* ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದ ಕಬಡ್ಡಿ ತರಬೇತಿ ವಿಭಾಗ ಮುಚ್ಚುವ ಹಂತ ತಲುಪಿದೆ
* ಒಂದು ಕಡೆ ಪ್ರೊ ಕಬಡ್ಡಿ ಮಿಂಚುತ್ತಿದ್ದರೆ, ಮತ್ತೊಂದೆಡೆ ಸಾಯ್ ಕೇಂದ್ರದಲ್ಲಿ ಕಬಡ್ಡಿ ಅವಸಾನದ ಅಂಚಿನಲ್ಲಿದೆ
* ಇದೀಗ ಸಾಯ್‌ನಲ್ಲಿನ ಕಬಡ್ಡಿ ವಿಭಾಗಕ್ಕೆ ಬೀಗ ಜಡಿಯಲಾಗುತ್ತಿದೆ
- ಮಯೂರ ಹೆಗಡೆ, ಕನ್ನಡಪ್ರಭ
ಹುಬ್ಬಳ್ಳಿ(ಫೆ.18): ಒಂದೆಡೆ ದೇಸಿ ಕ್ರೀಡೆ ಕಬಡ್ಡಿಗೆ ಪ್ರೊ ಟಚ್ (Pro Kabaddi League) ನೀಡುವ ಮೂಲಕ ಉತ್ತುಂಗಕ್ಕೆ ಒಯ್ಯಲಾಗುತ್ತಿದೆ. ಇನ್ನೊಂದೆಡೆ ತರಬೇತುದಾರರು ಇಲ್ಲ ಎಂಬ ಕಾರಣ ಮುಂದಿಟ್ಟು ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) (Sports Authority Of India) ಹಾಸ್ಟೆಲ್‌ನಲ್ಲಿನ ರಾಜ್ಯದ ಏಕೈಕ ಕಬಡ್ಡಿ ತರಬೇತಿ ವಿಭಾಗದ ವಿದ್ಯಾರ್ಥಿಗಳನ್ನು ಹೈದರಾಬಾದ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ. ಆ ಮೂಲಕ ಶಾಶ್ವತವಾಗಿ ಮುಚ್ಚುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.
ಧಾರವಾಡದ ಸಾಯ್ ಹಾಸ್ಟೆಲ್ ಗರಡಿಯಲ್ಲಿ ಪಳಗಿದ ಹರೀಶ ನಾಯ್ಕ (Harish Naik) ಬೆಂಗಳೂರು ಬುಲ್ಸ್‌ನಲ್ಲಿ (Bengaluru Bulls) ಆಟಗಾರನಾಗಿ, ಮಂದಾರ ಶೆಟ್ಟಿ ಹರ್ಯಾಣ ಸ್ಟೀಲರ್ಸ್‌ನಲ್ಲಿ ಸಹಾಯಕ ತರಬೇತುದಾರರಾಗಿ ಯಶಸ್ವಿಯಾಗಿದ್ದಾರೆ. 40ಕ್ಕೂ ಹೆಚ್ಚಿನವರು ಸ್ಪೋಟ್ಸ್ ಕೋಟಾದಡಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. 35ಕ್ಕೂ ಹೆಚ್ಚಿನವರು ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ. ಇಬ್ಬರು ಅಂತಾರಾಷ್ಟ್ರೀಯ ತರಬೇತಿ ಕ್ಯಾಂಪ್‌ನಲ್ಲಿದ್ದಾರೆ. ಆದರೆ, ಇದೀಗ ಸಾಯ್‌ನಲ್ಲಿನ ಕಬಡ್ಡಿ ವಿಭಾಗಕ್ಕೆ ಬೀಗ ಜಡಿಯಲಾಗುತ್ತಿದೆ.
ವಿದ್ಯಾರ್ಥಿಗಳ ಸ್ಥಳಾಂತರ: ಎರಡು ವರ್ಷದ ಹಿಂದೆ ಬೆಂಗಳೂರಿನ ಸಾಯ್ ಹಾಸ್ಟೆಲ್‌ನಲ್ಲಿನ ಕಬಡ್ಡಿ ಕೇಂದ್ರ ಮುಚ್ಚಿದ ಬಳಿಕ ಅಲ್ಲಿನ 4 ಕಬಡ್ಡಿ ವಿದ್ಯಾರ್ಥಿಗಳನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಇವರೊಂದಿಗೆ ಧಾರವಾಡದ ನಾಲ್ವರನ್ನು ಹೈದರಾಬಾದ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಬಗ್ಗೆ ವಿಭಾಗೀಯ ನಿರ್ದೇಶಕಿ ರೀತು ಪಾಟಕ್ ಕೂಡ ಆದೇಶ ಹೊರಡಿಸಿದ್ದಾರೆ. ಜತೆಗೆ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಹಾಸ್ಟೆಲ್‌ಗೆ ಆಯ್ಕೆಯಾದ 21 ಕಬಡ್ಡಿ ಕ್ರೀಡಾಳುಗಳನ್ನು ದಾಖಲಿಸಿಕೊಳ್ಳಲು ಈ ವರೆಗೆ ಸೂಚಿಸಿಲ್ಲ.
ಕಳೆದ ವರ್ಷ ಕರ್ನಾಟಕದ ಇಬ್ಬರು ಕಬಡ್ಡಿ ಕೋಚ್ ಆಗಿ ನೇಮಕವಾಗಿದ್ದಾರೆ. ಇಲ್ಲಿ ಹುದ್ದೆ ಖಾಲಿ ಇದ್ದರೂ ಒಬ್ಬರನ್ನು ಗುಜರಾತ್‌ನ ಗಾಂಧಿನಗರದ ಸಾಯ್ ಕೇಂದ್ರಕ್ಕೆ, ಇನ್ನೊಬ್ಬರನ್ನು ಬೆಂಗಳೂರಿನ ಸಾಯ್ ಕೇಂದ್ರದ ಡಿಪ್ಲೋಮಾ ಇನ್ ಕೋಚಿಂಗ್ ಸೆಂಟರ್‌ಗೆ ನಿಯೋಜಿಸಲಾಗಿದೆ. ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇರದ ವೇಳೆ ಇಲ್ಲಿನ ಕೇಂದ್ರದವರು ಕಬಡ್ಡಿ ಕ್ರೀಡಾಳುಗಳು ಇಲ್ಲವೆಂದು ವರದಿ ನೀಡಿದ್ದೇ ಕೋಚ್ ಹುದ್ದೆ ಭರ್ತಿಯಾಗದಿರಲು ಕಾರಣ ಎಂದು ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಆರೋಪಿಸಿದೆ.
Pro Kabaddi League: ಬೆಂಗಳೂರು ಬುಲ್ಸ್ ತಂಡದ ಪ್ಲೇ-ಆಫ್ಸ್ ಆಸೆ ಜೀವಂತ..!
‘ಇಲ್ಲಿ ತರಬೇತುದಾರರು ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಸದ್ಯಕ್ಕೆ ಹೈದರಾಬಾದ್‌ನ ಗಚ್ಚಿಬೌಲಿ ಸಾಯ್ ಕೇಂದ್ರಕ್ಕೆ ಕಳಿಸಿ ತರಬೇತಿ ಕೊಡಿಸಲು ನಿರ್ಧಾರವಾಗಿದೆ. ನಾವು ಇಲ್ಲಿಂದ ಆದಷ್ಟುಬೇಗ ಕೋಚ್ ನೇಮಿಸುವಂತೆ ಬೆಂಗಳೂರು ವಿಭಾಗೀಯ ಕಚೇರಿಗೆ ಪತ್ರ ಬರೆದಿದ್ದೇವೆ. ಹೊಸ ವಿದ್ಯಾರ್ಥಿಗಳನ್ನು ತೆಗೆದುಕೊಂಡರೆ ಕೋಚ್ ಇಲ್ಲ ಎಂಬ ಕಾರಣಕ್ಕೆ ಕಾಯಲು ತಿಳಿಸಿದ್ದೇವೆ’ ಎಂದು ಧಾರವಾಡ ಸಾಯ್ ಕೇಂದ್ರದ ಮುಖ್ಯಸ್ಥ ಕೆ. ಶಂಕರಪ್ಪ ತಿಳಿಸಿದರು.
3 ವರ್ಷದಿಂದ ಕೋಚ್ ಇಲ್ಲ
2019ರಲ್ಲಿ ಡಾ. ಈಶ್ವರ ಅಂಗಡಿ ನಿವೃತ್ತರಾದ ಬಳಿಕ (35 ತಿಂಗಳಿಂದ) ಇಲ್ಲಿಗೆ ಕಬಡ್ಡಿ ಕೋಚ್ ನೇಮಿಸಿಲ್ಲ. ಎರಡು ಕೋಚ್ ಸ್ಥಾನಗಳಿದ್ದರೂ ಒಂದನ್ನೂ ಭರ್ತಿ ಮಾಡಿಲ್ಲ. ಕೊರೋನಾ ಕಾರಣದಿಂದ ಅನಿಶ್ಚಿತವಾಗಿ ಹಾಸ್ಟೆಲ್ ನಡೆದಿದ್ದರಿಂದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಆದರೆ, ಇದೀಗ ವಿದ್ಯಾರ್ಥಿಗಳು ಬರಲು ಮುಂದಾಗಿದ್ದರೂ ಕೋಚ್ ಇಲ್ಲವೆಂದು ದಾಖಲಾತಿ ಮಾಡಿಕೊಳ್ಳುತ್ತಿಲ್ಲ.
ಧಾರವಾಡದ ಸಾಯ್ ಕೇಂದ್ರದ ಕಬಡ್ಡಿ ವಿಭಾಗ ಉಳಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತೇವೆ. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಸೂಕ್ತ ಸೂಚನೆ ನೀಡಲಾಗುವುದು - ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಇನ್ನು 8-10 ದಿನಗಳಲ್ಲಿ ಕಬಡ್ಡಿ ತರಬೇತುದಾರರ ನೇಮಕ ಮಾಡಲು ಪ್ರಯತ್ನಿಸುತ್ತೇವೆ. ವಿದ್ಯಾರ್ಥಿಗಳನ್ನು ಹೈದರಾಬಾದ್‌ಗೆ ಸ್ಥಳಾಂತರ ಮಾಡುತ್ತಿರುವುದು ತಾತ್ಕಾಲಿಕ ಅಷ್ಟೇ. ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು - ರೀತು ಪಾಟಿಕ್ ಸಾಯ್ ವಿಭಾಗೀಯ ನಿರ್ದೇಶಕರು ಬೆಂಗಳೂರು
ಧಾರವಾಡದ ಸಾಯ್ ಹಾಸ್ಟೆಲ್‌ನಲ್ಲಿ ಕಬಡ್ಡಿ ಸುಸೂತ್ರವಾಗಿ ಆರಂಭಿಸಬೇಕು. ಇಲ್ಲದಿದ್ದರೆ, ಕ್ರೀಡಾ ಪ್ರೇಮಿಗಳೆಲ್ಲ ಸೇರಿ ಧರಣಿ ನಡೆಸುವುದು ನಿಶ್ಚಿತ. - ಡಾ. ಈಶ್ವರ ಅಂಗಡಿ ನಿವೃತ್ತ ಅಂತಾರಾಷ್ಟ್ರೀಯ ಕಬ್ಬಡ್ಡಿ ತರಬೇತುದಾರ