E-Auction ನಲ್ಲಿ ನೀವೂ ಖರೀದಿಸಬಹುದು CA ಭವಾನಿ ದೇವಿ ಬಳಸಿದ ಖಡ್ಗ..!

By Suvarna NewsFirst Published Sep 28, 2021, 4:51 PM IST
Highlights

* ಇ-ಹರಾಜಿನಲ್ಲಿ ಲಭ್ಯವಿವೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಂದ ಉಡುಗೊರೆಗಳು

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಫೆನ್ಸರ್ ಭವಾನಿ ದೇವಿ ಖಡ್ಗ ಕೂಡಾ ಹರಾಜಿನಲ್ಲಿದೆ

* ನೀವು ಮನಸ್ಸು ಮಾಡಿದರೇ ಅಮೂಲ್ಯ ಖಡ್ಗವನ್ನು E-Auction ನಲ್ಲಿ ಖರೀದಿಸಬಹುದಾಗಿದೆ

ನವದೆಹಲಿ(ಸೆ.28): ಫೆನ್ಸರ್‌ CA ಭವಾನಿ ದೇವಿ (CA Bhavani Devi) ಹೆಸರನ್ನು ಯಾರು ಕೇಳಿಲ್ಲ ಹೇಳಿ?. ಫೆನ್ಸಿಂಗ್ ಸ್ಪರ್ಧೆಯಲ್ಲಿ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಫೆನ್ಸರ್ ಎನ್ನುವ ದಾಖಲೆ ಬರೆದಿದ್ದ ಭವಾನಿ ದೇವಿ, ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೂ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಮನೆ ಮಾತಾಗಿದ್ದರು. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭವಾನಿ ದೇವಿ ಬಳಸಿದ್ದ ಖಡ್ಗ ಇ-ಹರಾಜಿನಲ್ಲಿ ಲಭ್ಯವಿದೆ. 

ಟೋಕಿಯೋ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಭವಾನಿ ದೇವಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೆನ್ಸಿಂಗ್‌ (Fencing) ನಲ್ಲಿ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆಲುವು ದಾಖಲಿಸಿದ ಮೊದಲ ಫೆನ್ಸರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಮುಂದಿನ ಪದಕ ಗೆಲ್ಲುವ ಹಾದಿಯಲ್ಲಿ ಸೋಲು ಕಾಣುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿಕೊಂಡಿದ್ದರು. ಆದರೆ ತಮ್ಮ ಮೊದಲ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೇ ಭವಾನಿ ತೋರಿದ ದಿಟ್ಟ ಹೋರಾಟ ಭಾರತೀಯರಲ್ಲಿ ಹೊಸ ಭರವಸೆ ಹಾಗೂ ಆಶಾವಾದವನ್ನು ಹುಟ್ಟುಹಾಕಿದೆ. 

ತಮಿಳುನಾಡು (Tamil Nadu) ಮೂಲದ CA ಭವಾನಿ ದೇವಿ ಪೂರ್ಣ ಹೆಸರು ಚಂಡಲವಾಡ ಆನಂದ ಸುಂದರರಾಮನ್‌ ಭವಾನಿ ದೇವಿ. 2003ರಲ್ಲಿ ಭವಾನಿ ದೇವಿ ಕ್ರೀಡೆಯತ್ತ ಒಲವು ತೋರಿದರು. ಆದರೆ ಫೆನ್ಸಿಂಗ್ ಅವರ ಮೊದಲ ಆಯ್ಕೆಯಾಗಿರಲಿಲ್ಲ. ಭವಾನಿ ಫೆನ್ಸಿಂಗ್‌ ಕ್ರೀಡೆಯನ್ನು ಆಯ್ದುಕೊಂಡಿದ್ದರ ಹಿಂದೆ ರೋಚಕ ಕಥೆಯೇ ಇದೆ. ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದರೆ, ಪ್ರತಿ ತರಗತಿಯಲ್ಲಿ ಕೇವಲ 6 ಮಂದಿ ಮಾತ್ರ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಭವಾನಿ ಹೆಸರು ಬರುವಷ್ಟರಲ್ಲಿ ಎಲ್ಲಾ ಕ್ರೀಡೆಗೆ ಮಕ್ಕಳು ಆಯ್ಕೆಯಾಗಿದ್ದರು. ವಿಧಿ ಬರಹ ಹೇಗಿತ್ತು ಎಂದರೆ ಯಾವೊಬ್ಬ ಮಗುವು ಫೆನ್ಸಿಂಗ್ ಆಯ್ದುಕೊಂಡಿರಲಿಲ್ಲ. ಹೀಗಾಗಿ ಯಾವುದೇ ಹೋರಾಟವಿಲ್ಲದೇ ಭವಾನಿ ದೇವಿ ಫೆನ್ಸಿಂಗ್‌ನಲ್ಲಿ ಆಯ್ಕೆಯಾದರು. ಇದಾದ ಬಳಿಕ ಫೆನ್ಸಿಂಗ್‌ನಲ್ಲಿ ಗಮನಕೊಟ್ಟು ಅಭ್ಯಾಸ ನಡೆಸಿದರು. ಇದಾದ ಬಳಿಕ ನಡೆದದ್ದು ಈಗ ಇತಿಹಾಸ.

10 ಕೋಟಿ ರೂ ದಾಟಿದ ಚಿನ್ನದ ಹುಡುಗ ನೀರಜ್‌ ಜಾವೆಲಿನ್‌, ಲೊವ್ಲಿನಾ ಬಾಕ್ಸಿಂಗ್ ಗ್ಲೌಸ್‌ E ಹರಾಜು..!
 
ಭವಾನಿ ದೇವಿ ಫೆನ್ಸಿಂಗ್‌ ಸ್ಪರ್ಧೆಯಲ್ಲಿ 8 ಬಾರಿ ನ್ಯಾಷನಲ್ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇನ್ನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಮೊದಲ ಪಂದ್ಯ ಗೆದ್ದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು ಭವಾನಿ ದೇವಿ. ಭಾರತಕ್ಕೆ ವಾಪಾಸಾಗುತ್ತಿದ್ದಂತೆಯೇ ಭವಾನಿ ದೇವಿಯವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿಯಾಗಿ ಸನ್ಮಾನಿಸಿದ್ದರು. ಇದೇ ವೇಳೆ ಭವಾನಿ ದೇವಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಾವು ಬಳಸಿದ್ದ ಖಡ್ಗವನ್ನ ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು.

ಈ ಐತಿಹಾಸಿಕ ಖಡ್ಗವೀಗ ದೇಶದ ಹೆಮ್ಮೆ ಎನಿಸಿದೆ. ನೀವು ಮನಸ್ಸು ಮಾಡಿದರೆ ಈ ಖಡ್ಗವನ್ನು ಎಂದೆಂದಿಗೂ ನಿಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ ಬಂದಿದೆ. ಭವಾನಿ ದೇವಿ ಬಳಸಿದ ಖಡ್ಗವೂ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ರೂಪದಲ್ಲಿ ಬಂದಂತಹ ಅಮೂಲ್ಯ ವಸ್ತುಗಳನ್ನು E-Auction(ಇ-ಹರಾಜು)ಗೆ ಇಡಲಾಗಿದೆ. ಸೆಪ್ಟೆಂಬರ್ 17ರಿಂದ ಇ-ಹರಾಜು ಆರಂಭವಾಗಿದ್ದು, ಅಕ್ಟೋಬರ್ 07ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. https://pmmementos.gov.in/#/ ಲಿಂಕ್‌ ಮೂಲಕ ನೀವೂ ಹರಾಜಿನಲ್ಲಿ ಪಾಲ್ಗೊಂಡು ನಿಮ್ಮ ಆಯ್ಕೆಯ ಅಮೂಲ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ.

ನಮಾಮಿ ಗಂಗೆಗೆ ಹಣ ಬಳಕೆ: ಈ ಮೊದಲು ಸಹಾ ಪ್ರಧಾನಿ ಮೋದಿಯವರಿಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಲಾಗಿತ್ತು. 2019ರಲ್ಲಿ ನಡೆದ ಅಮೂಲ್ಯ ವಸ್ತುಗಳ ಹರಾಜಿನಲ್ಲಿ ಸರ್ಕಾರದ ಬೊಕ್ಕಸಕ್ಕೆ 15.13 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಪ್ರಧಾನಿ ಮೋದಿಯವರ ಮಾರ್ಗದರ್ಶನದಂತೆ ಹರಾಜಿನಿಂದ ಸಂಗ್ರಹವಾದ ಹಣವನ್ನು ಗಂಗಾ ನದಿಯ ಪುನರುಜ್ಜೀವನಕ್ಕೆ ಬಳಸಲು ತೀರ್ಮಾನಿಸಿ ನಮಾಮಿ ಗಂಗೆಕೋಶ್‌ ನಿಧಿಗೆ ಅರ್ಪಿಸಲಾಗಿತ್ತು. ಈ ಬಾರಿ ಕೂಡಾ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಗಂಗಾ ನದಿ ಶುದ್ದೀಕರಣಕ್ಕೆ ಬಳಸಲು ತೀರ್ಮಾನಿಸಲಾಗಿದೆ.
 

click me!