
ಪ್ಯಾರಿಸ್: 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾನುವಾರ ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿದವು. ಹೈಜಂಪ್‌ನಲ್ಲಿ ನಿಶಾದ್ ಕುಮಾರ್ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟರು. ಮತ್ತೊಂದೆಡೆ ಪ್ರೀತಿ ಪಾಲ್ ಮಹಿಳೆಯರ 200 ಮೀ. ರೇಸ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಕ್ರೀಡಾಕೂಟದಲ್ಲಿ ದೇಶದ ಪದಕ ಗಳಿಕೆ ಒಟ್ಟು 7ಕ್ಕೆ ಏರಿಕೆಯಾಗಿದೆ. ಭಾರತ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಭಾನುವಾರ ರಾತ್ರಿ ನಡೆದ ಪುರುಷರ ಹೈಜಂಪ್ ಟಿ47 ವಿಭಾಗದ ಸ್ಪರ್ಧೆಯಲ್ಲಿ ನಿಶಾದ್ 2.04 ಬೆಳ್ಳಿ ಪದಕಕ್ಕೆ ಮೀ. ಎತ್ತರಕ್ಕೆ ನೆಗೆದು ಕೊರಳೊಡ್ಡಿದರು. 2.12ಮೀ.ಎತ್ತರಕ್ಕೆ ನೆಗೆಯುವ ಪ್ರಯತ್ನದಲ್ಲಿ 24 ವರ್ಷದ ನಿಶಾದ್ ಕುಮಾರ್ ವಿಫಲರಾದರು. ಇದರೊಂದಿಗೆ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಮೆರಿಕದ ಟೌನ್ ಸೆಂಡ್ ರೋಡ್ರಿಕ್ 2.12 ಮೀ. ಎತ್ತರಕ್ಕೆ ನೆಗೆಯುವ ಮೂಲಕ ಚಾಂಪಿಯನ್ ಎನಿಸಿಕೊಂಡರು. ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ರಾಮ್ ಪಾಲ್ ಕಣಕ್ಕಿಳಿದಿದ್ದರು. ಆದರೆ 1.95 ಮೀ. ಎತ್ತರಕ್ಕೆ ನೆಗೆಯಲಷ್ಟೇ ಶಕ್ತರಾದ ಅವರು, 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಯುಎಸ್ ಓಪನ್ 2024: ಸ್ವಿಯಾಟೆಕ್, ಸಿನ್ನರ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ
ಪ್ಯಾರಾಲಿಂಪಿಕಲ್ಲಿ 2ನೇ ಬೆಳ್ಳಿ ಗೆದ್ದ ನಿಶಾದ್
ಹಿಮಾಚಲ ಪ್ರದೇಶದ ನಿಶಾದ್ ಕುಮಾರ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ 2ನೇ ಬೆಳ್ಳಿ ಪದಕ ಗೆದ್ದರು. ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲೂ ಬೆಳ್ಳಿ ಪದಕ ಜಯಿಸಿದ್ದರು. ವಿಶ್ವ ಚಾಂಪಿಯನ್ ಶಿಪ್‌ನಲ್ಲಿ 2 ಬೆಳ್ಳಿ, 1 ಕಂಚು ಗೆದ್ದ ಹಿರಿಮೆ ನಿಶಾದ್ ಅವರದ್ದು. ಇದೀಗ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ನಿಶಾದ್ ಕುಮಾರ್ ಪಾತ್ರರಾದರು.
2+ ಪದಕ ಗೆದ್ದ ಭಾರತದ 8ನೇ ಕ್ರೀಡಾಳು ನಿಶಾದ್ ಕುಮಾರ್
ನಿಶಾದ್ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಪದಕ ಗೆದ್ದ ಭಾರತದ 8ನೇ ಕ್ರೀಡಾಪಟು. ದೇವೇಂದ್ರ ಝಝಾರಿಯಾ(03), ಅವನಿ ಲೇಖರಾ(03), ಮರಿಯಪ್ಪನ್ ತಂಗವೇಲು(02), ಮನೀಶ್ ನರ್ವಾಲ್ (02), ಜೋಗಿಂದರ್ ಸಿಂಗ್ ಬೇಡಿ (03), ಸಿಂಗರಾಜ್ ಅಧಾನ(02) ಹಾಗೂ ಪ್ರೀತಿ ಪಾಲ್ (02) ಕೂಡಾ ಈ ಸಾಧನೆ ಮಾಡಿದ್ದಾರೆ.
ಮೈಸೂರಿನ ಮಡಿಲಿಗೆ ಮಹಾರಾಜ ಟ್ರೋಫಿ ಕಿರೀಟ; ಬೆಂಗಳೂರು ಬ್ಲಾಸ್ಟರ್ಸ್‌ಗೆ ಮತ್ತೊಮ್ಮೆ ನಿರಾಸೆ
ಸತತ 2ನೇ ಕಂಚು ಗೆದ್ದ ಪ್ರೀತಿ
ಭಾರತದ ಪ್ಯಾರಾ ಓಟಗಾರ್ತಿ ಪ್ರೀತಿ ಪಾಲ್ ಮತ್ತೊಂದು ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಭಾನುವಾರ 23 ವರ್ಷದ ಪ್ರೀತಿ ಮಹಿಳೆಯರ 200 ಮೀ, ಟಿ35 ವಿಭಾಗದಲ್ಲಿ 30.01 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನ ಪಡೆದರು. ಬಾಲ್ಯದಲ್ಲೇ ಸೆರೆಬ್ರಲ್ ಪಾಲ್ಸಿಗೆ ತುತ್ತಾಗಿದ್ದ ಪ್ರೀತಿ ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ 2ನೇ ಪದಕ ತಮ್ಮದಾಗಿಸಿಕೊಂಡರು. ಟೋಕಿಯೋ ಚಾಂಪಿಯನ್, ಚೀನಾದ ಪ್ಯಾರಾಲಿಂಪಿಕ್ ಝೂಯು ಕ್ರಿಯಾ 28.15 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ, ಕ್ರಿಯಾನ್‌ಸ್ವಿಯಾನ್ (29.09 ಸೆಕೆಂಡ್) ಬೆಳ್ಳಿ ಜಯಿಸಿದರು. ಇನ್ನು ಇದಕ್ಕೂ ಮೊದಲು ಶುಕ್ರವಾರ ಪ್ರೀತಿ ಮಹಿಳೆಯರ 100 ಮೀ, ಟಿ35 ವಿಭಾಗದಲ್ಲಿ 14.21 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಪಾತ್ರರಾಗಿದ್ದರು.
ಒಂದೇ ಗೇಮ್ಸ್‌ನಲ್ಲಿ 2 ಪದಕ ಗೆದ್ದ 2ನೇ ಮಹಿಳೆ: ಪ್ರೀತಿ ಪಾಲ್ ಒಂದೇ ಪ್ಯಾರಾಲಿಂಪಿಕ್ಸ್ ನಲ್ಲಿ 2 ಪದಕ ಗೆದ್ದ ಭಾರತದ 2ನೇ ಮಹಿಳೆ, ಅವನಿ ಲೇಖರಾ ಟೋಕಿಯೋ ಒಲಿಂಪಿಕ್ಸ್‌ನ ಶೂಟಿಂಗ್ 2 ಪದಕ ಗೆದ್ದಿದ್ದರು.
ಒಲಿಂಪಿಕ್ಸ್ ದಾಖಲೆ ಮುರಿದ ಭಾರತ
ಭಾರತ ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ ನಲ್ಲಿ 6 ಪದಕಗಳನ್ನು ಗೆದ್ದಿತ್ತು. ಈಗ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 7 ಪದಕ ಲಭಿಸಿದೆ. ಇನ್ನಷ್ಟು ಪದಕಗಳು ಭಾರತದ ಖಾತೆ ಸೇರುವುದು ಈಗಾಗಲೇ ಖಚಿತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.