ನೀರಜ್‌ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ!

By Suvarna NewsFirst Published Oct 28, 2021, 7:51 AM IST
Highlights

* ನೀರಜ್‌ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ

* ದೇಶದ ಸರ್ವೋಚ್ಚ ಕ್ರೀಡಾ ಪ್ರಶಸ್ತಿಗೆ ಸಾಧಕರ ಹೆಸರು ಅಂತಿಮ'

* ಅರ್ಜುನ ಪ್ರಶಸ್ತಿಗೆ 35 ಕ್ರೀಡಾಳುಗಳನ್ನು ಆರಿಸಿದ ಆಯ್ಕೆ ಸಮಿತಿ

ನವದೆಹಲಿ(ಅ.28): ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ, 23 ವರ್ಷದ ಜಾವೆಲಿನ್‌ ಥ್ರೋಪಟು ನೀರಜ್‌ ಚೋಪ್ರಾ ಸೇರಿದಂತೆ 11 ಮಂದಿ ಕ್ರೀಡಾಪಟುಗಳ ಹೆಸರನ್ನು ದೇಶದ ಸರ್ವೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ ಚಂದ್‌ ‘ಖೇಲ್‌ ರತ್ನ’ಕ್ಕೆ ಶಿಫಾರಸು ಮಾಡಲಾಗಿದೆ. ಅಂತೆಯೇ, 35 ಕ್ರೀಡಾ ಸಾಧಕರ ಹೆಸರನ್ನು ‘ಅರ್ಜುನ’ ಪ್ರಶಸ್ತಿಗೆ ಆಯ್ಕೆ ಸಮಿತಿ ಅಂತಿಮಗೊಳಿಸಿದ್ದು, ಕೇಂದ್ರ ಸರ್ಕಾರದ ಅಧಿಕೃತ ಮುದ್ರೆ ಮಾತ್ರ ಬಾಕಿಯಿದೆ.

ನೀರಜ್‌ ಚೋಪ್ರಾ ಜತೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಕುಸ್ತಿಪಟು ರವಿ ದಹಿಯಾ, ಕಂಚು ಗೆದ್ದ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌, ಹಾಕಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌, ಮಹಿಳಾ ಕ್ರಿಕೆಟ್‌ನ ಟೆಸ್ಟ್‌ ತಂಡದ ನಾಯಕಿ ಮಿಥಾಲಿ ರಾಜ್‌, ತಾರಾ ಫುಟ್ಬಾಲ್‌ ಆಟಗಾರ ಸುನಿಲ್‌ ಚೆಟ್ರಿ ಅವರು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಇವರ ಜತೆಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಸಾಧನೆ ಮಾಡಿದ್ದ ಅವನಿ ಲೇಖರಾ (ಶೂಟಿಂಗ್‌), ಮನೀಷ್‌ ನರ್ವಾಲ್‌ (ಶೂಟಿಂಗ್‌), ಸುಮಿತ್‌ ಅಂತಿಲ್‌(ಜಾವೆಲಿನ್‌), ಪ್ರಮೋದ್‌ ಭಗತ್‌ (ಬ್ಯಾಡ್ಮಿಂಟನ್‌) ಹಾಗೂ ಕೃಷ್ಣ ನಗರ್‌ (ಬ್ಯಾಡ್ಮಿಂಟನ್‌) ಅವರನ್ನು ಹೆಸರನ್ನು ಅಂತಿಮಗೊಳಿಸಲಾಗಿದ್ದು, ಕ್ರೀಡಾ ಸಚಿವಾಲಯದ ಅನುಮೋದನೆಗೆ ಕಳುಹಿಸಲಾಗಿದೆ.

ಧವನ್‌ ಸೇರಿ 35 ಸಾಧಕರಿಗೆ ‘ಅರ್ಜುನ’:

ಕ್ರಿಕೆಟಿಗ ಶಿಖರ್‌ ಧವನ್‌, ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭವಿನಾ ಪಟೇಲ್‌, ಪ್ಯಾರಾ ಶಟ್ಲರ್‌ ಸುಹಾಸ್‌ ಯತಿರಾಜ್‌, ಹೈಜಂಪ್‌ ಪಟು ನಿಶಾದ್‌ ಕುಮಾರ್‌ ಹಾಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಭಾರತ ಹಾಕಿ ತಂಡ ಸೇರಿದಂತೆ 35 ಕ್ರೀಡಾ ಸಾಧಕರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಅಂತಿಮಗೊಳಿಸಲಾಗಿದೆ. ಧವನ್‌ ಅರ್ಜುನ ಪ್ರಶಸ್ತಿಗೆ ಭಾಜನರಾದ 57ನೇ ಕ್ರಿಕೆಟಿಗರಾಗಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಿಂದ ತಡ:

ಪ್ರತಿವರ್ಷ ಸಾಮಾನ್ಯವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆ.29ರಂದು ಕ್ರೀಡಾ ಪ್ರಶಸ್ತಿಗಳ ಪ್ರದಾನ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಟೋಕಿಯೋದಲ್ಲಿ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ (ಆ.24ರಿಂದ ಸೆ.5) ನಡೆಯುತ್ತಿದ್ದ ಕಾರಣ, ಈ ಕ್ರೀಡಾಕೂಟದ ಸಾಧಕರಿಗೂ ಗೌರವ ಸಲ್ಲಿಸುವ ಸಲುವಾಗಿ ಪ್ರಶಸ್ತಿ ಆಯ್ಕೆ ಕೊಂಚ ತಡವಾಯಿತು.

ಮೂವರಿಗೆ ದ್ರೋಣಾಚಾರ್ಯ?

ಮಾಹಿತಿಯ ಪ್ರಕಾರ ಅಥ್ಲೆಟಿಕ್ಸ್‌ ಕೋಚ್‌ಗಳಾದ ರಾಧಾಕೃಷ್ಣ ನಾಯರ್‌ ಹಾಗೂ ಟಿ.ಪಿ.ಔಸೆಫ್‌ ಮತ್ತು ಹಾಕಿ ಕೋಚ್‌ ಸಂದೀಪ್‌ ಸಂಗ್ವಾನ್‌ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಲ ಇತಿಹಾಸದಲ್ಲೇ ಗರಿಷ್ಠ ಖೇಲ್‌ ರತ್ನ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 11 ಕ್ರೀಡಾ ಸಾಧಕರಿಗೆ ‘ಖೇಲ್‌ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದ ವರ್ಷ 5 ಹಾಗೂ 2016ರಲ್ಲಿ ರಿಯೋ ಒಲಿಂಪಿಕ್ಸ್‌ ಬಳಿಕ ನಾಲ್ವರಿಗೆ ಖೇಲ್‌ ರತ್ನ ನೀಡಲಾಗಿತ್ತು. ಇನ್ನು ಕಳೆದ ವರ್ಷ 8 ಸಾಧಕರಿಗೆ ‘ಅರ್ಜುನ’ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ 35 ಕ್ರೀಡಾಪಟುಗಳ ಆಯ್ಕೆ ಮಾಡಲಾಗಿದೆ.

ಸಿಂಧು, ಚಾನು, ಬಜರಂಗ್‌ಗೆ ಈಗಾಗಲೇ ಖೇಲ್‌ ರತ್ನ ಗೌರವ

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿರುವ ಶಟ್ಲರ್‌ ಪಿ.ವಿ.ಸಿಂಧು, ಕುಸ್ತಿಪಟು ಭಜರಂಗ್‌ ಪೂನಿಯಾ ಹಾಗೂ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಈಗಾಗಲೇ ಖೇಲ್‌ರತ್ನ ಪಡೆದಿದ್ದಾರೆ.

ಖೇಲ್‌ ರತ್ನಕ್ಕೆ 25 ಲಕ್ಷ, ಅರ್ಜುನಕ್ಕೆ 5 ಲಕ್ಷ

ಈ ಮೊದಲು ‘ಖೇಲ್‌ ರತ್ನ’ ಪ್ರಶಸ್ತಿ ವಿಜೇತರಿಗೆ .7.5 ಲಕ್ಷ ನಗದು ಬಹುಮಾನ ನೀಡುತ್ತಿದ್ದರೆ, ಅರ್ಜುನ ಪ್ರಶಸ್ತಿ ವಿಜೇತರಿಗೆ .5 ಲಕ್ಷ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಕೇಂದ್ರ ಸರ್ಕಾರವು ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ಅವರ ಹೆಸರನ್ನು ‘ಖೇಲ್‌ ರತ್ನ’ ಪ್ರಶಸ್ತಿಗೆ ಇರಿಸಿದ್ದು, ಈ ವರ್ಷದಿಂದ ಮೇಜರ್‌ ಧ್ಯಾನಚಂದ್‌ ಖೇಲ್‌ ರತ್ನ ಎಂದು ಪ್ರಶಸ್ತಿ ನೀಡುತ್ತಿದೆ. ಜತೆಗೆ ಪ್ರಶಸ್ತಿ ಮೊತ್ತವನ್ನು .25 ಲಕ್ಷಕ್ಕೆ ಹೆಚ್ಚಿಸಿದೆ. ಅರ್ಜುನ ಪ್ರಶಸ್ತಿ ವಿಜೇತರು .15 ಲಕ್ಷ ನಗದು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ.

ಯಾರೆಲ್ಲಾ ಆಯ್ಕೆ?

ನೀರಜ್‌ ಚೋಪ್ರಾ (ಜಾವೆಲಿನ್‌)

ಶ್ರೀಜೇಶ್‌ (ಹಾಕಿ)

ಮಿಥಾಲಿ ರಾಜ್‌ (ಕ್ರಿಕೆಟ್‌)

ಸುನಿಲ್‌ ಚೆಟ್ರಿ (ಫುಟ್ಬಾಲ್‌)

ರಹಿ ದಹಿಯಾ (ಕುಸ್ತಿ)

ಲವ್ಲಿನಾ (ಬಾಕ್ಸಿಂಗ್‌)

ಅವನಿ (ಶೂಟಿಂಗ್‌)

ಮನೀಷ್‌ ನರ್ವಾಲ್‌ (ಶೂಟಿಂಗ್‌)

ಸುಮಿತ್‌ ಅಂತಿಲ್‌ (ಜಾವೆಲಿನ್‌)

ಪ್ರಮೋದ್‌ ಭಗತ್‌

ಕೃಷ್ಣ ನಗರ್‌ (ಬ್ಯಾಡ್ಮಿಂಟನ್‌)

click me!