US open 2022 ಆಲ್ಕರಜ್‌ ಈಗ ವಿಶ್ವ ನಂ.1, ಅಗ್ರಸ್ಥಾನಕ್ಕೇರಿದ ಅತಿ ಕಿರಿಯ ಟೆನಿಸಿಗ!

By Suvarna News  |  First Published Sep 13, 2022, 3:45 PM IST

1990ರಲ್ಲಿ ಪೀಟ್‌ ಸ್ಯಾಂಪ್ರಸ್‌ ಬಳಿಕ ಗ್ರ್ಯಾನ್‌ ಸ್ಲಾಂ ಗೆದ್ದ ಅತಿಕಿರಿಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಆಲ್ಕರಜ್‌ ಪಾತ್ರವಾಗಿದ್ದಾನೆ. ಚೊಚ್ಚಲ ಗ್ರ್ಯಾನ್‌ ಸ್ಲಾಂ ಟ್ರೋಫಿಗೆ ಮುತ್ತಿಟ್ಟ ಸ್ಪೇನ್‌ ಟೆನಿಸಿಗ ಆಲ್ಕರಜ್‌ ಯುಎಸ್‌ ಓಪನ್‌ ರಾಜನಾಗಿ ಹೊರಹೊಮ್ಮಿದ್ದಾನೆ. ಮೊದಲ ಗ್ರ್ಯಾಂಡ್ ಸ್ಲಾಂ ಮೂಲಕ ಅಲ್ಕರಜ್ ಬರೆದ ದಾಖಲೆ ಏನು? ಇಲ್ಲಿದೆ ವಿವರ.


ನ್ಯೂಯಾರ್ಕ್(ಸೆ.13): ಮುಂದಿನ ದಶಕದಲ್ಲಿ ಈತ ಟೆನಿಸ್‌ ಲೋಕವನ್ನು ಆಳುತ್ತಾನೆ ಎನ್ನುವುದು ಅಭಿಮಾನಿಗಳಿಗೆ ವರ್ಷದ ಹಿಂದೆಯೇ ಖಚಿತವಾಗಿತ್ತು. ಆದರೆ ಇಷ್ಟುಬೇಗ ಗ್ರ್ಯಾನ್‌ ಸ್ಲಾಂ ಟ್ರೋಫಿ ಎತ್ತಿಹಿಡಿಯಲಿದ್ದಾನೆ ಎಂದು ನಿರೀಕ್ಷಿಸಿದವರು ಕಡಿಮೆ. ಸ್ಪೇನ್‌ನ ಕಾರ್ಲೊಸ್‌ ಅಲ್ಕರಜ್‌ ಎಲ್ಲರ ನಿರೀಕ್ಷೆ ಮೀರಿ ಮುನ್ನುಗ್ಗುತ್ತಿದ್ದು ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ನಾರ್ವೆಯ ಕ್ಯಾಸ್ಪರ್‌ ರುಡ್‌ ವಿರುದ್ಧ 6-4, 2-6, 7-6(1), 6-3 ಸೆಟ್‌ಗಳಲ್ಲಿ ಗೆದ್ದ ಆಲ್ಕರಾಜ್‌ ಚೊಚ್ಚಲ ಗ್ರ್ಯಾನ್‌ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು. ಅಷ್ಟೇ ಅಲ್ಲ, ಕೆಲ ಪ್ರಮುಖ ದಾಖಲೆಗಳನ್ನೂ ಬರೆದರು.

ಪಂದ್ಯದ ಮೊದಲ ಸೆಟ್‌ನಲ್ಲೇ ಸ್ಪೇನ್‌ ಆಟಗಾರ(Carlos Alcaraz) ಮೇಲುಗೈ ಸಾಧಿಸಿದರು. 2ನೇ ಸೆಟ್‌ನಲ್ಲಿ ರುಡ್‌ ಪುಟಿದೆದ್ದರೂ, ಅವರಿಗೆ ಲಯ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. 3ನೇ ಸೆಟ್‌ ಟೈ ಬ್ರೇಕರ್‌ನಲ್ಲಿ ನಿರ್ಧಾರವಾಯಿತು. ಆಲ್ಕರಜ್‌ ನಿರಾಯಾಸವಾಗಿ ಗೆದ್ದರು. 4ನೇ ಸೆಟ್‌ನಲ್ಲಿ ರುಡ್‌ರ(Casper Ruud) ಸವ್‌ರ್‍ ಬ್ರೇಕ್‌ ಮಾಡಿ ಸೆಟ್‌ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು. ಸತತ 3 ಪಂದ್ಯಗಳಲ್ಲಿ 5 ಸೆಟ್‌ಗಳ ಹೋರಾಟ ನಡೆಸಿ ಫೈನಲ್‌ ಪ್ರವೇಶಿಸಿದ್ದ ಆಲ್ಕರಜ್‌, ಫೈನಲ್‌ನಲ್ಲಿ(US Opne Final 2022) ನಿರಾಯಾಸವಾಗಿ ಗೆಲುವು ಸಾಧಿಸಿದರು.

Latest Videos

undefined

 

US Open 2022 ಒನ್ಸ್‌ ಜಬುರ್‌ ಮಣಿಸಿದ ಇಗಾ ಸ್ವಿಯಾಟೆಕ್‌ ಯುಎಸ್ ಓಪನ್ ಚಾಂಪಿಯನ್‌..!

ಯುಎಸ್‌ ಓಪನ್‌ ಗೆದ್ದ 2ನೇ ಅತಿಕಿರಿಯ
ಯುಎಸ್‌ ಓಪನ್‌ ಗೆದ್ದ 2ನೇ ಅತಿಕಿರಿಯ ಆಟಗಾರ ಎನ್ನುವ ಹಿರಿಮೆಗೆ ಆಲ್ಕರಜ್‌ ಪಾತ್ರರಾಗಿದ್ದಾರೆ. ಭಾನುವಾರಕ್ಕೆ ಅವರಿಗೆ 19 ವರ್ಷ 129 ದಿನ ವಯಸ್ಸು. 19 ವರ್ಷ 15 ದಿನ ವಯಸ್ಸಾಗಿದ್ದಾಗ ಅಮೆರಿಕದ ಪೀಟ್‌ ಸ್ಯಾಂಪ್ರಸ್‌ ಯುಎಸ್‌ ಓಪನ್‌ ಗೆದ್ದು ದಾಖಲೆ ಬರೆದಿದ್ದರು.

ಆಲ್ಕರಜ್‌ ಈಗ ವಿಶ್ವ ನಂ.! ಅಗ್ರಸ್ಥಾನಕ್ಕೇರಿದ ಅತಿ ಕಿರಿಯ ಟೆನಿಸಿಗ
ಹೆವಿಟ್‌ ದಾಖಲೆ ಮುರಿದ ಕಾರ್ಲೊಸ್‌
ಲಂಡನ್‌: ಕಾರ್ಲೊಸ್‌ ಆಲ್ಕರಾಜ್‌ಗೆ ಭಾನುವಾರ ಡಬಲ್‌ ಸಂಭ್ರಮ. ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದರ ಜೊತೆಗೆ ವಿಶ್ವ ಟೆನಿಸ್‌ ರಾರ‍ಯಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೂ ಏರಿದರು. ಈ ಮೂಲಕ ಅಗ್ರ ಸ್ಥಾನಕ್ಕೇರಿದ ಅತಿಕಿರಿಯ ಆಟಗಾರ ಎನ್ನುವ ದಾಖಲೆಯನ್ನು ಸ್ಪೇನ್‌ ಆಟಗಾರ ಬರೆದಿದ್ದಾರೆ. ಆಸ್ಪ್ರೇಲಿಯಾದ ಲೆಯ್ಟನ್‌ ಹೆವಿಟ್‌ 2001ರಲ್ಲಿ 20 ವರ್ಷವಿದ್ದಾಗ ನಂ.1 ಸ್ಥಾನಕ್ಕೇರಿದ್ದ ಬರೆದಿದ್ದ ದಾಖಲೆಯನ್ನು ಆಲ್ಕರಜ್‌ ಮುರಿದರು. ರುಡ್‌ ಹಾಗೂ ಆಲ್ಕರಜ್‌ ನಡುವೆ ಕೇವಲ ಟ್ರೋಫಿಗಷ್ಟೇ ಅಲ್ಲ, ನಂ.1 ಸ್ಥಾನಕ್ಕೂ ಪೈಪೋಟಿ ಇತ್ತು. ರುಡ್‌ ಚಾಂಪಿಯನ್‌ ಆಗಿದ್ದರೆ, ವಿಶ್ವ ನಂ.1 ಪಟ್ಟಅವರಿಗೇ ಒಲಿಯುತ್ತಿತ್ತು.

ಆಲ್ಕರಜ್‌ ವಿಶ್ವ ನಂ.1 ಆಗಿದ್ದು ಹೇಗೆ?
ಕಳೆದ ವರ್ಷ ಯುಎಸ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಆಲ್ಕರಜ್‌ ವಿಶ್ವ ರಾರ‍ಯಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದರು. 2022ರ ಋುತುವಿನಲ್ಲಿ ಬರೋಬ್ಬರಿ 51 ಪಂದ್ಯಗಳನ್ನು ಗೆದ್ದು ಅತಿಹೆಚ್ಚು ಪಂದ್ಯ ಗೆದ್ದ ದಾಖಲೆ ಬರೆದರು. ಜೊತೆಗೆ ವಿಂಬಲ್ಡನ್‌ನಲ್ಲಿ ರಷ್ಯಾ, ಬೆಲಾರುಸ್‌ ಆಟಗಾರರಿಗೆ ಪ್ರವೇಶ ನೀಡದ ಕಾರಣ ಆ ಟೂರ್ನಿಯಲ್ಲಿ ರಾರ‍ಯಂಕಿಂಗ್‌ ಅಂಕಗಳನ್ನು ಕೈಬಿಡಲಾಗಿತ್ತು. ಇದೇ ಕಾರಣಕ್ಕೆ ಜೋಕೋವಿಚ್‌ ಚಾಂಪಿಯನ್‌ ಆದರೂ ಅವರಿಗೆ ಅಂಕಗಳು ಸಿಗಲಿಲ್ಲ. ಹೀಗಾಗಿ ಆಲ್ಕರಜ್‌ಗೆ ವಿಶ್ವ ನಂ.1 ಸ್ಥಾನಕ್ಕೇರಲು ಇನ್ನಷ್ಟುಸುಲಭವಾಯಿತು.

ಅಂಕಣದಲ್ಲಿ ಅತಿಹೆಚ್ಚು ಸಮಯ ಕಳೆದ ದಾಖಲೆ!
ಆಲ್ಕರಜ್‌ರ ಪ್ರಶಸ್ತಿ ಹಾದಿ ಸುಲಭವಾಗಿರಲಿಲ್ಲ. ಅವರು ಟ್ರೋಫಿ ಗೆಲ್ಲಲು ಕಠಿಣ ಪೈಪೋಟಿ ಎದುರಿಸಿ, ಹೆಚ್ಚು ಪರಿಶ್ರಮ ವಹಿಸಬೇಕಾಯಿತು. ಈ ಹಾದಿಯಲ್ಲಿ ಅವರು ಗ್ರ್ಯಾನ್‌ ಸ್ಲಾಂ ಪಂದ್ಯಾವಳಿಯಲ್ಲಿ ಅತಿಹೆಚ್ಚು ಸಮಯ ಅಂಕಣದಲ್ಲಿ ಕಳೆದ ದಾಖಲೆ ಸಹ ಬರೆದರು. ಟೂರ್ನಿಯಲ್ಲಿ ಅವರು ಒಟ್ಟು 23 ಗಂಟೆ 39 ನಿಮಿಷ ಅಂಕಣದಲ್ಲಿದ್ದರು. ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ 2018ರ ವಿಂಬಲ್ಡನ್‌ನಲ್ಲಿ 23 ಗಂಟೆ 21 ನಿಮಿಷ ಅಂಕಣದಲ್ಲಿ ಕಳೆದಿದ್ದರು.

US Open 2022 ಟೆನಿಸ್ ಪಂದ್ಯ ವೀಕ್ಷಿಸಿದ ಟೀಂ ಇಂಡಿಯಾ ದಿಗ್ಗಜ ಧೋನಿ, ಕಪಿಲ್ ದೇವ್‌

ಬಾಲ್ಯದ ಕನಸು ನನಸಾಗಿದೆ
ವಿಶ್ವ ನಂ.1 ಆಗಬೇಕು, ಗ್ರ್ಯಾನ್‌ ಸ್ಲಾಂ ಚಾಂಪಿಯನ್‌ ಆಗಬೇಕು ಎನ್ನುವ ನನ್ನ ಬಾಲ್ಯದ ಕನಸು ನನಸಾಗಿದೆ. ಫೆಡರರ್‌, ರಾಫಾ, ಜೋಕೋ 20 ವರ್ಷಗಳಿಂದ ಗೆಲ್ಲುತ್ತಲೇ ಇದ್ದಾರೆ. ಅವರ ಹೋರಾಟ ನನಗೆ ಸ್ಫೂರ್ತಿ. ಅವರೊಂದಿಗೆ ನನ್ನನ್ನು ಹೋಲಿಕೆ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಅವರಂತೆ ಆಗಬೇಕು ಎನ್ನುವುದು ನನ್ನ ಗುರಿ.
-ಕಾರ್ಲೊಸ್‌ ಆಲ್ಕರಜ್‌

ವರ್ಷಪೂರ್ತಿ ದೊರೆತ ಉತ್ತಮ ಫಲಿತಾಂಶಗಳ ಬಗ್ಗೆ ಖುಷಿ ಇದೆ. ಕಾರ್ಲೊಸ್‌ ಗೆದ್ದಿದ್ದಕ್ಕೆ, ವಿಶ್ವ ನಂ.1 ಆಗಿದ್ದಕ್ಕೆ ಸಂತಸವಿದೆ. ನಾನೂ ವಿಶ್ವ ನಂ.2 ಆಗಿದ್ದೇನೆ. ಈ ಸಾಧನೆಗೆ ಹೆಮ್ಮೆ ಪಡುತ್ತೇನೆ. ನಂ.1 ಸ್ಥಾನಕ್ಕೆ ಮತ್ತಷ್ಟುಪ್ರಯತ್ನ ನಡೆಸಲು ನನಗೆ ಅವಕಾಶ ಸಿಕ್ಕಿದೆ. ಟೂರ್ನಿಯಲ್ಲಿ ನನ್ನ ಪ್ರದರ್ಶನ ಸಮಾಧಾನ ನೀಡಿದೆ.
-ಕ್ಯಾಸ್ಪರ್‌ ರುಡ್‌

20.71 ಕೋಟಿ ರು.
ಚಾಂಪಿಯನ್‌ ಆಲ್ಕರಜ್‌ಗೆ ದೊರೆತ ಬಹುಮಾನ ಮೊತ್ತ.

10.35 ಕೋಟಿ ರು.
ರನ್ನರ್‌-ಅಪ್‌ ರುಡ್‌ಗೆ ದೊರೆತ ಬಹುಮಾನ ಮೊತ್ತ.

ಎರಡೇ ವರ್ಷದಲ್ಲಿ ಆಲ್ಕರಜ್‌ ಸೂಪರ್‌ಸ್ಟಾರ್‌!
ಕಾರ್ಲೊಸ್‌ ಆಲ್ಕರಜ್‌ ಎಟಿಪಿ ಪಾದಾರ್ಪಣೆ ಮಾಡಿದ್ದು 2020ರಲ್ಲಿ. 17ನೇ ವಯಸ್ಸಿನಲ್ಲೇ ಆಸ್ಪ್ರೇಲಿಯನ್‌ ಓಪನ್‌ ಪ್ರಧಾನ ಸುತ್ತಿನಲ್ಲಿ ಆಡಿದ ಸ್ಪೇನ್‌ ಆಟಗಾರ, ಫ್ರೆಂಚ್‌ ಓಪನ್‌, ವಿಂಬಲ್ಡನ್‌, ಯುಎಸ್‌ ಓಪನ್‌ ಟೂರ್ನಿಗಳಲ್ಲೂ ಆಡಿದರು. 2022ರಲ್ಲಿ 5 ಸೇರಿ ಒಟ್ಟು 6 ಪ್ರಶಸ್ತಿಗಳನ್ನು ಗೆದ್ದಿರುವ ಆಲ್ಕರಜ್‌, 2021ರ ಮೇ ತಿಂಗಳಲ್ಲಿ ವಿಶ್ವ ರಾರ‍ಯಂಕಿಂಗ್‌ ಪಟ್ಟಿಯಲ್ಲಿ 100ರೊಳಗೆ ಪ್ರವೇಶಿಸಿದರು. ಕಳೆದ ವರ್ಷ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ಗೇರಿ ಅಗ್ರ 50ರಲ್ಲಿ ಸ್ಥಾನ ಪಡೆದರು. 2021ರಲ್ಲಿ ಕ್ರೊವೇಷಿಯಾ ಓಪನ್‌ ಜಯಿಸಿ ತಮ್ಮ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟರು.

ಟೆನಿಸ್‌ ಲೋಕಕ್ಕೆ ನಡಾಲ್‌ ಉತ್ತರಾಧಿಕಾರಿ ಸಿಕ್ಕರಾ?
6 ಅಡಿ ಎತ್ತರದ ಆಲ್ಕರಜ್‌ ಆಟ ನೋಡಿದರೆ 23 ಗ್ರ್ಯಾನ್‌ ಸ್ಲಾಂಗಳ ಒಡೆಯ ರಾಫೆಲ್‌ ನಡಾಲ್‌ರ ಆಟವನ್ನು ನೋಡಿದಂತಾಗುತ್ತದೆ. ದೀರ್ಘ ಕಾಲ ಟೆನಿಸ್‌ ಲೋಕವನ್ನು ಆಳಬಲ್ಲ ಎಲ್ಲಾ ಸಾಮರ್ಥ್ಯ, ಅರ್ಹತೆ ಆಲ್ಕರಜ್‌ರಲ್ಲಿ ಕಂಡು ಬರುತ್ತಿದೆ. ಟೆನಿಸ್‌ಗೆ ಬೇಕಿರುವ ಮೈಕಟ್ಟು, ಚುರುಕುತನ, ನಮ್ಯತೆ, ಶಕ್ತಿ ಎಲ್ಲವೂ ಇದೆ. ನಡಾಲ್‌ ಇನ್ನೇನು ನಿವೃತ್ತಿಯ ಅಂಚಿನಲ್ಲಿದ್ದು, ಆಲ್ಕರಜ್‌ ಮುಂದಿನ ಒಂದು-ಒಂದೂವರೆ ದಶಕ ಟೆನಿಸ್‌ ತಾರೆಯಾಗಿ ಮಿಂಚುವ ಲಕ್ಷಣಗಳು ಗೋಚರಿಸಿವೆ.

click me!