"ವಿನೇಶ್‌ ಫೋಗಟ್‌ದೂ ತಪ್ಪಿದೆ..": ಅಚ್ಚರಿ ಹೇಳಿಕೆ ಕೊಟ್ಟ ಸೈನಾ ನೆಹ್ವಾಲ್‌..!

By Naveen Kodase  |  First Published Aug 7, 2024, 6:51 PM IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹವಾಗಿದ್ದಾರೆ. ಈ ಕುರಿತಂತೆ ಮಾಜಿ ಒಲಿಂಪಿಯನ್ ಸೈನಾ ನೆಹ್ವಾಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.


ಪ್ಯಾರಿಸ್: ಬಹುನಿರೀಕ್ಷಿತ ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ ಫೋಗಟ್ ಪದಕ ಗೆಲ್ಲುವ ಕನಸು ನುಚ್ಚುನೂರಾಗಿದೆ. ಕೇವಲ 100 ಗ್ರಾಮ್ ತೂಕ ಹೆಚ್ಚಾಗಿದ್ದರಿಂದ ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್‌ ಫೈನಲ್ ಸ್ಪರ್ಧೆಯಿಂದಲೇ ಹೊರಬಿದ್ದಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಈ ನಿರ್ಧಾರದ ಬಗ್ಗೆ ಭಾರತದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. 

ವಿನೇಶ್ ಫೋಗಟ್ ಮಹಿಳೆಯರ 50 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಘಟಾನುಘಟಿ ಕುಸ್ತಿಪಟುಗಳನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಅಪರೂಪದ ದಾಖಲೆ ನಿರ್ಮಿಸಿದ್ದರು. ಆದರೆ ದುರಂತವೆಂಬತೆ ಇದೀಗ ವಿನೇಶ್ ಫೋಗಟ್ ಬರಿಗೈನಲ್ಲಿ ವಾಪಾಸ್ ಬರುವಂತಾಗಿದೆ. 

Tap to resize

Latest Videos

undefined

ಪ್ರತಿ ಫೈನಲ್‌ ಪಂದ್ಯಕ್ಕೂ ಮುನ್ನ ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ಅದೇ ರೀತಿ ವಿನೇಶ್ ಫೋಗಟ್ ಅವರ ತೂಕವನ್ನು ಪರೀಕ್ಷಿಸಿದಾಗ ಅವರ ನಿಗದಿತ 50 ಕೆಜಿ ತೂಕಕ್ಕಿಂತ ಕೇವಲ 100 ಗ್ರಾಮ್ ಹೆಚ್ಚಿರುವುದು ಪತ್ತೆಯಾಗಿದೆ. ಹೀಗಾಗಿ ಅವರನ್ನು ಫೈನಲ್ ಆಡದಂತೆ ಅನರ್ಹಗೊಳಿಸಲಾಯಿತು. ಈ ವಿಚಾರದ ಕುರಿತಂತೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

ಇದೀಗ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈನಾ ನೆಹ್ವಾಲ್, "ನಾನು ಕಳೆದ ಎರಡು ಮೂರು ದಿನಗಳಿಂದ ಆಕೆಗಾಗಿ ಚಿಯರ್ ಮಾಡುತ್ತಿದ್ದೆ. ಈ ಕ್ಷಣಕ್ಕಾಗಿ ಪ್ರತಿಯೊಬ್ಬ ಅಥ್ಲೀಟ್ ಕೂಡಾ ಸಾಕಷ್ಟು ಶ್ರಮ ಹಾಕಿರುತ್ತಾರೆ. ಆಕೆಗೆ ಈಗ ಏನನಿಸುತ್ತಿದೆ ಎಂದು ನನಗೂ ಗೊತ್ತಿದೆ. ಅಥ್ಲೀಟ್‌ ಆಗಿ ನಾನು ಏನು ಮಾತನಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಅವರೊಬ್ಬರು ಹೋರಾಟಗಾರ್ತಿ. ಅವರು ಖಂಡಿತವಾಗಿಯೂ ಭರ್ಜರಿಯಾಗಿಯೇ ಕಮ್‌ ಬ್ಯಾಕ್ ಮಾಡುತ್ತಾರೆ. ಮುಂದಿನ ಬಾರಿ ಖಂಡಿತವಾಗಿಯೂ ಆಕೆ ಪದಕ ತರುವ ವಿಶ್ವಾಸವಿದೆ" ಎಂದು ಸೈನಾ ಹೇಳಿದ್ದಾರೆ.

'100 ಗ್ರಾಮ್ ಲೆಕ್ಕವೇ ಅಲ್ಲ..!': ವಿನೇಶ್ ಅನರ್ಹತೆ ಬಗ್ಗೆ ತುಟಿಬಿಚ್ಚಿದ ಬಾಕ್ಸಿಂಗ್ ಹೀರೋ ವಿಜೇಂದರ್ ಸಿಂಗ್

"ಅವರೊಬ್ಬರು ಅನುಭವಿ ಅಥ್ಲೀಟ್. ಆಕೆಗೆ ಯಾವುದು ಸರಿ ಯಾವುದು ತಪ್ಪು ಎನ್ನುವುದು ಗೊತ್ತಿದೆ. ನನಗೆ ಕುಸ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಘಟನೆಯ ಕುರಿತಂತೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯೇ ಎನ್ನುವುದು ಗೊತ್ತಿಲ್ಲ. ಆಕೆಗೆ ಖಂಡಿತ ರೂಲ್ಸ್‌ಗಳ ಬಗ್ಗೆ ಗೊತ್ತಿದೆ. ಅವರೇನು ತಪ್ಪು ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ. ಅವರು ಎಷ್ಟು ಪರಿಶ್ರಮ ಪಡುತ್ತಿದ್ದರು ಎನ್ನುವುದು ನನಗೆ ಗೊತ್ತಿದೆ. ಅವರು 100% ಹೋರಾಟ ಮಾಡಿದ್ದಾರೆ" ಎಂದು ಸೈನಾ ಹೇಳಿದ್ದಾರೆ.

"ಈ ಹಂತಕ್ಕೆ ಬಂದ ಮೇಲೆ ಸಾಮಾನ್ಯವಾಗಿ ಅಥ್ಲೀಟ್‌ಗಳಿಗೆ ಅನ್ಯಾಯವಾಗಬಾರದು. ಇದು ಹೇಗಾಯ್ತು ಎನ್ನುವುದೇ ಪ್ರಶ್ನಾರ್ಥಕ. ಯಾಕೆಂದರೆ ಆಕೆಯ ಜತೆಗೆ ದೊಡ್ಡ ತಂಡವೇ ಇದೆ. ಆಕೆಯ ಜತೆ ಸಾಕಷ್ಟು ಕೋಚ್‌ಗಳು, ಫಿಸಿಯೋಗಳು, ಟ್ರೈನರ್‌ಗಳಿದ್ದಾರೆ. ಅವರೆಲ್ಲರಿಗೂ ಬೇಸರವಾಗಿದೆ. ನನಗೆ ರೂಲ್ಸ್‌ಗಳ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನಾನೊಬ್ಬ ಅಥ್ಲೀಟ್‌ ಆಗಿ ಈ ಘಟನೆ ತುಂಬಾ ಬೇಸರವನ್ನುಂಟು ಮಾಡಿದೆ ಎಂದು ಸೈನಾ ಹೇಳಿದ್ದಾರೆ.

ವಿನೇಶ್ ಫೋಗಟ್ ಒಲಿಂಪಿಕ್ಸ್‌ ಫೈನಲ್‌ನಿಂದ ಅನರ್ಹವಾಗಿದ್ದೇಕೆ? ಅಷ್ಟಕ್ಕೂ ರೂಲ್ಸ್ ಏನು ಹೇಳುತ್ತೆ..?

"ವಿನೇಶ್ ಫೋಗಟ್ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಆಕೆಗಿದು ಮೂರನೇ ಒಲಿಂಪಿಕ್ಸ್‌. ಅಥ್ಲೀಟ್‌ ಆಗಿ ಆಕೆಗೆ ರೂಲ್ಸ್‌ಗಳು ಗೊತ್ತಿರಬೇಕು. ಒಂದು ವೇಳೆ ಮಿಸ್ಟೇಕ್ ಆಗಿದ್ದೇ ಆದರೆ, ಅದು ಹೇಗಾಯ್ತು ಎನ್ನುವುದು ಗೊತ್ತಿಲ್ಲ. ಇಂತಹ ದೊಡ್ಡ ವೇದಿಕೆಯಲ್ಲಿ ಈ ರೀತಿಯ ಘಟನೆ ಬೇರೆ ಕುಸ್ತಿಪಟುಗಳಿಗೆ ಆಗಿದ್ದನ್ನು ನಾನಂತೂ ಕೇಳಿಲ್ಲ. ಅವರೊಬ್ಬರು ಅನುಭವಿ ಅಥ್ಲೀಟ್. ಎಲ್ಲೋ ಒಂದು ಕಡೆ ವಿನೇಶ್ ಫೋಗಟ್ ಅವರಿಂದಲೂ ತಪ್ಪುಗಳು ಆಗಿರಬಹುದು. ಇಷ್ಟು ದೊಡ್ಡ ಪಂದ್ಯಕ್ಕೂ ಮುನ್ನ ಇಂತಹ ತಪ್ಪ ನಡೆಯುವುದು ಸರಿಯಲ್ಲ. ಹೀಗಾಗಿ ಅವರೂ ಕೂಡಾ ಈ ತಪ್ಪಿನ ಭಾಗಿದಾರರೇ" ಎಂದು ಸೈನಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

"ವಿನೇಶ್ ಓರ್ವ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್‌ ಗೇಮ್ಸ್ ಚಾಂಪಿಯನ್. ಎಲ್ಲೋ ಒಂದು ಕಡೆ ವಿನೇಶ್ ಕಡೆಯಿಂದಲೂ ತಪ್ಪುಗಳಾಗಿರಬಹುದು. ಇಂತಹ ದೊಡ್ಡ ಪಂದ್ಯಕ್ಕೂ ಮುನ್ನ ಅಥ್ಲೀಟ್‌ಗಳು ತಮ್ಮ ತೂಕ ನಿಗದಿಗಿಂತ ಮೀರಿರಬಾರದು ಎನ್ನುವ ಅರಿವು ಅವರಿಗೂ ಇರಬೇಕು. ಈ ತಪ್ಪು ಹೇಗಾಯಿತು ಎನ್ನುವುದನ್ನು ಅವರು ಇಲ್ಲವೇ ಅವರ ಕೋಚ್ ಅಷ್ಟೇ ಹೇಳಬೇಕು. ಆದರೆ ನಾವು ಒಂದು ಪದಕ ಕಳೆದುಕೊಂಡಿದ್ದಕ್ಕೆ ತುಂಬಾ ನಿರಾಸೆಯಾಗಿದೆ" ಎಂದು ಲಂಡನ್ ಒಲಿಂಪಿಕ್ ಪದಕ ವಿಜೇತೆ ಸೈನಾ ಹೇಳಿದ್ದಾರೆ.

click me!