ಪ್ಯಾರಿಸ್ ಒಲಿಂಪಿಕ್ಸ್ ಪದಕ ಬೇಟೆಯಾಡಿದ ಮನು ಭಾಕರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು!

Published : Jul 28, 2024, 06:34 PM ISTUpdated : Jul 29, 2024, 10:14 AM IST
ಪ್ಯಾರಿಸ್ ಒಲಿಂಪಿಕ್ಸ್ ಪದಕ ಬೇಟೆಯಾಡಿದ ಮನು ಭಾಕರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು!

ಸಾರಾಂಶ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಪದಕದ ಖಾತೆ ತೆರೆಯುವಂತೆ ಮಾಡಿದ ಮನು ಭಾಕರ್ ಬಗ್ಗೆ ನಾವಿಂದು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ ಬನ್ನಿ

ಪ್ಯಾರಿಸ್: 22 ವರ್ಷದ ಯುವ ಶೂಟರ್ ಮನು ಭಾಕರ್, ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತ ಸಾಧನೆ ಮಾಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್, ಕಂಚಿನ ಪದಕ ಗೆಲ್ಲುವುದರೊಂದಿಗೆ 2024ರ ಪ್ಯಾರಿಸ್ ಕೂಟದಲ್ಲಿ ಭಾರತ ಪದಕದ ಖಾತೆ ತೆರೆದಿದೆ.

22 ವರ್ಷದ ಹರ್ಯಾಣ ಮೂಲದ ಮನು ಭಾಕರ್, ಇದೀಗ ಒಲಿಂಪಿಕ್ಸ್ ಇತಿಹಾಸದಲ್ಲೇ ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ನಾವಿಂದು ಯಾರು ಮನು ಭಾಕರ್? ಈಕೆಯ ಹಿನ್ನೆಲೆ ಏನು? ಎನ್ನುವುದನ್ನು ನೋಡಣ ಬನ್ನಿ

ಹರ್ಯಾಣ ಹಲವು ಬಾಕ್ಸರ್‌ ಹಾಗೂ ಕುಸ್ತಿಪಟುಗಳ ತವರು ಎನಿಸಿಕೊಂಡಿದೆ. ಹರ್ಯಾಣದಲ್ಲಿ ಈಗಾಗಲೇ ಹಲವಾರು ಮಂದಿ ಒಲಿಂಪಿಯನ್‌ಗಳಿದ್ದಾರೆ. ಹೀಗಾಗಿ ಕ್ರೀಡೆಗೆ ಉತ್ತೇಜನ ನೀಡುವ ವಾತಾವರಣ ಇದ್ದಿದ್ದರಿಂದಲೇ ಮನು ಭಾಕರ್ ಕೂಡಾ ಶಾಲಾ ಹಂತದಲ್ಲೇ ಕ್ರೀಡೆಯತ್ತ ಒಲವು ಬೆಳೆಸಿಕೊಂಡರು. ಶಾಲಾ ಹಂತದಲ್ಲಿದ್ದಾಗ ಮನು ಭಾಕರ್ ಟೆನಿಸ್, ಸ್ಕೇಟಿಂಗ್ ಹಾಗೂ ಬಾಕ್ಸಿಂಗ್‌ ಕ್ರೀಡೆಗಳನ್ನು ಆಡುತ್ತಿದ್ದರು. ಇನ್ನು ಮಣಿಪುರಿ ಮಾಷಲ್ ಆರ್ಟ್ಸ್‌ನಲ್ಲಿ ಆಕೆ ನ್ಯಾಷನಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಆದರೆ ಇದೆಲ್ಲದರ ಹೊರತಾಗಿ ಕೊನೆಗೆ ಮನು ಅಪ್ಪಿಕೊಂಡಿದ್ದು ಶೂಟಿಂಗ್ ಅನ್ನು.

ವರದಿಗಳ ಪ್ರಕಾರ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್, ಮರ್ಚೆಂಟ್ ನೇವಿಯಲ್ಲಿ ಚೀಫ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಮ್ ಕಿಶನ್ ಭಾಕರ್ ಅವರು 1,50,000 ಖರ್ಚು ಮಾಡಿ ಮನು ಭಾಕರ್ ಅವರನ್ನು ಸ್ಪರ್ಧಾತ್ಮಕ ಶೂಟಿಂಗ್ ಕಲಿಯಲು ಕಳಿಸಿದರು.

ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದ್ದ ಮಾತನ್ನೇ ನಾನು ಅನುಸರಿಸಿದೆ, ಇದೇ ಯಶಸ್ಸಿಗೆ ಕಾರಣ ಎಂದ ಮನು ಭಾಕರ್!

ಮನು ಭಾಕರ್ ಅವರದ್ದು ಚಿಕ್ಕ ಕುಟುಂಬ ತಂದೆ ರಾಮ್ ಕಿಶನ್ ಭಾಕರ್, ತಾಯಿ ಸುಮೇಧಾ ಭಾಕರ್ ಹಾಗೂ ಸಹೋದರ ಅಖಿಲ್ ಭಾಕರ್. ಮನು ಭಾಕರ್ ಸದ್ಯ ಡೆಲ್ಲಿ ಯೂನಿವರ್ಸಿಟಿಯ ಶ್ರೀರಾಮ್ ಕಾಲೇಜ್ ಫಾರ್ ವುಮೆನ್‌ ಎನ್ನುವ ಲೇಡಿ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಮನು ಭಾಕರ್ 2017ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕದ ಬೇಟೆ ಆರಂಭಿಸಿದರು. 2017ರಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಮನು ಭಾಕರ್, ಅದೇ ವರ್ಷ ಕೇರಳದಲ್ಲಿ ನಡೆದ ನ್ಯಾಷನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಸಪ್ತ ಸಾಗರದಾಚೆ ಕಂಚು ಗೆದ್ದ ಮನು; ಶೂಟಿಂಗ್‌ ಮೂಲಕ ಪದಕದ ಖಾತೆ ತೆರೆದ ಭಾರತ

ಇದಾದ ಬಳಿಕ ಮನು ಭಾಕರ್ ಹಿಂತಿರುಗಿ ನೋಡಿದ್ದೇ ಇಲ್ಲ. ಇದಾದ ಬಳಿಕ 2018ರಲ್ಲಿ ಯೂಥ್ ಒಲಿಂಪಿಕ್ಸ್ ಗೇಮ್ಸ್, ಐಎಸ್‌ಎಸ್‌ಎಫ್‌ ಜೂನಿಯರ್ ವರ್ಲ್ಡ್‌ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಪದಕ ಬೇಟೆಯನ್ನಾಡುವಲ್ಲಿ ಮನು ಯಶಸ್ವಿಯಾಗಿದ್ದರು. ಮನು ಅವರ ಕ್ರೀಡಾ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ 2020ರಲ್ಲಿ ಅರ್ಜುನ ಅವಾರ್ಡ್ ನೀಡಿ ಗೌರವಿಸಿತ್ತು.

ಇನ್ನು ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡುವ ಮುನ್ನ ಹಲವು ಸವಾಲು ಹಾಗೂ ಅವಮಾನಗಳನ್ನು ಎದುರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮುನ್ನ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಶೂಟಿಂಗ್ ವೇಳೆ ಪಿಸ್ತೂಲ್ ಕೈಕೊಟ್ಟಿದ್ದರಿಂದಾಗಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದರು. ಇದರ ಬೆನ್ನಲ್ಲೇ ಮನು ಭಾಕರ್ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

ಈ ಟೀಕೆ, ಅವಮಾನಗಳಿಂದ ಕುಗ್ಗಿಹೋಗಿದ್ದ ಮನು ಭಾಕರ್ ಒಂದು ಹಂತದಲ್ಲಿ ಶೂಟಿಂಗ್ ತೊರೆಯಲು ಮುಂದಾಗಿದ್ದರು ಎಂದು ವರದಿಯಾಗಿದೆ. ಆದರೆ ಆ ಸೋಲನ್ನು ಸವಾಲಾಗಿ ತೆಗೆದುಕೊಂಡ ಮನು ಭಾಕರ್ ಇದೀಗ ದೇಶಕ್ಕೆ ಪದಕದ ಖಾತೆ ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!