* ಪ್ರೊ ಕಬಡ್ಡಿ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಕ್ಷಣಗಣನೆ ಆರಂಭ
* ಇಂದು ನಿರ್ಧಾರವಾಗಲಿದೆ ಬೆಂಗಳೂರು ಬುಲ್ಸ್ ತಂಡದ ಫ್ಲೇ ಆಫ್ ಭವಿಷ್ಯ
* ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ತಂಡ
ಬೆಂಗಳೂರು(ಫೆ.19): ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ಪ್ಲೇ-ಆಫ್ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಒಟ್ಟು 6 ತಂಡಕ್ಕೆ ಪ್ಲೇ ಆಫ್‌ಗೇರಲಿದ್ದು, ಪಾಟ್ನಾ ಪೈರೇಟ್ಸ್(Patna Pirates), ದಬಾಂಗ್ ಡೆಲ್ಲಿ (Dabang Delhi), ಯು.ಪಿ. ಯೋಧಾ (UP Yoddha) ಈಗಾಗಲೇ ಸ್ಥಾನ ಭದ್ರಪಡಿಸಿಕೊಂಡಿವೆ. ಉಳಿದ 3 ಸ್ಥಾನಕ್ಕಾಗಿ ಬೆಂಗಳೂರು ಬುಲ್ಸ್, ಹರ್ಯಾಣ ಸ್ಟೀಲರ್ಸ್(Haryana Steelers), ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers), ಗುಜರಾತ್ ಜೈಂಟ್ಸ್ (Gujarat Giants) ರೇಸಲ್ಲಿವೆ. ಈಗಾಗಲೇ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್, ಯು ಮುಂಬಾ, ತಮಿಳ್ ತಲೈವಾಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಪ್ಲೇ ಆಫ್ಸ್ ರೇಸ್‌ನಿಂದ ಹೊರಬಿದ್ದಿವೆ.
ಬೆಂಗಳೂರು ಬುಲ್ಸ್ ರೌಂಡ್ ರಾಬಿನ್ ಹಂತದ ಎಲ್ಲ 22 ಪಂದ್ಯ ಆಡಿದ್ದು, ತಲಾ 21 ಪಂದ್ಯ ಆಡಿರುವ ಉಳಿದ 3 ತಂಡಗಳು ಶನಿವಾರ ಕಡೇ ಪಂದ್ಯ ಆಡುತ್ತಿವೆ. ಈ ಪೈಕಿ ಒಂದು ತಂಡ ಸೋತರೂ ಬುಲ್ಸ್ ಪ್ಲೇ ಆಫ್‌ಗೇರಲಿದೆ. ಎಲ್ಲಾ 3 ತಂಡಗಳು ಗೆದ್ದರೆ ಪವನ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್ ಹೊರಬೀಳಲಿದೆ.
ಇಂದು ಗುಂಪು ಹಂತಕ್ಕೆ ತೆರೆ:
ಶನಿವಾರ ಪಾಟ್ನಾ-ಹರ್ಯಾಣ ಪಂದ್ಯದ ಮೂಲಕ ಡಬಲ್ ರೌಂಡ್ ರಾಬಿನ್ ಮಾದರಿಯ 132 ಪಂದ್ಯಗಳು ಪೂರ್ಣಗೊಳ್ಳಲಿದೆ. ಫೆಬ್ರವರಿ 21ರಿಂದ ಪ್ಲೇ-ಆಫ್ಸ್ ಪಂದ್ಯಗಳು ಆರಂಭವಾಗಲಿದ್ದು, ಫೆಬ್ರವರಿ 23ಕ್ಕೆ ಸೆಮಿಫೈನಲ್ಸ್ ಹಾಗೂ ಫೆಬ್ರವರಿ 25ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಪುಣೆ ಪ್ಲೇ-ಆಫ್ಸ್ ಕನಸಿಗೆ ಹಿನ್ನಡೆ
ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯ ನಿರ್ಣಾಯಕ ಪಂದ್ಯದಲ್ಲಿ ಪುಣೇರಿ ಪಲ್ಟನ್ ಸೋಲನುಭವಿಸಿದ್ದು, ಪ್ಲೇ-ಆಫ್ಸ್ ಪ್ರವೇಶಿಸುವ ಕನಸಿಗೆ ಹಿನ್ನಡೆಯುಂಟಾಗಿದೆ. ಶುಕ್ರವಾರ ಬೆಂಗಾಲ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ತಂಡ 36-43 ಅಂಕಗಳಿಂದ ಸೋಲುಂಡಿತು. ಹಾಲಿ ಚಾಂಪಿಯನ್ ಬೆಂಗಾಲ್, ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಿತು.
ಈ ಸೋಲಿನೊಂದಿಗೆ ಪುಣೆ 21 ಪಂದ್ಯಗಳಲ್ಲಿ 61 ಅಂಕಗಳಿಸಿದ್ದು, ಪ್ಲೇ-ಆಫ್ಸ್ ತಲುಪಲು ಜೈಪುರ ವಿರುದ್ಧದ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಜೈಪುರ 62 ಅಂಕ ಗಳಿಸಿದ್ದು, ಶನಿವಾರದ ಪಂದ್ಯ ವರ್ಚುವಲ್ ನಾಕೌಟ್ ಪಂದ್ಯವಾಗಲಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಗೆದ್ದರೆ ಬೆಂಗಳೂರು ಬುಲ್ಸ್(66) ತಂಡವನ್ನು ಹಿಂದಿಕ್ಕಿ ಪ್ಲೇ-ಆಫ್ಸ್ ಪ್ರವೇಶಿಸಲಿದೆ. ಪಂದ್ಯ ಟೈ ಆದರೆ ಬುಲ್ಸ್ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ. ಇನ್ನು, ಹರ್ಯಾಣ(63) ಪ್ಲೇ-ಆಫ್ಸ್ ಪ್ರವೇಶಿಸಬೇಕಾದರೆ ಪಾಟ್ನಾ ಪೈರೇಟ್ಸ್ ವಿರುದ್ಧದ ಕೊನೆ ಪಂದ್ಯದಲ್ಲಿ ಗೆಲ್ಲಬೇಕಿದೆ. ಸೋತರೆ ಹೊರಬೀಳುವ ಸಾಧ್ಯತೆ ಹೆಚ್ಚು. ಗುಜರಾತ್ ಕೂಡಾ ಪ್ಲೇ-ಆಫ್ಸ್ ಪ್ರವೇಶಿಸುವ ಹಾದಿಯಲ್ಲಿದೆ.
Pro Kabaddi League: ಬೆಂಗಳೂರು ಬುಲ್ಸ್ ತಂಡದ ಪ್ಲೇ-ಆಫ್ಸ್ ಆಸೆ ಜೀವಂತ..!
ಸದ್ಯ ಅಂಕಪಟ್ಟಿಯಲ್ಲಿ ಪಾಟ್ನಾ ಪೈರೇಟ್ಸ್ 81 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ, ಯುಪಿ ಯೋಧಾ ತಂಡಗಳು ಮೊದಲ 3 ಸ್ಥಾನಗಳಲ್ಲಿ ಭದ್ರವಾಗಿವೆ. ಇನ್ನು ಬೆಂಗಳೂರು ಬುಲ್ಸ್, ಹರ್ಯಾಣ ಸ್ಟೀಲರ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಕ್ರಮವಾಗಿ ನಾಲ್ಕು, ಐದು ಹಾಗೂ ಆರನೇ ಸ್ಥಾನದಲ್ಲಿವೆ.
The race for the playoffs is 🔛
— ProKabaddi (@ProKabaddi)
Who do you think will end up qualifying for the playoffs tomorrow? 🧐 pic.twitter.com/XQJvoJXGTL
ಬ್ಯಾಡ್ಮಿಂಟನ್: ನಾಕೌಟ್ ಪ್ರವೇಶಿಸದ ಭಾರತ
ಶಾ ಆಲಂ(ಮಲೇಷ್ಯಾ): ಏಷ್ಯಾ ತಂಡಗಳ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಪುರುಷ ಹಾಗೂ ಮಹಿಳಾ ತಂಡಗಳೆರಡೂ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಸೋಲುಂಡವು. ಹಾಲಿ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಭಾರತ ಪುರುಷರ ತಂಡ 2-3ರಲ್ಲಿ ಸೋತರೆ, ಮಹಿಳಾ ತಂಡ ಜಪಾನ್ ವಿರುದ್ಧ 1-4ರಲ್ಲಿ ಪರಾಭವಗೊಂಡಿತು. ಪುರುಷರ ತಂಡ ಗುಂಪಿನಲ್ಲಿ 3ನೇ ಸ್ಥಾನ ಪಡೆದರೆ, ಮಹಿಳಾ ತಂಡ ಕೊನೆಯ ಸ್ಥಾನ ಗಳಿಸಿತು.