ಸ್ಪೇನ್‌ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಸೈನಾ-ಸಮೀರ್ ಲಗ್ಗೆ

By Suvarna NewsFirst Published Feb 21, 2020, 10:23 AM IST
Highlights

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಲು ದಿಟ್ಟ ಹೆಜ್ಜೆಯಿಟ್ಟಿರುವ ಸೈನಾ ನೆಹ್ವಾಲ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನು ಶ್ರೀಕಾಂತ್ ಎರಡನೇ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಬಾರ್ಸಿಲೋನಾ(ಫೆ.21): ಲಂಡನ್‌ ಒಲಿಂಪಿಕ್ಸ್‌ ಕಂಚು ವಿಜೇತೆ ಭಾರತದ ಸೈನಾ ನೆಹ್ವಾಲ್‌ ಹಾಗೂ ಸಮೀರ್‌ ವರ್ಮಾ, ಇಲ್ಲಿ ನಡೆಯುತ್ತಿರುವ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಾಜಿ ವಿಶ್ವ ನಂ.1 ಶಟ್ಲರ್‌ ಭಾರತದ ಕಿದಂಬಿ ಶ್ರೀಕಾಂತ್‌ 2ನೇ ಸುತ್ತಲ್ಲಿ ಸೋತು ಹೊರಬಿದ್ದಿದ್ದಾರೆ.

ಸ್ಪೇನ್‌ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೈನಾ, ಶ್ರೀಕಾಂತ್‌ ಶುಭಾರಂಭ

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ, ಉಕ್ರೇನ್‌ನ ಮರಿಯಾ ಉಲ್ಟಿನಾ ವಿರುದ್ಧ 21-10, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೈನಾ, ಥಾಯ್ಲೆಂಡ್‌ನ ಒಂಗ್‌ಬಮೃಂಗ್‌ಪಾನ್‌ ಎದುರು ಸೆಣಸಲಿದ್ದಾರೆ.

ಶ್ರೀಕಾಂತ್‌ಗೆ ನಿರಾಸೆ:

ಪುರುಷರ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಕೆ.ಶ್ರೀಕಾಂತ್‌, ಭಾರತದವರೇ ಆದ ಅಜಯ್‌ ಜಯರಾಮ್‌ ವಿರುದ್ಧ 6-21, 17-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಈ ಜಯದೊಂದಿಗೆ ಅಜಯ್‌ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು. ಮತ್ತೊಂದು ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ, ಜರ್ಮನಿಯ ಕೈ ಸ್ಚಫೇರ್‌ ವಿರುದ್ಧ 21-14, 16-21, 21-15 ಗೇಮ್‌ಗಳಲ್ಲಿ ಗೆಲುವು ಪಡೆದರು.

ಡಬಲ್ಸ್‌ ಜೋಡಿ ಔಟ್‌

ಮಿಶ್ರ ಡಬಲ್ಸ್‌ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ, ಬಲ್ಗೇರಿಯಾದ ಗ್ಯಾಬ್ರಿಲಾ-ಸ್ಟೆಫಾನಿ ಜೋಡಿ ಎದುರು 18-21, 14-21 ಗೇಮ್‌ಗಳಲ್ಲಿ ಸೋಲುಂಡಿತು. ಮಿಶ್ರ ಡಬಲ್ಸ್‌ ಪಂದ್ಯದಲ್ಲಿ ಸಿಕ್ಕಿ ರೆಡ್ಡಿ ಹಾಗೂ ಪ್ರಣವ್‌ ಜೆರ್ರಿ ಚೋಪ್ರಾ ಜೋಡಿ, ಅಗ್ರ ಶ್ರೇಯಾಂಕಿತ ಮಲೇಷ್ಯಾದ ಗೊಹ್‌ ಸೂನ್‌ ಹುವಾತ್‌ ಮತ್ತು ಶೆವಾನ್‌ ಜೆಮಿ ಜೋಡಿ ವಿರುದ್ಧ 16-21, 21-17, 11-21 ಗೇಮ್‌ಗಳಲ್ಲಿ ಸೋತು ಹೊರಬಿದ್ದಿತು.
 

click me!