Pro Kabaddi League: ಇಂದು ಪಾಟ್ನಾ ಪೈರೇಟ್ಸ್‌ vs ದಬಾಂಗ್ ಡೆಲ್ಲಿ ಫೈನಲ್ ಫೈಟ್

By Suvarna News  |  First Published Feb 25, 2022, 8:02 AM IST

* 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಫೈನಲ್‌ಗೆ ಕ್ಷಣಗಣನೆ ಆರಂಭ

* ಪಿಕೆಎಲ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿಂದು ದಬಾಂಗ್ ಡೆಲ್ಲಿ- ಪಾಟ್ನಾ ಪೈರೇಟ್ಸ್‌ ಮುಖಾಮುಖಿ

* ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ ದಬಾಂಗ್ ಡೆಲ್ಲಿ


ಬೆಂಗಳೂರು(ಫೆ.25): 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ (Pro Kabaddi League) ಹಂತದಲ್ಲಿ ಅಗ್ರ 2 ಸ್ಥಾನಗಳನ್ನು ಪಡೆದಿದ ಪಾಟ್ನಾ ಪೈರೇಟ್ಸ್‌ (Patna Pirates) ಹಾಗೂ ದಬಾಂಗ್‌ ಡೆಲ್ಲಿ (Dabang Delhi) ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಸೆಣಸಲಿವೆ. ಸಮತೋಲನದಿಂದ ಕೂಡಿರುವ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಕನ್ನಡಿಗ ಪ್ರಶಾಂತ್ ರೈ (Prashanth Rai) ನೇತೃತ್ವದ ಪಾಟ್ನಾ ಪೈರೇಟ್ಸ್‌ ತಂಡವು ದಾಖಲೆಯ 4ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ಬಲಿಷ್ಠ ದಬಾಂಗ್ ಡೆಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುವ ಕನವರಿಕೆಯಲ್ಲಿದೆ.

4ನೇ ಬಾರಿಗೆ ಫೈನಲ್‌ಗೇರಿರುವ ಪಾಟ್ನಾ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಪ್ರದೀಪ್‌ ನರ್ವಾಲ್‌ರ ಅಮೋಘ ಆಟದ ನೆರವಿನಿಂದ ಹ್ಯಾಟ್ರಿಕ್‌ ಚಾಂಪಿಯನ್‌ ಆಗಿದ್ದ ಪಾಟ್ನಾ, ಈ ಬಾರಿ ಪ್ರದೀಪ್‌ ಇಲ್ಲದಿದ್ದರೂ ಗುಣಮಟ್ಟಕಾಯ್ದುಕೊಂಡಿದೆ. ಇನ್ನು ಕಳೆದ ಆವೃತ್ತಿಯಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ದಬಾಂಗ್ ಡೆಲ್ಲಿ, ಸತತ 2ನೇ ಬಾರಿಗೆ ಫೈನಲ್‌ಗೇರಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.

Tap to resize

Latest Videos

ಸೆಮಿಫೈನಲ್‌ನಲ್ಲಿ ಬಲಿಷ್ಠ ಯು.ಪಿ.ಯೋಧಾ ವಿರುದ್ಧ ತನ್ನ ಉತ್ಕೃಷ್ಟ ಗುಣಮಟ್ಟದ ಡಿಫೆನ್ಸ್‌ನ ಸಹಾಯದಿಂದ ಜಯಿಸಿದ ಪಾಟ್ನಾ, ಫೈನಲ್‌ನಲ್ಲೂ ಅಬ್ಬರಿಸಲು ಎದುರು ನೋಡುತ್ತಿದೆ. ತಂಡದ ಬಹುತೇಕ ಆಟಗಾರರು ಆಕ್ರಮಣ ಹಾಗೂ ರಕ್ಷಣಾತ್ಮಕ ಆಟ ಎರಡನ್ನೂ ಆಡಬಲ್ಲರು. ಇದು ತಂಡಕ್ಕಿರುವ ಅತಿದೊಡ್ಡ ಪ್ರಾಬಲ್ಯ. ಸಚಿನ್‌, ನಾಯಕ ಪ್ರಶಾಂತ್‌ ರೈ, ಗುಮಾನ್‌ ಸಿಂಗ್‌, ಮೋನು ಗೋಯತ್‌ರಂತಹ ಗುಣಮಟ್ಟದ ರೈಡರ್‌ಗಳು ತಂಡದಲ್ಲಿದ್ದು, ಇರಾನ್‌ನ ಮೊಹಮದ್‌ರೆಜಾ ಶಾದ್ರ್ಲೂ ಈ ಆವೃತ್ತಿಯ ಶ್ರೇಷ್ಠ ಡಿಫೆಂಡರ್‌ ಎನಿಸಿದ್ದಾರೆ. ಡೆಲ್ಲಿಯ ರೈಡ್‌ ಮಷಿನ್‌ ನವೀನ್‌ ಕುಮಾರ್‌ರನ್ನು ಕಟ್ಟಿಹಾಕುವ ಅತಿದೊಡ್ಡ ಸವಾಲು ಶಾದ್ರ್ಲೂ ಹೆಗಲ ಮೇಲಿರಲಿದೆ. ಕವರ್‌ ಡಿಫೆಂಡರ್‌ಗಳಾದ ನೀರಜ್‌ ಕುಮಾರ್‌ ಹಾಗೂ ಸಾಜಿನ್‌ ಸಹ ಪ್ರಮುಖ ಪಾತ್ರ ವಹಿಸಬೇಕಿದೆ.

Pro Kabaddi League: 930 ಮಂದಿ, 5 ತಿಂಗಳು ಬಯೋಬಬಲ್‌ ವನವಾಸ..!

ಡೆಲ್ಲಿಗೆ ನವೀನ್‌ ಟ್ರಂಪ್‌ಕಾರ್ಡ್‌: ದಬಾಂಗ್‌ ಡೆಲ್ಲಿ ರೈಡರ್‌ ನವೀನ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ನವೀನ್‌ ಗಳಿಸುವ ಒಟ್ಟು ಅಂಕಗಳ ಮೇಲೆ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚು. ತಂಡಕ್ಕೆ ಅನುಭವಿ ಆಟಗಾರರಾದ ಜೋಗಿಂದರ್‌ ನರ್ವಾಲ್‌, ಮನ್‌ಜೀತ್‌ ಚಿಲ್ಲಾರ್‌, ಸಂದೀಪ್‌ ನರ್ವಾಲ್‌ ಹಾಗೂ ಜೀವ ಕುಮಾರ್‌ ಬಲವಿದೆ. ಆಲ್ರೌಂಡರ್‌ ವಿಜಯ್‌ ಮಲಿಕ್‌ ಅಚ್ಚರಿಯ ಪ್ರದರ್ಶನ ನೀಡಬಲ್ಲರು.

2 ಪಂದ್ಯಗಳಲ್ಲೂ ಪಾಟ್ನಾಗೆ ಸೋಲುಣಿಸಿದ್ದ ಡೆಲ್ಲಿ!

ಈ ಆವೃತ್ತಿಯ ಲೀಗ್‌ ಹಂತದಲ್ಲಿ ನಡೆದಿದ್ದ ಎರಡೂ ಮುಖಾಮುಖಿಗಳಲ್ಲಿ ಪಾಟ್ನಾ ವಿರುದ್ಧ ಡೆಲ್ಲಿ ಗೆಲುವು ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ಸಂದೀಪ್‌ ನರ್ವಾಲ್‌ ಆಲ್ರೌಂಡ್‌ ಪ್ರದರ್ಶನ ತೋರಿದರೆ, 2ನೇ ಪಂದ್ಯದಲ್ಲಿ ಮನ್‌ಜೀತ್‌ ನಿರ್ಣಾಯಕ ಪಾತ್ರ ವಹಿಸಿದ್ದರು. ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವು ಯು.ಪಿ.ಯೋಧಾ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ದಬಾಂಗ್ ಡೆಲ್ಲಿ ತಂಡವು ಎರಡನೇ ಸೆಮಿಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ಎದುರು ಗೆಲುವಿನ ನಗೆ ಬೀರುವ ಮೂಲಕ ಸತತ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಈಗಾಗಲೇ ಮೂರು ಬಾರಿ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಪಾಟ್ನಾ ಪೈರೇಟ್ಸ್‌ ತಂಡವು ಮಹತ್ವದ ಪಂದ್ಯದಲ್ಲಿ ಹೇಗೆ ಒತ್ತಡವನ್ನು ನಿಭಾಯಿಸಬೇಕು ಎನ್ನುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಇನ್ನೊಂದೆಡೆ ಕಳೆದ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಫೈನಲ್‌ನಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ಶರಣಾಗಿದ್ದ ದಬಾಂಗ್ ಡೆಲ್ಲಿ ತಂಡವು ಈ ಬಾರಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದೆ.

ಪಂದ್ಯ ಆರಂಭ: ರಾತ್ರಿ 8.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಹಾಟ್‌ಸ್ಟಾರ್
 

click me!