ಕಂಬಳದ 'ಉಸೇನ್ ಬೋಲ್ಟ್' ದಾಖಲೆ ಸುಳ್ಳಂತೆ: ಮೂಡಬಿದ್ರೆ ಠಾಣೆ ಮೆಟ್ಟಿಲೇರಿದ ವಿವಾದ!

By Kannadaprabha NewsFirst Published Jul 20, 2022, 1:07 PM IST
Highlights

* ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್‌ ಗೌಡ ಸುತ್ತ ವಿವಾದದ ಹುತ್ತ
* ಶ್ರೀನಿವಾಸ್ ಗೌಡ ಮೇಲೆ ಗಂಭೀರ ಆರೋಪ ಮಾಡಿದ ಕಂಬಳ ಸಮಿತಿ ಸದಸ್ಯ
* ಕಂಬಳದ 'ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ್ ಗೌಡ ನಿರ್ಮಿಸಿದ್ದ ದಾಖಲೆ ಸುಳ್ಳಂತೆ
 

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು(ಜು.20): ಕರಾವಳಿಯ ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಓಡಿಸುವ ವೇಳೆ ಅತ್ಯಂತ ವೇಗವಾಗಿ ಓಡಿ ಗುರಿ ಮುಟ್ಟಿದ ಮಂಗಳೂರಿನ ಮೂಡಬಿದ್ರೆಯ ಶ್ರೀನಿವಾಸ ಗೌಡ ವಿರುದ್ದ ವಿವಾದವೊಂದು ಎದ್ದಿದೆ. ಅಂತಾರಾಷ್ಟ್ರೀಯ ಅಥ್ಲೀಟ್ ಉಸೇನ್ ಬೋಲ್ಟ್ ದಾಖಲೆಯನ್ನೇ ಮುರಿದಿದ್ದರು ಎನ್ನಲಾದ ಶ್ರೀನಿವಾಸ ಗೌಡ ದಾಖಲೆ ಸುಳ್ಳು. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಂಬಳ ಸಮಿತಿ ಸದಸ್ಯರೊಬ್ಬರು ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದು ಸುಳ್ಳು ಅಂತ ಮಿಜಾರಿನ ಶ್ರೀನಿವಾಸ ಗೌಡ ವಿರುದ್ದ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದ್ದು, ದ‌ಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬವರು ದೂರು ನೀಡಿದ್ದಾರೆ. ಕಂಬಳ ಓಟಗಾರ ಶ್ರೀನಿವಾಸ ಗೌಡ, ಗುಣಪಾಲ ಕಡಂಬ ಮತ್ತು ರತ್ನಾಕರ ಎಂಬವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸುವಂತೆ ದೂರು ನೀಡಿದ್ದಾರೆ. 

ಕಂಬಳ ಅಕಾಡೆಮಿ ನಡೆಸುತ್ತಿರುವ ಗುಣಪಾಲ ಕಡಂಬರಿಂದ ಶ್ರೀನಿವಾಸ ಗೌಡ ಬಳಸಿ ವಂಚನೆ ಆರೋಪ ಮಾಡಲಾಗಿದ್ದು, ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ್ ವಿರುದ್ದವೂ ದೂರು ನೀಡಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ. ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ ಲಕ್ಷಾಂತರ ಹಣ ಸಂಗ್ರಹ ಆರೋಪ ಹೊರಿಸಿ ದೂರು ನೀಡಲಾಗಿದೆ. ಅಧಿಕೃತ ಮಾನ್ಯತೆ ಪಡೆಯದ, ನಂಬಲಾರ್ಹವಲ್ಲದ ಸ್ಕೈ ವೀವ್ ಸಂಸ್ಥೆಯಿಂದ ಸುಳ್ಳು ತೀರ್ಪಿನ ದಾಖಲೆ ಸೃಷ್ಟಿಸಿದ್ದು, ಶ್ರೀನಿವಾಸ ಗೌಡ ಓಟದ ವೇಗದ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ತನಿಖೆ ನಡೆಸದೇ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಲಾಗುವುದು ಎಂದು ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ‌. 2020ರ ಫೆ.1ರಂದು ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದರು ಶ್ರೀನಿವಾಸ ಗೌಡ. 2009ರಲ್ಲಿ ಉಸೇನ್ ಬೋಲ್ಟ್ 100 ಮೀ. ಅನ್ನು 9.58 ಸೆಕೆಂಡ್ ನಲ್ಲಿ ಕ್ರಮಿಸಿದ ದಾಖಲೆಯನ್ನು ಶ್ರೀನಿವಾಸ ಗೌಡ ಉಡೀಸ್ ಮಾಡಿದ್ದರು. ಈ ದಾಖಲೆ ಬಳಿಕ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಶ್ರೀನಿವಾಸ ಗೌಡರನ್ನ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜು ದೆಹಲಿಗೂ ಆಹ್ವಾನಿಸಿದ್ದರು. ರಾಜ್ಯ ಸರ್ಕಾರ ಸೇರಿ ದೇಶದ ಹಲವು ಸಂಸ್ಥೆಗಳಿಂದ ಶ್ರೀನಿವಾಸ ಗೌಡಗೆ ನೆರವು ಮತ್ತು ಗೌರವ ಸಂದಾಯವಾಗಿತ್ತು. 

ಕಂಬಳವೀರ ಶ್ರೀನಿವಾಸ ಗೌಡ ಹೊಸ ದಾಖಲೆ

ಕಂಬಳದ ಲೇಸರ್ ಬೀಮ್ ವಿವಾದ!

ಸದ್ಯ ಕಂಬಳದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ವಿರುದ್ದ ದೂರು ನೀಡಲಾಗಿದೆ. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ದೂರು ಕೊಟ್ಟ ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ವಿರುದ್ದವೂ ಕೆಲವರು ಅಸಮಾಧಾನ ಹೊಂದಿದ್ದಾರೆ. ಆದರೆ ಲೋಕೇಶ್ ಶೆಟ್ಟಿ ಮಾಡಿರೋ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಿದೆ. ಅಸಲಿಗೆ ಈ ವಿಚಾರಕ್ಕೆ ಕಾರಣವಾಗಿರೋದು ಕಂಬಳದಲ್ಲಿ ಬಳಸಲಾಗುವ ಲೇಸರ್ ಬೀಮ್ ತಂತ್ರಜ್ಞಾನ. ಕಂಬಳದಲ್ಲಿ ಕೋಣಗಳ ಓಟ ಥರ್ಡ್‌ ಅಂಪಾಯರ್‌ಗೂ ನಿರ್ಧರಿಸಲಾಗದಷ್ಟು ಸೂಕ್ಷ್ಮ. ಅಂತಿಮ ಗೆರೆಯ ಮೇಲೆ ಮೊದಲು ಕಾಲಿಟ್ಟ ಕೋಣದ ಜೋಡಿಗೆ ಗೆಲುವು ಅಂತ ಡಿಕ್ಲೇರ್ ಮಾಡಲಾಗುತ್ತೆ. ಅದರೆ ಮೊದಲು ಗೆರೆ ಮೇಲೆ ಕಾಲಿಟ್ಟದ್ದು ಯಾವ ಜೋಡಿ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಅಲ್ಲೂ ಸೆಕೆಂಡಿನ ಭಾಗಗಳಲ್ಲಿ ಫಿನಿಷಿಂಗ್‌ ನಡೆದಿರುತ್ತದೆ. ಹೀಗಾಗಿಯೇ ಎಂಡ್‌ ಪಾಯಿಂಟ್‌ನಲ್ಲಿ ಅಳವಡಿಸಿರುವ ಲೇಸರ್‌ ಬೀಮ್‌ ಕಂಬಳದಲ್ಲಿ ಬಳಕೆಯಾದ ಹೊಸ ಟೆಕ್ನಾಲಜಿ. ಕೋಣದ ವೇಗವನ್ನು ಅಳೆಯಲು ಈಗ ಲೇಸರ್‌ ಬೀಮ್‌ ತಂತ್ರಜ್ಞಾನ ಹಾಗೂ ಸಮಯ ಅಳೆಯಲು ಇಲೆಕ್ಟ್ರಿಕ್‌ ಟೈಮರ್‌ ಕೂಡ ಅಳವಡಿಸಲಾಗುತ್ತದೆ. ಇದರಿಂದ ವಿಜಯಿಗಳ ನಿರ್ಣಯ ಮಾಡಿ ವೇಗದ ಲೆಕ್ಕಾಚಾರ ಮಾಡುತ್ತಾರೆ. ಆದರೆ ಲೋಕೇಶ್ ಶೆಟ್ಟಿ ದೂರಿನ ಪ್ರಕಾರ ಈ ತಂತ್ರಜ್ಞಾನವೇ ನಂಬಲಾರ್ಹವಲ್ಲವಂತೆ. ಅಲ್ಲದೇ ಯಾವುದೇ ಅಧಿಕೃತ ಮಾನ್ಯತೆ ಹೊಂದಿರದ ಈ ಸಂಸ್ಥೆ ಕೊಡುವ ತೀರ್ಪಿನ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯ ಶ್ರೀನಿವಾಸ ಗೌಡ ಶಬರಿಮಲೆಗೆ ತೆರಳಿದ್ದು, ಸರಿಯಾದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸದ್ಯ ಕಂಬಳದ ಕಣದಲ್ಲಿ ನಡೆಯುತ್ತಿರೋ ಗುದ್ದಾಟದ ಹಿಂದಿನ ಅಸಲಿ ಕಹಾನಿ ಮತ್ತು ಈ ದಾಖಲೆ ಓಟದ ಸತ್ಯಾಸತ್ಯತೆ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರ ಬರಬೇಕಿದೆ‌.
 

click me!