ಖೇಲೋ ಇಂಡಿಯಾದಲ್ಲಿ ಕರ್ನಾಟಕ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿದಿದೆ. ನಿನ್ನೆ ರಾಜ್ಯಕ್ಕೆ ಒಟ್ಟು 13 ಪದಕ ಒಲಿದು ಬಂದಿದೆ. ಖೇಲೋ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್ ವಿವರ ಇಲ್ಲಿದೆ.
ಗುವಾಹಟಿ(ಜ.22): 3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ರಾಜ್ಯದ ಈಜುಪಟುಗಳ ಚಿನ್ನದ ಬೇಟೆ ಮುಂದುವರಿದಿದೆ. ಮಂಗಳವಾರದ ಸ್ಪರ್ಧೆಯಲ್ಲಿ ಕರ್ನಾಟಕ 5 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನೊಂದಿಗೆ ಒಟ್ಟು 13 ಪದಕ ಜಯಿಸಿತು. ಇದರಲ್ಲಿ 10 ಪದಕಗಳು ಈಜು ಸ್ಪರ್ಧೆಗಳಲ್ಲಿ ಬಂದವು. ವೇಟ್ ಲಿಫ್ಟಿಂಗ್, ಬಾಕ್ಸಿಂಗ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ತಲಾ 1 ಪಂದ್ಯ ದೊರೆಯಿತು.
ಇದನ್ನೂ ಓದಿ: ಖೇಲೋ ಇಂಡಿಯಾ: ಈಜಿನಲ್ಲಿ ರಾಜ್ಯದ ಪ್ರಾಬಲ್ಯ
ಅಂಡರ್ 17 ಬಾಲಕರ 50 ಮೀ. ಫ್ರೀಸ್ಟೈಲ್‌ನಲ್ಲಿ ಹಿತನ್ ಮಿತ್ತಲ್ ಚಿನ್ನ ಗೆದ್ದರು. ಬಾಲಕರ 200 ಮೀ. ಬಟರ್‌ಫ್ಲೈನಲ್ಲಿ ಸಂಭವ್ ಕಂಚು ಗೆದ್ದರು. ಬಾಲಕಿಯರ 200 ಮೀ. ಬಟರ್‌ಫ್ಲೈನಲ್ಲಿ ಅನ್ವೇಷಾ ಗಿರೀಶ್ ಬೆಳ್ಳಿ ಗೆದ್ದರೆ, ಬಾಲಕರ 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಸಂಭವ್, ವೈಭವ್, ಹಿತನ್, ಅನೀಶ್ ಅವರನ್ನೊಳಗೊಂಡ ರಾಜ್ಯ ತಂಡ ಚಿನ್ನಕ್ಕೆ ಮುತ್ತಿಟ್ಟಿತು.
ಅಂಡರ್ 21 ಬಾಲಕರ 200 ಮೀ. ಬಟರ್‌ಫ್ಲೈನಲ್ಲಿ ಸಂಜಯ್ ಸಿ.ಜೆ. ಚಿನ್ನ ಜಯಿಸಿದರೆ, ಇದೇ ವಿಭಾಗದಲ್ಲಿ ಸೈಫ್ ಚಂದನ್ ಬೆಳ್ಳಿ ಗೆದ್ದರು. ಬಾಲಕರ 50 ಮೀ. ಫ್ರೀಸ್ಟೈಲ್‌ನಲ್ಲಿ ತಾರಾ ಈಜುಪಟು ಶ್ರೀಹರಿ ನಟರಾಜ್ ಬೆಳ್ಳಿಗೆ ತೃಪ್ತಿಪಟ್ಟರು. ಬಾಲಕರ 50 ಮೀ. ಬ್ರೆಸ್ಟ್‌ಸ್ಟೊ್ರೕಕ್‌ನಲ್ಲಿ ಪೃಥ್ವಿಕ್, ಬಾಲಕರ 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಸಂಜಯ್, ಸೈಫ್ ಚಂದನ್, ಪೃಥ್ವಿಕ್, ಶ್ರೀಹರಿ ಅವರನ್ನೊಳಗೊಂಡ ರಾಜ್ಯ ತಂಡ ರಜತ ಪದಕ ಜಯಿಸಿತು. ಈಜು ಸ್ಪರ್ಧೆಯಲ್ಲಿ 18 ಚಿನ್ನ, 15 ಬೆಳ್ಳಿ, 5 ಕಂಚು ಗೆದ್ದಿರುವ ಕರ್ನಾಟಕ, 38 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ: ಈಜಿನಲ್ಲಿ ರಾಜ್ಯಕ್ಕೆ 5 ಚಿನ್ನ; ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕರ್ನಾಟಕ!
ವೇಟ್‌ಲಿಫ್ಟಿಂಗಲ್ಲಿ ಚಿನ್ನ:
ಅಂಡರ್ 21 ಬಾಲಕಿಯರ 81 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ಅಕ್ಷತಾ ಕಮಟಿ ಒಟ್ಟು 185 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನ ಗೆದ್ದರು. ಅಂಡರ್ 17 ಬಾಲಕಿಯರ 50 ಕೆ.ಜಿ. ಫ್ಲೈ ಬಾಕ್ಸಿಂಗ್ ಫೈನಲ್ ಸ್ಪರ್ಧೆಯಲ್ಲಿ ಹರಾರಯಣದ ರಿಂಕು ಎದುರು ಪರಾಭವಗೊಂಡ ರಾಜ್ಯದ ಬಾಕ್ಸರ್ ಅಂಜು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇದೇ ವೇಳೆ ಅಂಡರ್-17 ಬಾಲಕಿಯರ ಬ್ಯಾಡ್ಮಿಂಟನ್‌ನಲ್ಲಿ ಜನನಿ ಅನಂತಕುಮಾರ್ ಕಂಚಿನ ಪದಕ ಜಯಿಸಿದರು. 12ನೇ ದಿನದ ಮುಕ್ತಾಯಕ್ಕೆ ಕರ್ನಾಟಕ 25 ಚಿನ್ನ, 24 ಬೆಳ್ಳಿ ಹಾಗೂ 18 ಕಂಚಿನೊಂದಿಗೆ ಒಟ್ಟು 67 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬುಧವಾರ ಕೂಟದ ಅಂತಿಮ ದಿನವಾಗಿದ್ದು, ಕರ್ನಾಟಕ 4ನೇ ಸ್ಥಾನಕ್ಕೇರುವ ಗುರಿ ಹೊಂದಿದೆ.