* ಕುಸ್ತಿ ಫೆಡರೇಷನ್ ಕ್ಷಮೆಯಾಚಿಸಿದ ವಿನೇಶ್ ಫೋಗಾಟ್
* ನಾರ್ವೆನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ವಿನೇಶ್‌ಗೆ ಅವಕಾಶ ಸಿಗುವುದು ಅನುಮಾನ
* ವಿನೇಶ್‌ಗೆ ಡಬ್ಲ್ಯುಎಫ್‌ಐ ಆಗಸ್ಟ್ 16ರೊಳಗೆ ಉತ್ತರಿಸುವಂತೆ ನೋಟಿಸ್ ನೀಡಿತ್ತು.
ನವದೆಹಲಿ(ಆ.16): ಅಮಾನತುಗೊಂಡಿರುವ ತಾರಾ ಕುಸ್ತಿಪಟು ವಿನೇಶ್ ಫೋಗಾಟ್, ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಕ್ಷಮೆಯಾಚಿಸಿದ್ದಾರೆ. ಆದರೂ ಅವರನ್ನು ಅಕ್ಟೋಬರ್‌ನಲ್ಲಿ ನಾರ್ವೆನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಕಳುಹಿಸುವುದು ಅನುಮಾನವೆನಿಸಿದೆ.
ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಚ್ಚರಿಯ ಸೋಲು ಅನುಭವಿಸಿದ ವಿನೇಶ್, ಭಾರತದ ಇತರ ಕ್ರೀಡಾಪಟುಗಳೊಂದಿಗೆ ಕ್ರೀಡಾಗ್ರಾಮದಲ್ಲಿ ಉಳಿಯಲಿಲ್ಲ. ತಂಡದ ಅಧಿಕೃತ ಪ್ರಾಯೋಜಕರ ಸಂಸ್ಥೆಯ ಲೋಗೋ ಇರುವ ಉಡುಪು ಧರಿಸಲಿಲ್ಲ ಎನ್ನುವ ಕಾರಣಕ್ಕೆ ಕುಸ್ತಿ ಫೆಡರೇಷನ್ ವಿನೇಶ್‌ರನ್ನು ಅಮಾನತುಗೊಳಿಸಿತ್ತು. ಆಗಸ್ಟ್ 16ರೊಳಗೆ ಉತ್ತರಿಸುವಂತೆ ವಿನೇಶ್‌ಗೆ ಡಬ್ಲ್ಯುಎಫ್‌ಐ ನೋಟಿಸ್ ನೀಡಿತ್ತು.
ಕುಸ್ತಿಪಟು ವಿನೇಶ್ ಫೋಗಾಟ್ ಶೀಘ್ರ ನಿವೃತ್ತಿ ಘೋಷಣೆ?
ಕೆಲ ದಿನಗಳ ಹಿಂದಷ್ಟೇ ವಿನೇಶ್ ನಿವೃತ್ತಿಯ ಸುಳಿವನ್ನೂ ನೀಡಿದ್ದರು. ಈ ಸಂಬಂಧ ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಲೇಖನ ಬರೆದಿದ್ದ ಪೋಗಾಟ್, ‘ಒಂದು ಪದಕ ಕಳೆದುಕೊಂಡರೆ ಭಾರತದಲ್ಲಿ ನೀವು ಏರಿದಷ್ಟೇ ವೇಗವಾಗಿ ಕೆಳಕ್ಕೆ ಬೀಳುತ್ತೀರಿ ಎಂದು ನನಗೆ ಗೊತ್ತಿತ್ತು. ಈಗ ಎಲ್ಲವೂ ಮುಗಿದಿದೆ. ನಾನು ಯಾವಾಗ ಕುಸ್ತಿಗೆ ಮರಳುತ್ತೇನೆಂದು ಗೊತ್ತಿಲ್ಲ. ಬಹುಶಃ ನಾನು ವಾಪಸಾಗದೆಯೂ ಇರುಬಹುದು. 2016ರ ಒಲಿಂಪಿಕ್ಸ್‌ನಲ್ಲಿ ಕಾಲು ಮುರಿದುಕೊಂಡಿದ್ದೆ. ಅದರಿಂದ ನಾನು ಚೇತರಿಸಿಕೊಂಡೆ. ಆದರೆ ಈಗ ನನ್ನ ದೇಹ ಸರಿ ಇದ್ದರೂ, ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ’ ಎಂದಿದ್ದರು.