Interview: ದೇಶದಲ್ಲಿ Basketball ಕ್ರಿಕೆಟ್‌ನಷ್ಟೇ ಜನಪ್ರಿಯಗೊಳ್ಳಲಿದೆ: BFI ಅಧ್ಯಕ್ಷ ಗೋವಿಂದರಾಜು

By Kannadaprabha NewsFirst Published Nov 19, 2021, 7:37 AM IST
Highlights

* ದೇಶದಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ಭಾರತೀಯ ಬಾಸ್ಕೆಟ್‌ಬಾಲ್‌ ಫೆಡರೇಷನ್

* ಐಪಿಎಲ್‌ ಮಾದರಿಯಲ್ಲಿ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿ ಆಯೋಜಿಸಲು ಬಿಎಫ್‌ಐ ನಿರ್ಧಾರ

* ಬಾಸ್ಕೆಟ್‌ಬಾಲ್ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಬಿಎಫ್‌ಐ ಅಧ್ಯಕ್ಷ ಗೋವಿಂದರಾಜು

- ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು(ನ.19): ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್‌ನಷ್ಟೇ (Cricket) ಜನಪ್ರಿಯತೆಯನ್ನು ಬಾಸ್ಕೆಟ್‌ಬಾಲ್‌ (Basketball) ಸಹ ಪಡೆಯಲಿದೆ. ಐಎನ್‌ಬಿಎಲ್‌ ಆರಂಭಗೊಂಡ ಬಳಿಕ ಬಾಸ್ಕೆಟ್‌ಬಾಲ್‌ನತ್ತ ಕ್ರೀಡಾ ಆಸಕ್ತರ ಕ್ರೇಜ್‌ ಹೆಚ್ಚಾಗಲಿದೆ ಎಂದು ಭಾರತೀಯ ಬಾಸ್ಕೆಟ್‌ಬಾಲ್‌ ಫೆಡರೇಷನ್‌(ಬಿಎಫ್‌ಐ) (Basketball Federation Of India) ಅಧ್ಯಕ್ಷ ಕೆ.ಗೋವಿಂದರಾಜು (K Govindaraj) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹತ್ವಾಕಾಂಕ್ಷೆಯ ಐಎನ್‌ಬಿಎಲ್‌ ಘೋಷಣೆಗೂ ಮುನ್ನ ಗುರುವಾರ ಏಷ್ಯಾನೆಟ್‌ ಸುವರ್ಣನ್ಯೂಸ್‌.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ‘ಸಾಮಾನ್ಯವಾಗಿ ದೇಶದಲ್ಲಿ ಕ್ರಿಕೆಟ್‌ ಮೇಲೆ ಜನರಿಗೆ ಕ್ರೇಜ್‌ ಜಾಸ್ತಿ. ಆದರೆ ಕ್ರಿಕೆಟ್‌ ವಿಶ್ವದ ಎಲ್ಲಾ ದೇಶಗಳಲ್ಲೂ ಇಲ್ಲ. ಆದರೆ ಬಾಸ್ಕೆಟ್‌ಬಾಲ್‌, ಫುಟ್ಬಾಲ್‌ (Football) ಸೇರಿದಂತೆ ಕೆಲ ಕ್ರೀಡೆಗಳು ಜಗತ್ತಿನ ಎಲ್ಲಾ ದೇಶಗಳಲ್ಲಿ ಆಡಲಾಗುತ್ತಿದೆ. ಐಎನ್‌ಬಿಎಲ್‌ನಿಂದ (INBL) ಜನರ ಕ್ರೇಜ್‌ ಬಾಸ್ಕೆಟ್‌ಬಾಲ್‌ ಮೇಲೂ ಉಂಟಾಗಲಿದೆ’ ಎಂದರು. ಇದೇ ವೇಳೆ ‘ಪೋಷಕರು ಕೂಡಾ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತಗೊಳಿಸದೆ ಕ್ರೀಡೆಯ ಕಡೆಗೂ ಆಸಕ್ತಿ ತೋರುವಂತೆ ಮಾಡಬೇಕು. ಮುಂದಿನ 6 ತಿಂಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆ ಆಗಲಿದೆ’ ಎಂದರು.

ಶ್ರೀಘ್ರದಲ್ಲೇ IPL ರೀತಿಯ ಬಾಸ್ಕೆಟ್‌ಬಾಲ್‌ ಲೀಗ್ ಟೂರ್ನಿ ಆರಂಭ

ಲೀಗ್‌ಗೆ ಸಂಬಂಧಿಸಿ ಪತ್ರಿಕೆ ಕೇಳಿದ ಹಲವು ಪ್ರಶ್ನೆಗಳಿಗೆ ಗೋವಿಂದರಾಜು ವಿವರವಾಗಿ ಉತ್ತರಿಸಿದರು.

ಐಎನ್‌ಬಿಎಲ್‌ನಿಂದ ರಾಜ್ಯದ ಆಟಗಾರರಿಗೆ ಅನುಕೂಲವಾಗಲಿದೆಯೇ?

ಖಂಡಿತಾ ಇದರಿಂದ ನಮ್ಮ ರಾಜ್ಯದ ಆಟಗಾರರಿಗೆ ಅನುಕೂಲವಾಗಲಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಲೀಗ್‌ಗೆ ಮಂಗಳೂರಿನ ಆಟಗಾರ ಆಯ್ಕೆ ಆಗಿದ್ದಾರೆ. ಹೀಗೇ ಮುಂದೆ ಎಲ್ಲಾ ಜಿಲ್ಲೆಗಳಿಂದಲೂ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬರಲಿದ್ದಾರೆ. ಮೈಸೂರು, ಬೆಂಗಳೂರು, ಮಂಗಳೂರು, ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸದ್ಯ ಬಾಸ್ಕೆಟ್‌ಬಾಲ್ ತಂಡಗಳಿವೆ. ಆದರೆ ಎಲ್ಲವೂ ಆಟಗಾರರ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ. ಈ ಲೀಗ್‌ನಿಂದ ರಾಜ್ಯದಲ್ಲಿ ಬದಲಾವಣೆ ಆಗುವುದು ಖಚಿತ. ಜೊತೆಗೆ ದೇಶದ ಕ್ರೀಡೆಯ ಮೇಲೂ ಸಾಕಷ್ಟುಪರಿಣಾಮ ಬೀರಲಿದೆ.

ಬಿಎಫ್‌ಐ ಮುಂದಿನ ಗುರಿ ಏನು ?

3*3 ವಿಧಾನದಲ್ಲೂ ಸದ್ಯ ನಾವು ಟೂರ್ನಿ ಆರಂಭಿಸುತ್ತೇವೆ. ಇದರಿಂದ ನಮಗೆ ಒಲಿಂಪಿಕ್ಸ್‌ (Olympics) ಕ್ವಾಲಿಫೈಯರ್‌ ಆಡಲು ಅಂಕಗಳು ಸಿಗುತ್ತವೆ. 2024ರ ಒಲಿಂಪಿಕ್ಸ್‌ಗೆ 3*3 ವಿಭಾಗದಲ್ಲಿ ಅರ್ಹತೆ ಗಳಿಸಬೇಕೆಂಬುದು ನಮ್ಮ ಈಗಿನ ಮುಖ್ಯ ಗುರಿ. ಸದ್ಯ 5*5 ವಿಭಾಗದಲ್ಲಿ ಪುರುಷರ ತಂಡ ಏಷ್ಯನ್‌ ಕ್ವಾಲಿಫೈಯರ್‌ನಲ್ಲಿ ಆಡುತ್ತಿದೆ. ಅಲ್ಲಿ ಗೆದ್ದರೆ ಒಲಿಂಪಿಕ್ಸ್‌ಗೆ ಅರ್ಹತೆಗೆ ಅವಕಾಶ ಸಿಗಲಿದೆ.

ಕೋವಿಡ್‌ ಸಮಯದಲ್ಲಿ ಲೀಗ್‌ ಆಯೋಜನೆ ಸವಾಲಲ್ಲವೇ?

ಸದ್ಯ ಕೋವಿಡ್‌ (COVID 19) ತೀವ್ರ ರೂಪದಲ್ಲಿಲ್ಲ. ಹೀಗಾಗಿ ನಮ್ಮ ಲೀಗ್‌ ಆಯೋಜನೆಗೆ ಯಾವುದೇ ತೊಂದರೆ ಆಗಲ್ಲ. ಅಲ್ಲದೇ, ಬಹುತೇಕ ಜನರು ಈಗ ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಯಾವ ಸಮಸ್ಯೆಯೂ ಇಲ್ಲ. ಆದರೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ. ಎಲ್ಲರನ್ನೂ ಪರೀಕ್ಷಿಸಿಯೇ ಕ್ರೀಡಾಂಗಣಕ್ಕೆ ಬಿಡುತ್ತೇವೆ.

ಲೀಗ್‌ ಜನರನ್ನು ಸೆಳಯುವ ವಿಶ್ವಾಸವಿದೆಯೇ?

ಖಂಡಿತಾ ಇದೆ. ಅದರಲ್ಲಿ ಯಾವ ಅನುಮಾನವೂ ಬೇಡ. ನಮ್ಮಲ್ಲಿ ಅವಕಾಶಗಳು ಕಡಿಮೆ ಇತ್ತು. ಆದರೆ ಇಲ್ಲಿ ಹಲವು ಪ್ರತಿಭಾನ್ವಿತ ಆಟಗಾರರಿದ್ದಾರೆ. ಈ ಲೀಗ್‌ ಮೂಲಕ ಅವರನ್ನು ಬೆಳಕಿಗೆ ತರುತ್ತೇವೆ. ಸೇನೆಗೆ ತರಬೇತಿ ಕೊಡುವಂತೆ ವರ್ಷಪೂರ್ತಿ ತರಬೇತಿ ನೀಡಿ ಬೆಳೆಸುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವರು ಸಾಧನೆ ಮಾಡುವಂತಾಗಬೇಕು. ಒಲಿಂಪಿಕ್ಸ್‌ನಲ್ಲಿ ಭಾರತ ಉತ್ತಮ ಸಾಧನೆ ಬಳಿಕ ನಿಜವಾಗಿಯೂ ಯುವ ಜನತೆಯಲ್ಲಿ ಕ್ರೀಡೆಯ ಮೇಲೆ ಆಸಕ್ತಿ ಹೆಚ್ಚಾಗಿದೆ. ಅಥ್ಲೆಟಿಕ್ಸ್‌ ಮಾತ್ರವಲ್ಲ, ಎಲ್ಲಾ ಕ್ರೀಡೆಗಳ ಮೇಲೂ ಜನರಲ್ಲಿ ಈಗ ಆಸಕ್ತಿ ಹೆಚ್ಚಿದೆ. ಸೋಶಿಯಲ್‌ ಮೀಡಿಯಾಗೆ ಸೀಮಿತವಾಗದೆ ಕಾರ‍್ಯರೂಪದಲ್ಲೂ ಕ್ರೀಡೆಯ ಮೇಲೆ ಒತ್ತು ಕೊಡಲು ಪೋಷಕರ ಸಹಕಾರ ಅಗತ್ಯ.

ಬಾಸ್ಕೆಬ್‌ಬಾಲ್‌ ಅಭಿವೃದ್ಧಿಗೆ ಯೋಜನೆಗಳೇನು?

ಅಂಡರ್‌-14 ಮಕ್ಕಳಿಗೆ ನಾವು ಮುಂದೆ ಬಾಸ್ಕೆಟ್‌ಬಾಲ್‌ ಲೀಗ್‌ ಆಯೋಜಿಸುತ್ತೇವೆ. ಈ ಮೂಲಕ ಸಣ್ಣ ವಯಸ್ಸಿನಲ್ಲೇ ಬಾಸ್ಕೆಟ್‌ಬಾಲ್‌ ಮೇಲಿನ ಆಸಕ್ತಿ ಹೆಚ್ಚುವಂತೆ ಮಾಡುವ ಗುರಿ ಇದೆ. ಶಾಲೆಗಳಲ್ಲೂ ಮಕ್ಕಳಿಗೆ ತರಬೇತಿ ನೀಡಲು ಬಿಎಫ್‌ಐ ವತಿಯಿಂದ ಎಲ್ಲಾ ಸಹಕಾರ ನೀಡುತ್ತೇವೆ. ಶಾಲಾ ಮಟ್ಟದಲ್ಲಿ ಅವರಿಗೆ ಅವಕಾಶ ಸಿಕ್ಕರೆ ಖಂಡಿತಾ ನಮ್ಮ ಯೋಜನೆಗಳು ಯಶಸ್ಸು ಕಾಣಲಿವೆ.
 

click me!