ಕೊರೋನಾ ಭೀತಿಯಿಂದಾಗಿ 6ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯನ್ನು ಮುಂದೂಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ನ.28): ಕೊರೋನಾ ಕಾರಣದಿಂದಾಗಿ ಈ ವರ್ಷ ನಡೆಯಬೇಕಿದ್ದ 6ನೇ ಆವೃತ್ತಿ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್)ನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಟೂರ್ನಿಯ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ. ಕೊರೋನಾದಿಂದಾಗಿ ಈಗಾಗಲೇ ಹಲವು ಕ್ರೀಡೆಗಳು ಮುಂದೂಡಲ್ಪಟ್ಟಿವೆ. ಇನ್ನು ಕೆಲ ಕ್ರೀಡೆಗಳು ರದ್ದುಗೊಂಡಿವೆ.
ವಿಶ್ವದಲ್ಲಿ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಅತ್ಯಧಿಕ ಪ್ರಶಸ್ತಿ ಮೊತ್ತವನ್ನು ಹೊಂದಿದ್ದ ಪಿಬಿಎಲ್‌ನ್ನು 2021ಕ್ಕೆ ಮುಂದೂಡಲಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವಾರದಲ್ಲಿ ಟೂರ್ನಿಯನ್ನು ನಡೆಸಲಾಗುತ್ತಿತ್ತು. ಕಳೆದ 5 ಆವೃತ್ತಿಗಳು ಡಿಸೆಂಬರ್, ಜನವರಿಯಲ್ಲಿಯೇ ನಡೆದಿವೆ. ಈ ಬಾರಿ ಕೂಡಾ ಪ್ರೀಮಿಯರ್ ಲೀಗ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
undefined
ಗುಡ್ ನ್ಯೂಸ್: ಕ್ರೀಡಾ ಸಾಧಕರಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕ
ಸದ್ಯ ದೇಶದಲ್ಲಿ ಉಂಟಾಗಿರುವ ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲೀಗ್ ಆಯೋಜಿಸುವುದು ಸೂಕ್ತವಲ್ಲ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಮುಂದೂಡುವ ನಿರ್ಧಾರ ಮಾಡಿತು. ಲೀಗ್‌ನಲ್ಲಿ ದೇಶ-ವಿದೇಶಿ ಶಟ್ಲರ್‌ಗಳ ಪಾಲ್ಗೊಳ್ಳಲಿದ್ದಾರೆ. ಆಟಗಾರರ ಆರೋಗ್ಯದ ದೃಷ್ಟಿಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಅಂತರಾಷ್ಟ್ರೀಯ ಪ್ರಯಾಣವನ್ನು ಡಿ.31 ರವರೆಗೆ ನಿಷೇಧಿಸಲಾಗಿದೆ. ಹೀಗಾಗಿ ಲೀಗ್‌ನ್ನು ಮುಂದೂಡುವುದು ಸೂಕ್ತ ಎಂದು ಆಯೋಜಕರು ತಿಳಿಸಿದ್ದಾರೆ.
ಪಿಬಿಎಲ್ ಜಾಗತಿಕ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಾಗಿದ್ದು 6 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ವಿವಿಧ ಕಾರಣಗಳಿಂದಾಗಿ 5ನೇ ಆವೃತ್ತಿ ಪಿಬಿಎಲ್‌ನ್ನು 2020ರ ಜನವರಿ, ಫೆಬ್ರವರಿಯಲ್ಲಿ ನಡೆಸಲಾಗಿತ್ತು. 4 ನಗರಗಳಲ್ಲಿ ಲೀಗ್‌ನ ಪಂದ್ಯಗಳು ನಡೆದಿದ್ದವು.