್ ಕುಸ್ತಿಯಲ್ಲಿ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯದ ಕಾರಣದಿಂದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದ ವಿನೇಶ್, ಇದೀಗ ಮೊದಲ ಸುತ್ತಿನಲ್ಲೇ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕುಸ್ತಿಪಟುವಾಗಿರುವ ಜಪಾನಿನ ಯ್ಯೂ ಸುಸುಕಿ ವಿರುದ್ದ 3-2 ಅಂತರದ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ ವಿನೇಶ್ ಫೋಗಾಟ್ ಕಳೆದೊಂದು ವರ್ಷದಿಂದಲೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಸಿಂಗ್ ವಿರುದ್ದ ಬೀದಿಗಿಳಿದು ಹೋರಾಟ ಮಾಡಿದ್ದರು. ಪೊಲೀಸರ ಲಾಠಿ ಏಟು ತಿಂದರೂ ಜಗ್ಗದೇ ಹೋರಾಡಿದ್ದ ವಿನೇಶ್ ಮೇಲೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಪಂದ್ಯದಲ್ಲೇ ಎದುರಾಗಿದ್ದು ಯ್ಯೂ ಸುಸುಕಿ ಎನ್ನುವ ದೈತ್ಯ ಪ್ರತಿಭೆ. ಪಂದ್ಯ ಆರಂಭಕ್ಕೂ ಮುನ್ನವೇ ಯ್ಯೂ ಸುಸುಕಿ ಗೆಲ್ಲುವ ಹಾಟ್ ಫೇವರೇಟ್ ಎನಿಸಿಕೊಂಡಿದ್ದರು. ಯಾಕೆಂದರೆ ಯ್ಯೂ ಸುಸುಕಿ ಕುಸ್ತಿ ವೃತ್ತಿಜೀವನದಲ್ಲಿ ಇದುವರೆಗೂ ಒಂದೇ ಒಂದು ಸೋಲು ಕಂಡಿರಲಿಲ್ಲ.
ಹೌದು, ಯ್ಯೂ ಸುಸುಕಿ 2010ರಲ್ಲಿ ವೃತ್ತಿಪರ ಕುಸ್ತಿಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಆಕೆ ಸೋತಿದ್ದೇ ಇಲ್ಲ. ಯ್ಯೂ ಸುಸುಕಿ ಮೂರು ಬಾರಿ ವರ್ಲ್ಡ್ ಕೆಡೆಟ್ ಚಾಂಪಿಯನ್‌ಶಿಪ್, ಎರಡು ಬಾರಿ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್, ಒಮ್ಮೆ ಅಂಡರ್ 23 ವಿಶ್ವ ಚಾಂಪಿಯನ್‌ಶಿಪ್, ಎರಡು ಬಾರಿ ಏಷ್ಯನ್ ಚಾಂಪಿಯನ್‌ಶಿಪ್, ನಾಲ್ಕು ಬಾರಿ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯ್ಯೂ ಸುಸುಕಿ ಚಿನ್ನದ ಪದಕ ಜಯಿಸಿದ್ದರು.
ಇಂತಹ ಬಲಾಢ್ಯ ಆಟಗಾರ್ತಿ, ವಿನೇಶ್ ಎದುರು 2-0 ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ ಇನ್ನೇನು ಪಂದ್ಯ ಮುಕ್ತಾಯಕ್ಕೆ ಕೆಲವೇ ಸೆಕೆಂಡ್‌ಗಳು ಬಾಕಿ ಇದ್ದಾಗ ಆಕ್ರಮಣಕಾರಿ ಪ್ರದರ್ಶನ ತೋರಿದ ವಿನೇಶ್ ಫೋಗಟ್ ಸಿನಿಮೀಯಾ ಶೈಲಿಯಲ್ಲಿ 3-2 ಅಂತರದಲ್ಲಿ ಜಪಾನ್ ಆಟಗಾರ್ತಿಗೆ ಸೋಲುಣಿಸುವಲ್ಲಿ ಯಶಸ್ವಿಯಾದರು.
ಇದೀಗ ವಿನೇಶ್ ಫೋಗಟ್ ಅವರ ಅದ್ಭುತ ಕುಸ್ತಿ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
