French Open 2022: ಫ್ರಾನ್ಸ್‌ನಲ್ಲಿ ಲಸಿಕೆ ನಿಯಮ ಬದಲು, ಫ್ರೆಂಚ್ ಓಪನ್‌ ಟೂರ್ನಿಗೆ ಜೋಕೋವಿಚ್?

By Suvarna News  |  First Published Jan 26, 2022, 1:34 PM IST

* ನೊವಾಕ್ ಜೋಕೋವಿಚ್ ಪಾಲಿಗೆ ಫ್ರೆಂಚ್ ಸರ್ಕಾರ ಗುಡ್‌ ನ್ಯೂಸ್..?

* ಫ್ರಾನ್ಸ್‌ನಲ್ಲಿ ಕೋವಿಡ್‌ ಲಸಿಕೆ ನಿಯಮ ಮತ್ತೆ ಬದಲಾಗಿದೆ

* ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿಫಲವಾಗಿದ್ದ ಜೋಕೋ


ಪ್ಯಾರಿಸ್(ಜ.26)‌: ಕೋವಿಡ್‌ ಲಸಿಕೆ (COVID vaccine) ಪಡೆಯದಿದ್ದರೂ ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೊವಾಕ್‌ ಜೋಕೋವಿಚ್‌ಗೆ (Novak Djokovic) ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನಲ್ಲಿ (French Open Grand Slam) ಆಡಲು ಅವಕಾಶ ಸಿಗುವ ಸಾಧ್ಯತೆ ಇದೆ. ಫ್ರಾನ್ಸ್‌ನಲ್ಲಿ ಕೋವಿಡ್‌ ಲಸಿಕೆ ನಿಯಮ ಮತ್ತೆ ಬದಲಾಗಿದ್ದು, ಹೊಸ ನಿಯಮದ ಪ್ರಕಾರ 6 ತಿಂಗಳಲ್ಲಿ ಸೋಂಕಿತರಾದವರು ಲಸಿಕೆ ಪಡೆಯದಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಅವಕಾಶ ಸಿಗಲಿದೆ. ಇದಕ್ಕಾಗಿ ಕೋವಿಡ್‌ ಪಾಸ್‌ ವಿತರಿಸಲಾಗುತ್ತದೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. 

ಡಿಸೆಂಬರ್ 16ರಂದು ಸೋಂಕು ತಗುಲಿತ್ತು ಎಂದು ಜೋಕೋವಿಚ್‌, ಆಸ್ಪ್ರೇಲಿಯನ್‌ ಓಪನ್‌ (Australian Open) ಆಯೋಜಕರಿಗೆ ಸಲ್ಲಿಸಿದ ದಾಖಲೆಗಳಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಅವರಿಗೆ ಲಸಿಕೆ ಪಡೆಯಲು ಜೂನ್‌ 2ನೇ ವಾರದ ವರೆಗೂ ಸಮಯವಿರಲಿದೆ. ಮೇ ಕೊನೆ ವಾರದಲ್ಲೇ ಫ್ರೆಂಚ್‌ ಓಪನ್‌ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಜೋಕೋವಿಚ್‌ಗೆ ವಿನಾಯಿತಿ ದೊರೆಯಬಹುದು ಎನ್ನಲಾಗಿದೆ.

Tap to resize

Latest Videos

ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ನೊವಾಕ್ ಜೋಕೋವಿಚ್‌ ಮೆಲ್ಬರ್ನ್‌ಗೆ ಬಂದಿಳಿದಿದ್ದರು. ಆದರೆ ಕೋವಿಡ್ ಲಸಿಕೆ ಪಡೆಯದ ಹಿನ್ನೆಲೆಯಲ್ಲಿ ವರ್ಷದ ಮೊದಲ ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಳ್ಳಲು ಜೋಕೋಗೆ ಆಸ್ಟ್ರೇಲಿಯಾ ಸರ್ಕಾರವು ಅನುಮತಿ ನೀಡಿರಲಿಲ್ಲ.

ಇದರ ಬೆನ್ನಲ್ಲೇ ಫ್ರಾನ್ಸ್ ಸರ್ಕಾರವು ಒಂದು ವೇಳೆ ಕೋವಿಡ್‌ ಲಸಿಕೆ ಪಡೆಯದ ಯಾರೊಬ್ಬರಿಗೂ ರೋಲ್ಯಾಂಡ್ ಗ್ಯಾರೋಸ್(ಫ್ರೆಂಚ್ ಓಪನ್) ಟೂರ್ನಿಯಲ್ಲಿ ಸ್ಟೇಡಿಯಂ, ರೆಸ್ಟೋರೆಂಟ್, ಬಾರ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ಆರಂಭದಲ್ಲೇ ಪ್ರಕಟಣೆ ಹೊರಡಿಸಿತ್ತು. ಫ್ರಾನ್ಸ್ ಸರ್ಕಾರವು ಕೋವಿಡ್ ನಿಯಮಾವಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಪ್ರಕಟಿಸಿದ ಬೆನ್ನಲ್ಲೇ ಮಾತನಾಡಿದ್ದ ಫ್ರಾನ್ಸ್ ಕ್ರೀಡಾಸಚಿವ ರೊಕ್ಸಾನ, ದೇಶದಲ್ಲಿ ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ದೇಶದ ಸ್ಟೇಡಿಯಂಗಳಿಗೆ, ಥಿಯೇಟರ್‌ಗಳಿಗೆ ಹಾಗೂ ಪ್ರದರ್ಶನ ಕೇಂದ್ರಗಳಿಗೆ ಪ್ರವೇಶ ಪಡೆಯಲು ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಇನ್ನು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ವೀಕ್ಷಕರಿಗೆ, ಪಾಲ್ಗೊಳ್ಳುವ ದೇಶಿ ಹಾಗೂ ವಿದೇಶಿ ಸ್ಪರ್ಧಾಳುಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದರು.

French Open:ಲಸಿಕೆ ಪಡೆಯದಿದ್ರೆ ಜೋಕೋವಿಚ್‌ಗೆ ಫ್ರಂಚ್‌ ಓಪನ್‌ಗೂ ಇಲ್ಲ ಎಂಟ್ರಿ..!

ಆದರೆ ಇದೀಗ ಲಸಿಕೀಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ(ಜ.25)ದಂದು ಹೊಸ ಕಾನೂನೊಂದನ್ನು ಜಾರಿಗೆ ತಂದಿದ್ದು, ಕಳೆದ ಆರು ತಿಂಗಳಿನೊಳಗಾಗಿ ಕೋವಿಡ್‌ 19 ಸೋಂಕು ತಗುಲಿದ್ದರ ಕುರಿತಂತೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಲಸಿಕೆ ಪಡೆಯುವುದಕ್ಕೆ ವಿನಾಯ್ತಿ ನೀಡಲು ಫ್ರಾನ್ಸ್ ಸರ್ಕಾರವು ತೀರ್ಮಾನಿಸಿದೆ. ಇನ್ನು ನೊವಾಕ್ ಜೋಕೋವಿಚ್ ತಮಗೆ ಡಿಸೆಂಬರ್ ಮಧ್ಯದ ಸಂದರ್ಭದಲ್ಲಿ ಕೋವಿಡ್ ತಗುಲಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಮೇ ಹಾಗೂ ಜೂನ್ ವೇಳೆಯಲ್ಲಿ ನಡೆಯಲಿರುವ ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಳ್ಳಲು ಜೋಕೋವಿಚ್‌ಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ವಿಶ್ವದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್‌ ಸದ್ಯ 20 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆಲ್ಲುವುದರ ಮೂಲಕ ಟೆನಿಸ್ ದಿಗ್ಗಜರಾದ ರಾಫೆಲ್ ನಡಾಲ್(Rafael Nadal) ಹಾಗೂ ರೋಜರ್ ಫೆಡರರ್ (Roger Federer) ಜತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಸ್ವಿಸ್ ಟೆನಿಸ್ ದಂತಕಥೆ ರೋಜರ್‌ ಫೆಡರರ್ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ಇನ್ನು ಸ್ಪೇನ್‌ ಟೆನಿಸಿಗ ರಾಫೆಲ್ ನಡಾಲ್ ಸದ್ಯ ಸೆಮಿಫೈನಲ್‌ ಪ್ರವೇಶಿಸಿದ್ದು, ಟೂರ್ನಿಯಲ್ಲಿ ಇನ್ನು ಕೇವಲ 2 ಜಯ ಸಾಧಿಸಿದರೆ, ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಯು ರಾಫೆಲ್ ನಡಾಲ್ ಪಾಲಾಗಲಿದೆ.

click me!