ಗಾಯದ ಸಮಸ್ಯೆಯಿಂದಾಗಿ ಕಳೆದೆರಡು ವರ್ಷಗಳಿಂದ ಟೆನಿಸ್’ನಿಂದ ದೂರವೇ ಉಳಿದಿದ್ದ ಬ್ರಿಟನ್ ಟೆನಿಸ್ ದಿಗ್ಗಜ ಆ್ಯಂಡಿ ಮರ್ರೆ ಕೊನೆಗೂ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಭರ್ಜರಿಯಾಗಿಯೇ ಟೆನಿಸ್ ಅಂಕಣಕ್ಕೆ ಮರಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಲ್ಜಿಯಂ(ಅ.22): ಸೊಂಟದ ಶಸ್ತ್ರಚಿಕಿತ್ಸೆಯಿಂದಾಗಿ ಟೆನಿಸ್ಗೆ ವಿದಾಯ ಘೋಷಿಸುವುದಾಗಿ ಪ್ರಕಟಿಸಿದ್ದ ಮಾಜಿ ನಂ.1 ಟೆನಿಸಿಗ, ಬ್ರಿಟನ್ನ ಆ್ಯಂಡ್ರಿ ಮರ್ರೆ ಇತ್ತೀಚೆಗಷ್ಟೇ ವೃತ್ತಿಪರ ಟೆನಿಸ್ಗೆ ವಾಪಸಾಗಿದ್ದರು.
ನಿವೃತ್ತಿಯಿಂದ ಹೊರಬಂದ ಮರ್ರೆಗೆ ಡಬಲ್ಸ್’ನಲ್ಲಿ ಮೊದಲ ಪ್ರಶಸ್ತಿ
ಹಲವು ತಿಂಗಳು ಕಾಲ ಟೆನಿಸ್ನಿಂದ ದೂರವಿದ್ದ ಮರ್ರೆ, ನಿವೃತ್ತಿ ನಿರ್ಧಾರ ಹಿಂಪಡೆದ ಬಳಿಕ ಸಿಂಗಲ್ಸ್ನಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ಇಲ್ಲಿ ಮುಕ್ತಾಯಗೊಂಡ ಯುರೋಪಿಯನ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಸ್ವಿಜರ್ಲೆಂಡ್ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ವಿರುದ್ಧ 3-6, 6-4, 6-4 ಸೆಟ್ಗಳಲ್ಲಿ ಗೆಲುವು ಸಾಧಿಸಿದರು. 2 ವರ್ಷಗಳಲ್ಲಿ ಇದು ಅವರ ಮೊದಲ ಪ್ರಶಸ್ತಿ. ಈ ಗೆಲುವಿನೊಂದಿಗೆ 116 ಸ್ಥಾನಗಳ ಏರಿಕೆ ಕಂಡಿರುವ ಮರ್ರೆ, ವಿಶ್ವ ರ್ಯಾಂಕಿಂಗ್ನಲ್ಲಿ 127ನೇ ಸ್ಥಾನ ಪಡೆದಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ
ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ 32 ವರ್ಷದ ಆ್ಯಂಡಿ ಮರ್ರೆ, ನಾನು ಈ ಗೆಲುವನ್ನು ನಿರೀಕ್ಷಿಸಿರಲಿಲ್ಲ. ಇಷ್ಟು ಬೇಗ ಪ್ರಶಸ್ತಿ ಜಯಿಸುತ್ತೇನೆ ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಆ್ಯಂಡಿ ಮರ್ರೆ ಸಾಧನೆಯನ್ನು ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ ದೇಶದವರೇ ಆದ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಅವರನ್ನು ಮಣಿಸಿದ ಮರ್ರೆಯನ್ನು ಕೊಂಡಾಡಿದ್ದಾರೆ. ಆ್ಯಂಡಿಯ ಸಾಧನೆ ನಿಜಕ್ಕೂ ಅತ್ಯದ್ಭುತ. ಸ್ಟ್ಯಾನಿಸ್ಲಾಸ್ ವಾವ್ರಿಂಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಒಳ್ಳೆಯ ಕಮ್’ಬ್ಯಾಕ್ ಮಾಡಿದರು. ಆ್ಯಂಡಿ ಆರೋಗ್ಯ ಚೇತರಿಸಿಕೊಂಡಿದ್ದು ನೋಡಿ ಖುಷಿ ಎನಿಸುತ್ತಿದೆ ಎಂದು ಹೇಳಿದ್ದಾರೆ.