ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: 2ನೇ ಸುತ್ತಿಗೆ ಸಿಂಧು, ಸೈನಾ

By Kannadaprabha News  |  First Published Jan 9, 2020, 10:51 AM IST

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ದಿನ ಭಾರತಕ್ಕೆ ಮಿಶ್ರಫಲ ಎದುರಾಗಿದೆ. ಸೈನಾ, ಸಿಂಧು, ಪ್ರಣಯ್ ಎರಡನೇ ಸುತ್ತಿಗೆ ಲಗ್ಗೆಯಿಟ್ಟರೆ, ಶ್ರೀಕಾಂತ್, ಕಶ್ಯಪ್ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..


ಕೌಲಾಲಂಪುರ(ಜ.09): ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 2ನೇ ದಿನವಾದ ಬುಧವಾರ ಭಾರತದ ಶಟ್ಲರ್‌ಗಳು ಮಿಶ್ರಫಲ ಅನುಭವಿಸಿದ್ದಾರೆ. ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು ಹಾಗೂ ಎಚ್‌.ಎಸ್‌. ಪ್ರಣಯ್‌ 2ನೇ ಸುತ್ತು ಪ್ರವೇಶಿಸಿದರೆ, ಮಾಜಿ ನಂ.1 ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.

ಗುಡ್‌ ಲಕ್‌: ಇಂದಿನಿಂದ ಮಲೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್

Tap to resize

Latest Videos

2019ರಲ್ಲಿ ಏಳು-ಬೀಳುಗಳನ್ನು ಕಂಡಿದ್ದ ಸಿಂಧು, 2020ರ ಮೊದಲ ಸೆಣಸಾಟದಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸಿಂಧು, ರಷ್ಯಾದ ಎವಾಗ್ನಿಯಾ ಕೊಸೆಟ್ಸಕಾಯ ವಿರುದ್ಧ 21-15, 21-13 ಗೇಮ್‌ಗಳಲ್ಲಿ ಗೆಲುವು ಪಡೆದರು. 2ನೇ ಸುತ್ತಿನಲ್ಲಿ ಅವರು, ಜಪಾನ್‌ನ ಅಯಾ ಒಹೊರಿರನ್ನು ಎದುರಿಸಲಿದ್ದಾರೆ.

ಮತ್ತೊಂದು ಸಿಂಗಲ್ಸ್‌ ಪಂದ್ಯದಲ್ಲಿ ಸೈನಾ, ಬೆಲ್ಜಿಯಂನ ಲಿಯನ್ನೆ ಟಾನ್‌ ಎದುರು 21-15, 21-17 ಗೇಮ್‌ಗಳಲ್ಲಿ ಜಯ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಅವರು, ಕೊರಿಯಾದ ಸೆ ಯಂಗ್‌ ಆನ್‌ ಎದುರು ಸೆಣಸಲಿದ್ದಾರೆ.

ಪ್ರಣಯ್‌ಗೆ ಜಯ: ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಲ್ಲಿ ವಿಶ್ವ ನಂ.26 ಪ್ರಣಯ್‌, ವಿಶ್ವ ನಂ.10 ಜಪಾನ್‌ನ ಕಂಟ ಸುನೆಯೇಮಾ ವಿರುದ್ಧ 21-9, 21-17 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ಪ್ರಣಯ್‌, ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮಟಾರನ್ನು ಎದುರಿಸಲಿದ್ದಾರೆ. ಇನ್ನೊಂದು ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ, ಥಾಯ್ಲೆಂಡ್‌ನ ಕಂಟಪೊನ್‌ ವಂಗ್‌ಚರೊನ್‌ ಎದುರು 21-16, 21-15 ಗೇಮ್‌ಗಳಲ್ಲಿ ಗೆದ್ದರು.

ಕಿದಂಬಿ ಶ್ರೀಕಾಂತ್‌, ಚೈನೀಸ್‌ ತೈಪೆಯ ಚೊ ಟೀನ್‌ ಚೆನ್‌ ವಿರುದ್ಧ 17-21, 5-21 ಗೇಮ್‌ಗಳಲ್ಲಿ ಪರಾಭವಗೊಂಡರು. ಮತ್ತೊಂದು ಪಂದ್ಯದಲ್ಲಿ ಬಿ. ಸಾಯಿ ಪ್ರಣೀತ್‌, ಡೆನ್ಮಾರ್ಕ್ನ ರಸ್ಮಸ್‌ ಗಮ್ಕೆ ಎದುರು 11-21, 15-21 ಗೇಮ್‌ಗಳಲ್ಲಿ ಸೋತರೆ, ಪಿ. ಕಶ್ಯಪ್‌, ಜಪಾನ್‌ನ ಕೆಂಟೊ ಮೊಮಟಾಗೆ 17-21, 16-21 ಗೇಮ್‌ಗಳಲ್ಲಿ ಶರಣಾದರು.
 

click me!