ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಿದ ಫ್ರಾನ್ಸ್, ತನ್ನ ವಿಶಿಷ್ಟ ಪ್ರಯತ್ನದಲ್ಲಿ ಸಫಲವಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್: 33ನೇ ಒಲಿಂಪಿಕ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆತಿದೆ. ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಶುಕ್ರವಾರ ಮಳೆಯ ನಡುವೆಯೂ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಿದ ಫ್ರಾನ್ಸ್, ತನ್ನ ವಿಶಿಷ್ಟ ಪ್ರಯತ್ನದಲ್ಲಿ ಸಫಲವಾಯಿತು.
ಆಸ್ಟರ್‌ಲಿಟ್ಜ್ ಬ್ರಿಡ್ಜ್‌ನ ಬಳಿ ಫ್ರಾನ್ಸ್ ರಾಷ್ಟ್ರಧ್ವಜದಲ್ಲಿರುವ ನೀಲಿ, ಬಿಳಿ ಹಾಗೂ ಕೆಂಪು ಬಣ್ಣಗಳ ಬೃಹತ್ ವಾಟರ್ ಸ್ಪ್ಲ್ಯಾಶ್‌ನೊಂದಿಗೆ ಸಮಾರಂಭ ಆರಂಭಗೊಂಡಿತು.
ಇದಕ್ಕೂ ಮುನ್ನ ಫ್ರಾನ್ಸ್‌ನ ದಿಗ್ಗಜ ಫುಟ್ಬಾಲಿಗ ಜಿನದಿನ್ ಜಿದಾನೆ ಒಲಿಂಪಿಕ್ ಜ್ಯೋತಿಯನ್ನು ಹಿಡಿದು, ಪ್ಯಾರಿಸ್ ನಗರದ ಟ್ರಾಫಿಕ್‌ನಲ್ಲಿ ಸಿಲುಕಿರುವ ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾಯಿತು. ಬಳಿಕ ಜಿದಾನೆ, ಜ್ಯೋತಿಯನ್ನು ಮೂವರು ಮಕ್ಕಳ ಕೈಯಿಗೆ ಹಸ್ತಾಂತರಿಸಿದರು. ಆ ನಂತರ ಮುಸುಕುಧಾರಿ ವ್ಯಕ್ತಿಯೊಬ್ಬ, ಪ್ಯಾರಿಸ್‌ನ ಕಟ್ಟಡಗಳು, ನದಿ ಹೀಗೆ ಟ್ರಾಫಿಕ್‌ನ ನಡುವೆಯೂ ವಿಭಿನ್ನ ರೀತಿಯಲ್ಲಿ ಕ್ರೀಡಾ ಜ್ಯೋತಿಯನ್ನು ಐಫಿಲ್ ಟವರ್ ಬಳಿ ತರುವ ದೃಶ್ಯಗಳು ಎಲ್ಲರ ಮನಸೂರೆಗೊಂಡಿತು.
ಪ್ಯಾರಿಸ್ ಒಲಿಂಪಿಕ್ಸ್ ನೋಡುವ ಮುನ್ನ ಈ ಮಾಹಿತಿ ನಿಮಗೆ ಗೊತ್ತಿರಲಿ..!
ಉದ್ಘಾಟನಾ ಸಮಾರಂಭದ ಆರಂಭದಿಂದಲೇ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ರಾಷ್ಟ್ರಗಳ ಪಥ ಸಂಚಲನ ಶುರುವಾಯಿತು. ಮೊದಲಿಗೆ ಗ್ರೀಸ್ ತಂಡ ಆಗಮಿಸಿತು. ಬಳಿಕ ಫ್ರೆಂಚ್ ಅಕ್ಷರಮಾಲೆಯ ಪ್ರಕಾರ ತಂಡಗಳು ಬಂದವು.
ಕೆಲ ತಂಡಗಳಿಗೆ ಪ್ರತ್ಯೇಕ ಬೋಟ್ ಸಿಕ್ಕರೆ, 3-4 ತಂಡಗಳನ್ನು ಒಟ್ಟಿಗೆ ಸೇರಿಸಿ ಒಂದು ದೊಡ್ಡ ದೋಣಿಯಲ್ಲಿ ಕರೆ ತರಲಾಯುತು. ಭಾರತ 84ನೇ ತಂಡವಾಗಿ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿತು. ಭಾರತ, ಇಂಡೋನೇಷ್ಯಾ ಹಾಗೂ ಇರಾನ್ ತಂಡಗಳು ಒಂದೇ ಬೋಟ್‌ನಲ್ಲಿ ಒಟ್ಟಿಗೆ ಆಗಮಿಸಿದವು. ಆತಿಥ್ಯ ರಾಷ್ಟ್ರ ಫ್ರಾನ್ಸ್ ಕೊನೆಯ ತಂಡವಾಗಿ ಬಂದರೆ, 2028ರ ಒಲಿಂಪಿಕ್ಸ್‌ಗೆ ಆತಿಥ್ಯ ನೀಡಲಿರುವ ಅಮೆರಿಕ ಕೊನೆಯಿಂದ 2ನೇ ತಂಡವಾಗಿ ಕಾಣಿಸಿಕೊಂಡಿತು. ಎಲ್ಲಾ ತಂಡಗಳಿಗೂ ವಾಟರ್ ಸಲ್ಯೂಟ್ ನೀಡಲಾಯಿತು.
ಭಾರತದ ಟಾಪ್-10 ಪದಕ ಭರವಸೆಗಳು! ಇತಿಹಾಸ ಬರೆಯಲು ಭಾರತೀಯರು ರೆಡಿ
ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯಲ್ ಮ್ಯಾಕ್ರನ್ ಕ್ರೀಡಾಕೂಟ ಅಧಿಕೃತವಾಗಿ ಆರಂಭಗೊಂಡಿದ್ದಾಗಿ ಘೋಷಿಸಿದರು.
ಎಲ್ಲಾ 34 ಬ್ರಿಡ್ಜ್‌ಗಳ ಮೇಲೂ ಪ್ರದರ್ಶನ!
ಆಸ್ಟರ್‌ಲಿಟ್ಜ್ ಬ್ರಿಡ್ಜ್‌ನಿಂದ ಐಫಿಲ್ ಟವರ್ ಇರುವ ಟ್ರೆಕಾಡೆರೊ ನಡುವೆ ಇರುವ ಎಲ್ಲಾ 34 ಸೇತುವೆಗಳ ಮೇಲೂ ವಿವಿಧ ಕಲೆಗಳ ಪ್ರದರ್ಶನ ನಡೆಯಿತು. ಜಗತ್ಪ್ರಸಿದ್ಧ ಗಾಯಕಿ, ಅಮೆರಿಕದ ಲೇಡಿ ಗಾಗಾ ಮೊದಲಿಗೆ ತಮ್ಮ ಅಮೋಘ ಕ್ಯಾಬ್ರೆ ನೃತ್ಯದ ಮೂಲಕ ಗಮನ ಸೆಳೆದರು. ಫ್ರಾನ್ಸ್‌ನ ಅಯಾ ನಕುಮಾರ ಕೂಡ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಫ್ರೆಂಚ್ ಇತಿಹಾಸ ಅನಾವರಣ!
ನೃತ್ಯ, ಕಲೆ ಜೊತೆಗೆ ಕಳೆದೊಂದು ಶತಮಾನದಲ್ಲಿ ಫ್ರಾನ್ಸ್ ಬೆಳೆದು ಬಂದ ರೀತಿಯನ್ನೂ ಪ್ರದರ್ಶಿಸಲಾಯಿತು. ದೇಶದಲ್ಲಿ ಆದ ಕ್ರಾಂತಿಕಾರಿ ಬೆಳವಣಿಗೆಗಳು, ಮಿಲಿಟೆರಿ ಕ್ಷೇತ್ರದಲ್ಲಿ ಫ್ರಾನ್ಸ್‌ನ ಸಾಧನೆಯನ್ನು ಜಗತ್ತಿನ ಮುಂದಿಡಲಾಯಿತು. ಫ್ರಾನ್ಸ್‌ನಲ್ಲಿ ನಡೆದ ಕೆಲ ಪ್ರಮುಖ ಘಟಾನವಳಿಗಳನ್ನೂ ಕಟ್ಟಿಕೊಡಲಾಯಿತು. ಉದಾಹರಣೆಗೆ 2019ರಲ್ಲಿ ನಾಟ್ರೆ ಡೇಮ್ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು, 1911ರಲ್ಲಿ ಮೋನಾ ಲೀಸಾಳ ಪೇಂಟಿಂಗ್ ಕಳವು ಪ್ರಸಂಗಗಳನ್ನು ನೆನೆಪಿಸಲಾಯಿತು. ಫ್ರೆಂಚ್ ಸಿನಿಮಾದ 10 ದಿಗ್ಗಜ ನಾಯಕಿಯರ ಪ್ರತಿಮೆಗಳನ್ನು ಪ್ರದರ್ಶಿಸಿ ಗೌರವಿಸಲಾಯಿತು.
ಪ್ಯಾರಿಸ್ ‘ಫ್ಯಾಷನ್ ನಗರಿ’ ಎಂದೇ ಕರೆಸಿಕೊಳ್ಳುವ ಕಾರಣ, ಫ್ಯಾಷನ್ ಶೋ ಸಹ ಏರ್ಪಡಿಸಲಾಗಿತ್ತು.