ನವದೆಹಲಿ(ಮಾ.27): 7ನೇ ಆವೃತ್ತಿಯ ಪ್ರತಿಷ್ಠಿತ ಏಜೀಸ್ ಫೆಡೆರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾಥಾರಾನ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಆರು ಅಗ್ರ ಓಟಗಾರರು ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಭಾನುವಾರ ನಡೆದ ಓಟದಲ್ಲಿ ಒಲಿಂಪಿಯನ್ ನಿತೇಂದ್ರ ಸಿಂಗ್ ರಾವತ್, 2 ಗಂಟೆ 16 ನಿಮಿಷ 05 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಪೂರ್ಣ ಮ್ಯಾರಾಥಾನ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅನೀಶ್ ಥಾಪ ಮಗರ್ (2 ಗಂಟೆ 16 ನಿಮಿಷ 41 ಸೆಕೆಂಡ್) ಹಾಗೂ ಅನಿಲ್ ಕುಮಾರ್ ಸಿಂಗ್ (2 ಗಂಟೆ 16 ನಿಮಿಷ 47 ಸೆಕೆಂಡ್) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು. ಈ ಮೂವರು ಓಟಗಾರರ ನಡುವೆ ಏರ್ಪಟ್ಟಿದ್ದ ಭಾರೀ ಪೈಪೋಟಿ ನೋಡುಗರ ಗಮನ ಸೆಳೆಯಿತು.
undefined
Kolkata Marathon 2022 ಕೋಲ್ಕತಾ ಮ್ಯಾರಾಥಾನ್ ಗೆದ್ದ ರೂಪನ್ ದೇಬ್‌ನಾಥ್
ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಪುರುಷರಿಗೆ 2 ಗಂಟೆ 18 ನಿಮಿಷ 40 ಸೆಕೆಂಡ್ ಹಾಗೂ ಮಹಿಳೆಯರಿಗೆ 2 ಗಂಟೆ 38 ನಿಮಿಷ 19 ಸೆಕೆಂಡ್ ಸಮಯ ನೀಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಚೀನಾದ ಹಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಪುರುಷರಿಗೆ 2 ಗಂಟೆ 18 ನಿಮಿಷ 48 ಸೆಕೆಂಡ್ ಹಾಗೂ ಮಹಿಳೆಯರಿಗೆ 2 ಗಂಟೆ 39 ನಿಮಿಷ 28 ಸೆಕೆಂಡ್ ಸಮಯ ನಿಗದಿಪಡಿಸಲಾಗಿದೆ.
ಇದೇ ವೇಳೆ ಆಶೀಶ್ ಕುಮಾರ್(2 ಗಂಟೆ 17 ನಿಮಿಷ 04 ಸೆಕೆಂಡ್), ಎ.ಬಿ.ಬೆಳ್ಳಿಯಪ್ಪ (2 ಗಂಟೆ 17 ನಿಮಿಷ 09 ಸೆಕೆಂಡ್) ಹಾಗೂ ಕಾಶಿದಾಸ್ ಲಕ್ಷ್ಮಣ್ ಹಿರವೆ(2 ಗಂಟೆ 18 ನಿಮಿಷ 14 ಸೆಕೆಂಡ್) ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡ ಉಳಿದ ಮೂರು ಓಟಗಾರರು. ಈ ಮೂರು ಓಟಗಾರರು ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್‌ನಲ್ಲಿ ಕ್ರಮವಾಗಿ 4, 5 ಹಾಗೂ 6ನೇ ಸ್ಥಾನ ಪಡೆದರು. ‘ದೇಶದ 6 ಎಲೈಟ್ ಅಥ್ಲೀಟ್‌ಗಳು ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿರುವುದು ಅತ್ಯಂತ ಖುಷಿ ನೀಡಿದೆ’ ಎಂದು ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್‌ನ ಚೀಫ್ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ರಾಮನ್ ಹೇಳಿದ್ದಾರೆ. ‘ಮ್ಯಾರಾಥಾನ್ ಓಟವು ಭಾರೀ ರೋಚಕತೆಯಿಂದ ಕೂಡಿತ್ತು. ಓಟಗಾರರು ಬಹಳ ಸ್ಪರ್ಧಾತ್ಮಕ ಪ್ರದರ್ಶನ ತೋರಿದರು’ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ನವದೆಹಲಿ ಮ್ಯಾರಾಥಾನ್ ಗೆದ್ದ ಶ್ರೀನು ಬುಗಥಾ, ಸುಧಾ ಸಿಂಗ್!
ಎನ್‌ಇಬಿ ಸ್ಪೋರ್ಟ್ಸ್ ಆಯೋಜಿಸಿದ್ದ ಈ ಮ್ಯಾರಾಥಾನ್ ಓಟವು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್(ಎಎಫ್‌ಐ)ನಿಂದ ರಾಷ್ಟ್ರೀಯ ಮ್ಯಾರಾಥಾನ್ ಚಾಂಪಿಯನ್‌ಶಿಪ್ ಎಂದು ಮಾನ್ಯತೆ ಪಡೆದಿದೆ. ಈ ಓಟದಲ್ಲಿ ಒಟ್ಟು 13000 ಓಟಗರರು ಪಾಲ್ಗೊಂಡಿದ್ದರು. ಹಾಫ್ ಮ್ಯಾರಾಥಾನ್‌ನಲ್ಲಿ 6500ಕ್ಕೂ ಹೆಚ್ಚು ಹಾಗೂ 10ಕೆ (10 ಕಿಲೋಮೀಟರ್) ಓಟದಲ್ಲಿ 2000 ಕ್ಕೂ ಓಟಗಾರರು ಕಣಕ್ಕಿಳಿದಿದ್ದರು. ಪೂರ್ಣ ಮ್ಯಾರಾಥಾನ್ ಸ್ಪರ್ಧೆಯು ಸುಮಾರು 2500 ಓಟಗಾರರಿಗೆ ಸಾಕ್ಷಿಯಾಯಿತು. ಈ ಮೂಲಕ ಇದು ಈ ವರ್ಷದ ಅತಿದೊಡ್ಡ ಓಟದ ಸ್ಪರ್ಧೆ ಎನಿಸಿಕೊಂಡಿತು.
ಮಹಿಳಾ ವಿಭಾಗದ ಪೂರ್ಣ ಮ್ಯಾರಾಥಾನ್‌ನಲ್ಲಿ ಜ್ಯೋತಿ ಗಾವಟೆ 3 ಗಂಟೆ 1 ನಿಮಿಷ 20 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಆದರೆ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ನೂಪುರ್ ಸಿಂಗ್(3 ಗಂಟೆ 16 ನಿಮಿಷ 03 ಸೆಕೆಂಡ್) ಹಾಗೂ ಡಿಸ್ಕೆಟ್ ಡೊಲ್ಮಾ (3 ಗಂಟೆ 22 ನಿಮಿಷ 06 ಸೆಕೆಂಡ್) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದರು.
ರೂಪನ್ ದೇಬ್‌ಬಾಥ್(ಹಾಫ್ ಮ್ಯಾರಾಥಾನ್, ಪುರುಷರ ವಿಭಾಗ 1 ಗಂಟೆ 12 ನಿಮಿಷ 10 ಸೆಕೆಂಡ್), ತಾಶಿ ಲಾಡೊಲ್(ಹಾಫ್ ಮ್ಯಾರಾಥಾನ್, ಮಹಿಳೆಯರ ವಿಭಾಗ 1 ಗಂಟೆ 27 ನಿಮಿಷ 48 ಸೆಕೆಂಡ್), ಅಭಿಷೇಕ್ ಚೌಧರಿ (10 ಕೆ ಓಟ, ಪುರುಷರ ವಿಭಾಗ 32 ನಿಮಿಷ 03 ಸೆಕೆಂಡ್) ಹಾಗೂ ಅಶ್ವಿನಿ ಜಾಧವ್ (10ಕೆ ಓಟ, ಮಹಿಳೆಯರ ವಿಭಾಗ 39 ನಿಮಿಷ 22 ಸೆಕೆಂಡ್) ಪ್ರಶಸ್ತಿ ಜಯಿಸಿ ಸಂಭ್ರಮಿಸಿದರು.