
ಬೆಂಗಳೂರು(ಫೆ.25): ಇತ್ತೀಚೆಗಷ್ಟೇ ಅಂ.ರಾ. ಮಟ್ಟದಲ್ಲಿ ಸುದ್ದಿ ಮಾಡಿದ್ದ ಕಂಬಳ ವೀರ ಶ್ರೀನಿವಾಸ್ ಗೌಡ ಅವರಿಗೆ ಮೂಡುಬಿದರಿಯ ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ನೀಡಲು ಕಂಬಳ ಅಕಾಡೆಮಿ ನಿರ್ಧರಿಸಿದೆ. ಸಾಯ್ (ಭಾರತೀಯ ಕ್ರೀಡಾ ಪ್ರಾಧಿಕಾರ)ಗೆ ತೆರಳುವ ಮುನ್ನ ಶ್ರೀನಿವಾಸ್ ಗೌಡ ಆಳ್ವಾಸ್‌ನ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಸ್ಪೈಕ್ ಶೂ ಧರಿಸಿ ಓಟ ಆರಂಭಿಸಲಿದ್ದಾರೆ ಎಂದು ಕಂಬಳ ಅಕಾಡೆಮಿಯ ಸಂಸ್ಥಾಪಕ ಗುಣಪಾಲ ಕಡಂಬ ಸೋಮವಾರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್ ದಾಖಲೆ!
‘ಇನ್ನೆರಡು ಕಂಬಳ ರೇಸ್ ಬಾಕಿ ಇದ್ದು, ಮಾ.7ಕ್ಕೆ ಋುತು ಮುಕ್ತಾಯಗೊಳ್ಳಲಿದೆ. ಸದ್ಯ ಇದುವರೆಗೂ 13 ಸ್ಪರ್ಧೆಗಳು ನಡೆದಿದ್ದು, ಪ್ರತಿಯೊಂದರಲ್ಲೂ ಶ್ರೀನಿವಾಸ್ ಭಾಗವಹಿಸಿ, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದಣಿವರಿಯದ ಶ್ರೀನಿವಾಸ್ ಈ ಆವೃತ್ತಿಯಲ್ಲಿ 39 ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಕಂಬಳ ಮುಗಿದ ಬಳಿಕ ಶ್ರೀನಿವಾಸ್‌ಗೆ 15 ರಿಂದ 20 ದಿನ ವಿಶ್ರಾಂತಿ ನೀಡಲಾಗುವುದು. ಆ ಬಳಿಕ ಮೂಡುಬಿದಿರೆಯ ಟ್ರ್ಯಾಕ್‌ನಲ್ಲಿ ಅಂ.ರಾ. ಮಟ್ಟದ ಅಥ್ಲೆಟಿಕ್ಸ್ ಕೋಚ್‌ಗಳ ಸಮ್ಮುಖದಲ್ಲಿ ತರಬೇತಿ ನೀಡಲು ಚಿಂತಿಸಲಾಗಿದೆ’ ಎಂದು ಗುಣಪಾಲ ತಿಳಿಸಿದರು.
ಓಪನ್ ಆಯ್ಕೆ ಪ್ರಕ್ರಿಯೆ: ಮಾರ್ಚ್ ತಿಂಗಳಲ್ಲಿ ಆಳ್ವಾಸ್ ಟ್ರ್ಯಾಕ್‌ನಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಗೆ ಶ್ರೀನಿವಾಸ್ ಗೌಡ ಸೇರಿದಂತೆ ಕಂಬಳದಲ್ಲಿನ ರೇಸರ್‌ಗಳು ಹಾಗೂ ಆಸಕ್ತಿ ಇರುವ ಇತರೆ ಓಟಗಾರರಿಗೆ ಮುಕ್ತ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಗುಣಪಾಲ ಹೇಳಿದರು.
ಮೇ ತಿಂಗಳ ಅಂತ್ಯಕ್ಕೆ ಸಾಯ್‌ಗೆ ಶ್ರೀನಿವಾಸ್
ಮೂಡುಬಿದಿರೆಯ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಸುಮಾರು 2 ತಿಂಗಳ ಅಭ್ಯಾಸದ ಬಳಿಕ ಮೇ ತಿಂಗಳ ಅಂತ್ಯದ ವೇಳೆಗೆ ಕಂಬಳ ವೀರ ಶ್ರೀನಿವಾಸ್ ಗೌಡ, ಬೆಂಗಳೂರಿನ ಸಾಯ್ ಕೇಂದ್ರಕ್ಕೆ ತೆರಳುವ ನಿರೀಕ್ಷೆ ಇದೆ ಎಂದು ಗುಣಪಾಲ ಹೇಳಿದರು.
ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!
ಈ ಮಧ್ಯೆ ಕಳೆದ ಶನಿವಾರ ರಾತ್ರಿ ಬೆಂಗಳೂರು ಸಾಯ್ ಕೇಂದ್ರದ ನಿರ್ದೇಶಕ ಅಜಯ್ ಕುಮಾರ್ ಬೆಹಲ್, ಅಥ್ಲೆಟಿಕ್ಸ್ ಮುಖ್ಯ ಕೋಚ್ ಕುರಿಯನ್ ಪಿ. ಮ್ಯಾಥ್ಯೂ, ಅಥ್ಲೆಟಿಕ್ಸ್ ಕೋಚ್ ಹರೀಶ್, ಕಾಸರಗೋಡಿನ ಪೈವಳಿಕೆಯಲ್ಲಿ ಕಂಬಳ ವೀಕ್ಷಿಸಿದರು. ‘ಕಂಬಳದ ಓಟಗಾರರಲ್ಲಿ ಕೌಶಲ್ಯ ಹಾಗೂ ಸಾಮರ್ಥ್ಯವಿದೆ. ಇವರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ದೊರೆಯಬೇಕು’ ಎಂದು ಅಜಯ್ ಕುಮಾರ್ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.