* ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
* 2ನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕೆ ಭಾನುವಾರ ಅದ್ಧೂರಿ ಚಾಲನೆ
* ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ
ಬೆಂಗಳೂರು(ಏ.25): ಕರ್ನಾಟಕದ ಕಲಾವೈಭವದ ಪ್ರದರ್ಶನ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯಾತಿಗಣ್ಯರ ಉಪಸ್ಥಿತಿಯೊಂದಿಗೆ 2ನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕೆ ಭಾನುವಾರ ಅದ್ಧೂರಿ ಚಾಲನೆ ದೊರೆಯಿತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕರ್ನಾಟಕದ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.
10 ದಿನಗಳ ಕ್ರೀಡಾಕೂಟಕ್ಕೆ ವೆಂಕಯ್ಯ ನಾಯ್ಡು ಚಾಲನೆ ನೀಡಿದರು. ತಾರಾ ಈಜುಪಟು ಶ್ರೀಹರಿ ನಟರಾಜ್ 4,000 ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ದಿಗ್ಗಜ ಕ್ರೀಡಾಪಟುಗಳ ದಂಡೇ ನೆರೆದಿತ್ತು. ಮಾಜಿ ಕ್ರೀಡಾ ತಾರೆಯರಾದ ವಿಮಲ್ ಕುಮಾರ್, ಅಂಜು ಬಾಬಿ ಜಾರ್ಜ್, ಎಸ್.ವಿ.ಸುನಿಲ್, ಅಶ್ವಿನಿ ನಾಚಪ್ಪ, ರೀತ್ ಅಬ್ರಾಹಾಂ, ಬಿ.ಆರ್.ಬೀಡು, ಎ.ಬಿ.ಸುಬ್ಬಯ್ಯ, ವಿ.ಆರ್.ರಘುನಾಥ್, ಕೆ.ವೈ.ವೆಂಕಟೇಶ್, ಸಹನಾ ಕುಮಾರಿ, ಮಾಲತಿ ಹೊಳ್ಳ, ಯುವ ಕ್ರೀಡಾಪಟುಗಳಾದ ಶಶಿಕಾಂತ್ ನಾಯ್ಕ್, ಸಹನಾ ಎಸ್.ಎಂ., ಮಣಿಕಂಠನ್, ತಾನ್ಯ ಹೇಮಂತ್ ಸಹ ಉಪಸ್ಥಿತರಿದ್ದರು.
undefined
ಕ್ರೀಡಾಕೂಟವನ್ನು ಉದ್ಘಾಟಿಸಿ ಕನ್ನಡದಲ್ಲೇ ಮಾತು ಆರಂಭಿಸಿದ ವೆಂಕಯ್ಯ ನಾಯ್ಡು, ‘ಕ್ರೀಡೆ ಬದುಕಿನ ಭಾಗವಾಗಬೇಕು. ಇದರಿಂದ ಸಾರ್ಥಕ ಬದುಕು ಕಂಡುಕೊಳ್ಳಲು ಸಾಧ್ಯ. ನಿಮ್ಮಷ್ಟದ ಕ್ರೀಡೆಯನ್ನು ಆಡುವ ಮೂಲಕ ದೈಹಿಕವಾಗಿ ಫಿಟ್ ಆಗಿರುವ ಜೊತೆಗೆ ಮಾನಸಿಕವಾಗಿಯೂ ಜಾಗೃತರಾಗಿರಬಹುದು. ನನಗೀಗ 72 ವರ್ಷ ವಯಸ್ಸು. ನಾನೀಗಲೂ ನಿತ್ಯ ಬ್ಯಾಡ್ಮಿಂಟನ್ ಆಡುತ್ತೇನೆ. ದೇಶದಲ್ಲಿ ಕ್ರೀಡಾ ಕ್ರಾಂತಿ ಶುರುವಾಗಿದೆ. ಟೋಕಿಯೋ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ತೋರಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ’ ಎಂದರು.
ಬೆಂಗಳೂರಿನಲ್ಲಿಂದು ಖೇಲೋ ಇಂಡಿಯಾ ವಿವಿ ಗೇಮ್ಸ್ ಉದ್ಘಾಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಖೇಲೋ ಇಂಡಿಯಾಗೆ ಆತಿಥ್ಯ ವಹಿಸುತ್ತಿರುವುದಕ್ಕೆ ನಮಗೆ ಬಹಳ ಖುಷಿ ಇದೆ. ನಮ್ಮ ಬದ್ಧತೆ, ಆತಿಥ್ಯವನ್ನು ತೋರಿಸಲು ಇದು ಉತ್ತಮ ಅವಕಾಶ. ಖೇಲೋ ಇಂಡಿಯಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕ್ರೀಡೆಗೆ ಹೊಸ ಆಯಾಮ ನೀಡಿದ್ದಾರೆ’ ಎಂದರು.
ಕ್ರೀಡಾಕೂಟದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ‘2 ವರ್ಷದ ಬಳಿಕ ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟವಿದು. ಕರ್ನಾಟಕ ಈ ಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸುತ್ತಿದೆ. ಕ್ರೀಡಾಪಟುಗಳ ಜೊತೆ ಮಾತುಕತೆ ನಡೆಸಿದಾಗ ಅವರು ವಿಶ್ವ ದರ್ಜೆ ಸೌಕರ್ಯಗಳ ಬಗ್ಗೆ ಖುಷಿ ವ್ಯಕ್ತಪಡಿಸಿದರು’ ಎಂದರು. ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಾ.ಸಿ.ಎನ್.ಅಶ್ವತ್‌್ಥನಾರಾಯಣ, ಸಂಸದ ಪಿ.ಸಿ.ಮೋಹನ್, ಹಲವು ಶಾಸಕರು, ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಸೇರಿ ಇತರ ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಲೆಗಳ ಮೆರುಗು
ಉದ್ಘಾಟನಾ ಸಮಾರಂಭದ ವೇಳೆ ಕರ್ನಾಟಕದ ಡೊಳ್ಳು ಕುಣಿತ, ಹುಲಿ ವೇಷ, ಪೂಜಾ ಕುಣಿತ, ಯಕ್ಷಗಾನ, ಕೇರಳದ ಚಂಡೆ, ಪಂಜಾಬ್‌ನ ಡೋಲ್ ಸೇರಿ ಇನ್ನೂ ಹಲವು ರೀತಿಯ ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಬಾಲಕರ ಮಲ್ಲಕಂಬ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸಚಿವ ಅನುರಾಗ್ ಠಾಕೂರ್ ತಮ್ಮ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ, ಎದ್ದುನಿಂತ ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು. ಯುವ ಪ್ರತಿಭೆಗಳು ತೋರಿದ ಆ್ಯರ್ಕೋಬ್ಯಾಟಿಕ್ ಪ್ರದರ್ಶನ ಎಲ್ಲರ ಮೈನವಿರೇಳಿಸಿತು.
ರಾಗಿ ಮುದ್ದೆ ಬಗ್ಗೆ ವೆಂಕಯ್ಯ ಮಾತು!
ನಮ್ಮತನ, ನಮ್ಮ ಆಹಾರ, ನಮ್ಮ ಕ್ರೀಡೆಗಳ ಬಗ್ಗೆ ಯುವಕರು ಗಮನ ಹರಿಸಬೇಕು. ನಮ್ಮಲ್ಲೇ ಎಲ್ಲವೂ ಶ್ರೇಷ್ಠವಾದದ್ದು ಇರುವಾಗ ಪಾಶ್ಚಾತ್ಯ ಜೀವನ ಶೈಲಿಯ ಬಗ್ಗೆ ಒಲವು ತೋರುವುದು ಸರಿಯಲ್ಲ. ಕರ್ನಾಟಕದ ರಾಗಿ ಮುದ್ದೆಗಿಂತ ಮತ್ತೊಂದು ಪೌಷ್ಠಿಕ ಆಹಾರವೆಲ್ಲಿದೆ ಎಂದು ವೆಂಕಯ್ಯ ನಾಯ್ಡು ಅವರು ಯುವಕರಿಗೆ ದೇಸಿತನದ ಬಗ್ಗೆ ಕಿವಿಮಾತು ಹೇಳಿದರು.
ಬೆಂಗಳೂರಿನ ಬಗ್ಗೆ ಪ್ರಧಾನಿ ಭಾರೀ ಮೆಚ್ಚುಗೆ
ಉದ್ಘಾಟನಾ ಸಮಾರಂಭದ ವೇಳೆ ಪ್ರಧಾನಿ ಮೋದಿ ಅವರ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು. ‘ಬೆಂಗಳೂರು ನಗರ ದೇಶದ ಯುವಶಕ್ತಿಯ ಸಂಕೇತ. ಡಿಜಿಟಲ್ ಭಾರತದ ಯುಗ ಹಾಗೂ ಸ್ಟಾರ್ಟ್ ಅಪ್‌ಗಳ ತವರೂರಲ್ಲಿ ಇಷ್ಟುದೊಡ್ಡ ಕ್ರೀಡಾಕೂಟ ನಡೆಯುತ್ತಿರುವುದು ಖುಷಿಯ ವಿಚಾರ. ಖೇಲೋ ಇಂಡಿಯಾದ ಆಯೋಜನೆಯಿಂದ ಅದ್ಭುತ ನಗರದ ಮೆರುಗು ಮತ್ತಷ್ಟು ಹೆಚ್ಚಲಿದೆ. ಇಂತಹ ಕ್ರೀಡಾಕೂಟಕ್ಕೆ ಆತಿಥ್ಯ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ ನಡುವೆಯೇ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ದೇಶದಲ್ಲಿ ಕ್ರೀಡೆಯ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಕರ್ನಾಟಕದ ಜನರ ಧೈರ್ಯಕ್ಕೆ ನನ್ನ ನಮನ’ ಎಂದರು.