ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಬೆಂಗಳೂರಿನಲ್ಲೇ ನಡೆಯಲಿದೆ ಸಂಪೂರ್ಣ ಪ್ರೊ ಕಬಡ್ಡಿ ಲೀಗ್..!

Kannadaprabha News   | Asianet News
Published : Oct 06, 2021, 07:34 AM IST
ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಬೆಂಗಳೂರಿನಲ್ಲೇ ನಡೆಯಲಿದೆ ಸಂಪೂರ್ಣ ಪ್ರೊ ಕಬಡ್ಡಿ ಲೀಗ್..!

ಸಾರಾಂಶ

* ಬೆಂಗಳೂರಿಗರಿಗೆ ಗುಡ್‌ ನ್ಯೂಸ್ ಕೊಟ್ಟ ಪ್ರೊ ಕಬಡ್ಡಿ ಆಯೋಜಕರು * 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಸಂಪೂರ್ಣ ಟೂರ್ನಿಗೆ ಬೆಂಗಳೂರು ಆತಿಥ್ಯ * ಡಿಸೆಂಬರ್ 22ರಿಂದ ಪ್ರೊ ಕಬಡ್ಡಿ ಲೀಗ್ ಆರಂಭ

ಮುಂಬೈ(ಅ.06): ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ (Pro Kabaddi League) (ಪಿಕೆಎಲ್‌) ಡಿಸೆಂಬರ್‌ 22ರಿಂದ ಆರಂಭಗೊಳ್ಳಲಿದ್ದು, ಇಡೀ ಟೂರ್ನಿಗೆ ಬೆಂಗಳೂರು (Bengaluru) ಆತಿಥ್ಯ ವಹಿಸಲಿದೆ. ಬಹು ನಗರಗಳಲ್ಲಿ ನಡೆಯುತ್ತಿದ್ದ ಟೂರ್ನಿಯನ್ನು ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಒಂದೇ ನಗರಕ್ಕೆ ಸೀಮಿತಗೊಳಿಸಲಾಗಿದ್ದು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ.

ಕೋವಿಡ್‌ (Covid 19) ಕಾರಣ 2020ರಲ್ಲಿ ಟೂರ್ನಿ ನಡೆದಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿ ಆಯೋಜಿಸಲು ಮುಂದಾಗಿರುವ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್‌ ಸಂಸ್ಥೆ, ಕಠಿಣ ಬಯೋ ಬಬಲ್‌ (Bio Bubble) ಸಿದ್ಧಪಡಿಸಿ ಆಟಗಾರರನ್ನು ಉಳಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಎಲ್ಲಾ ತಂಡಗಳ ಆಟಗಾರರು ಟೂರ್ನಿ ಆರಂಭಗೊಳ್ಳುವ 14 ದಿನಗಳ ಮೊದಲೇ ಬೆಂಗಳೂರಿಗೆ ಆಗಮಿಸಲಿದ್ದು, ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ 2 ಡೋಸ್‌ ಕೊರೋನಾ ಲಸಿಕೆ ಪಡೆದಿರಬೇಕು ಎಂದು ಆಯೋಜಕರು ಷರತ್ತು ವಿಧಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್: 190ಕ್ಕೂ ಹೆಚ್ಚು ಆಟಗಾರರ ಹರಾಜು

‘ದೇಶದ ಅತಿದೊಡ್ಡ ಸ್ಪರ್ಧಾತ್ಮಕ ಟೂರ್ನಿಯನ್ನು ಆಯೋಜಿಸಲು ಬೆಂಗಳೂರಿನಲ್ಲಿ ಸಕಲ ಸೌಲಭ್ಯಗಳು ಇವೆ. 8ನೇ ಆವೃತ್ತಿಯ ಪ್ರೊ ಕಬಡ್ಡಿಯನ್ನು ಯಶಸ್ವಿಯಾಗಿ ಆಯೋಜಿಸುತ್ತೇವೆ’ ಎಂದು ಮಶಾಲ್‌ ಸ್ಪೋರ್ಟ್ಸ್‌ನ ಸಿಇಒ ಹಾಗೂ ಲೀಗ್‌ನ ಆಯುಕ್ತ ಅನುಪಮ್‌ ಗೋಸ್ವಾಮಿ ತಿಳಿಸಿದ್ದಾರೆ. ಟೂರ್ನಿಯನ್ನು ಒಂದೇ ನಗರದಲ್ಲಿ ನಡೆಸಲು ನಿರ್ಧರಿಸಿದಾಗ ಅಹಮದಾಬಾದ್‌, ಬೆಂಗಳೂರು ಹಾಗೂ ಜೈಪುರ ನಗರಗಳನ್ನು ಗುರುತಿಸಲಾಗಿತ್ತು. ಬಳಿಕ ಎಲ್ಲಾ ರೀತಿಯಲ್ಲೂ ಸೂಕ್ತ ಎನ್ನುವ ಕಾರಣ ಬೆಂಗಳೂರನ್ನು ಅಂತಿಮಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಲ್ಲಿ ಟೂರ್ನಿಯನ್ನು ನಡೆಸುವ ಆಯೋಜಕರ ನಿರ್ಧಾರವನ್ನು ಸ್ವಾಗತಿಸಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ‘ದೇಸಿ ಕ್ರೀಡೆ ಕಬಡ್ಡಿಯು ಕರ್ನಾಟಕದಲ್ಲಿ ಬಹಳ ಜನಪ್ರಿಯತೆ ಹೊಂದಿದೆ. ನಮ್ಮ ರಾಜ್ಯದಲ್ಲಿ ಇಡೀ ಟೂರ್ನಿಯನ್ನು ಆಯೋಜಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ’ ಎಂದಿದ್ದಾರೆ. 

2014ರಲ್ಲಿ ಆರಂಭಗೊಂಡಿದ್ದ ಪ್ರೊ ಕಬಡ್ಡಿ ಲೀಗ್‌ಗೆ ಮೊದಲ ಆವೃತ್ತಿಯಿಂದಲೂ ಬೆಂಗಳೂರು ಆತಿಥ್ಯ ವಹಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ 2017, 2018ರಲ್ಲಿ ಬೆಂಗಳೂರಿನಿಂದ ಟೂರ್ನಿ ಎತ್ತಂಗಡಿಯಾಗಿತ್ತು. ಬಳಿಕ 2019ರಲ್ಲಿ ಟೂರ್ನಿಯು ಬೆಂಗಳೂರಿಗೆ ವಾಪಸಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!