
ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಾಕರ್ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ 22 ವರ್ಷದ ಹರ್ಯಾಣ ಮೂಲದ ಮನು ಭಾಕರ್ ಕಂಚು ಗೆದ್ದು, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕದ ಖಾತೆ ತೆರೆಯುವ ಮೂಲಕ ಕೋಟ್ಯಾಂತರ ಭಾರತೀಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಇನ್ನು ಕಂಚಿನ ಪದಕ ಬೇಟೆಯಾಡಿದ ಬೆನ್ನಲ್ಲೇ ಮಾತನಾಡಿದ ಮನು ಭಾಕರ್, ಭಗವತ್ ಗೀತೆಯಲ್ಲಿ ಶ್ರೀಕೃಷ್ಣ, ಅರ್ಜುನನಿಗೆ ನೀಡಿದ ಉಪದೇಶವನ್ನು ಸ್ಮರಿಸಿಕೊಂಡಿದ್ದಾರೆ.
ಹೌದು, ಒಲಿಂಪಿಕ್ಸ್‌ನಲ್ಲಿ ಭಾರತವು 2012ರಿಂದೀಚಗೆ ಶೂಟಿಂಗ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಗಗನ್ ನಾರಂಗ್ ಕೊನೆಯದಾಗಿ ಭಾರತಕ್ಕೆ ಪದಕ ಜಯಿಸಿದ್ದರು. ಇದೀಗ ಮನು ಭಾಕರ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸುವುದರೊಂದಿಗೆ, ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಮೊದಲ ಮಹಿಳಾ ಶೂಟರ್ ಎನ್ನುವ ಚಾರಿತ್ರಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಪ್ತ ಸಾಗರದಾಚೆ ಕಂಚು ಗೆದ್ದ ಮನು; ಶೂಟಿಂಗ್ ಮೂಲಕ ಪದಕದ ಖಾತೆ ತೆರೆದ ಭಾರತ
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ಮಾತನಾಡಿದ ಮನು ಭಾಕರ್, "ನಾನು ಭಗವತ್ ಗೀತೆ ಓದಿದ್ದು, ಪದಕ ಗೆಲ್ಲಲು ನೆರವಾಯಿತು ಎಂದು ಹೇಳಿದ್ದಾರೆ. "ನಾನು ಸಾಕಷ್ಟು ಬಾರಿ ಭಗವತ್ ಗೀತೆಯನ್ನು ಓದಿದ್ದೇನೆ. ಅದರಲ್ಲಿ ಭಗವಂತ ಶ್ರೀಕೃಷ್ಣನು, ನಿನ್ನ ಕೆಲಸವನ್ನು ನೀನು ಮಾಡು, ಅದರಿಂದ ಬರುವ ಫಲಿತಾಂಶದ ಬಗ್ಗೆ ಆಲೋಚಿಸಬೇಡ" ಎನ್ನುವ ಮಾತು ನನಗೆ ಸ್ಪೂರ್ತಿಯಾಯಿತು ಎಂದು ಹರ್ಯಾಣ ಮೂಲದ ಶೂಟರ್ ಹೇಳಿದ್ದಾರೆ.
ಮಹಾ ಭಾರತದ ಯುದ್ದದ ಸಂದರ್ಭದಲ್ಲಿ ಅರ್ಜುನನು, ಅತಿರಥ ಮಹಾಶಯರ ಎದುರು ಯುದ್ದ ಮಾಡಲು ಹಿಂದೇಟು ಹಾಕುತ್ತಾನೆ. ಆಗ ಅರ್ಜುನನಿಗೆ ಸಾರಥಿಯಾಗಿದ್ದ ಶ್ರೀ ಕೃಷ್ಣನು 'ಕರ್ಮಣ್ಯೇ ವಧಿಕಾರಸ್ತೇ, ಮಾ ಫಲೇಶೌ ಕದಾ ಚನ' ಎಂದು ವಿವರಿಸುತ್ತಾನೆ. ಅಂದರೆ ನಿಮ್ಮ ಕರ್ತವ್ಯವನ್ನು ಮಾಡಿ, ಆದರೆ ಫಲಿತಾಂಶಗಳ ಬಗ್ಗೆ ಚಿಂತಿಸಬೇಡಿ ಎನ್ನುವುದಾಗಿದೆ. ಅದೇ ರೀತಿ ಮನು ಭಾಕರ್, ಗುರಿಯತ್ತ ಗಮನ ಹರಿಸಿದರು. ಹೀಗಾಗಿ ಶಾಂತ ಚಿತ್ತದಿಂದ ಇದ್ದು ಕೊನೆಗೂ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾದರು.
10 ಮೀಟರ್ ಏರ್ ರೈಫಲ್: ಫೈನಲ್‌ಗೆ ಲಗ್ಗೆಯಿಟ್ಟ ರಮಿತಾ ಜಿಂದಾಲ್, ಪದಕಕ್ಕೆ ಇನ್ನೊಂದು ಹೆಜ್ಜೆ
ಕಳೆದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಾಕರ್ ಅವರಿಗೆ ಸ್ಪರ್ಧೆಯ ವೇಳೆ ಪಿಸ್ತೂಲ್ ಕೈಕೊಟ್ಟಿದ್ದರಿಂದ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದರು. ಇನ್ನು ಫೈನಲ್‌ನಲ್ಲಿ 241.3 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಇನ್ನು ಕೊರಿಯಾದ ಓಹ್ ಯೆ ಜಿನ್ 243.2 ಒಲಿಂಪಿಕ್ ರೆಕಾರ್ಡ್‌ನೊಂದಿಗೆ ಚಿನ್ನದ ಪದಕ ಜಯಿಸಿದರೇ, ಅದೇ ದೇಶದ ಕಿಮ್ ಯೆಜಿ 241.3 ಅಂಕಗಳೊಂದಿಗೆ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.