ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?

By Kannadaprabha News  |  First Published Sep 13, 2024, 11:46 AM IST

ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಸ್ಟೀಪಲ್‌ಚೇಸ್‌ ಪಟು ಅವಿನಾಶ್‌ ಸಾಬ್ಳೆ 2024ರ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಫೈನಲ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ


ಬ್ರಸೆಲ್ಸ್‌(ಬೆಲ್ಜಿಯಂ): 2024ರ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಫೈನಲ್ಸ್‌ ಶುಕ್ರವಾರ ಹಾಗೂ ಶನಿವಾರ ಬ್ರಸೆಲ್ಸ್‌ನಲ್ಲಿ ನಡೆಯಲಿದೆ. ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಹಾಗೂ 3000 ಮೀ. ಸ್ಟೀಪಲ್‌ಚೇಸ್‌ ಪಟು ಅವಿನಾಶ್‌ ಸಾಬ್ಳೆ ಕಣಕ್ಕಿಳಿಯಲಿದ್ದಾರೆ. ಇದೇ ಮೊದಲ ಸಲ ಫೈನಲ್ಸ್‌ನಲ್ಲಿ ಇಬ್ಬರು ಭಾರತೀಯರು ಸ್ಪರ್ಧಿಸಲಿದ್ದಾರೆ.

ಡೈಮಂಡ್‌ ಲೀಗ್‌ ವಾರ್ಷಿಕ ಕ್ರೀಡಾಕೂಟವಾಗಿದ್ದು, ವಿವಿಧ ನಗರಗಳಲ್ಲಿ ನಡೆಯುವ 14 ಚರಣಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಸೀಮಿತ ಅಥ್ಲೀಟ್‌ಗಳು ಫೈನಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಫೈನಲ್ಸ್‌ನಲ್ಲಿ ಗೆದ್ದವರು ಡೈಮಂಡ್‌ ಟ್ರೋಫಿ ಪಡೆಯಲಿದ್ದಾರೆ. ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್‌ ನೀರಜ್‌ 2022ರಲ್ಲಿ ಡೈಮಂಡ್‌ ಲೀಗ್‌ ಚಾಂಪಿಯನ್‌ ಆಗಿದ್ದರು. ಶನಿವಾರ ಅವರು ಸ್ಪರ್ಧಿಸಲಿದ್ದು, ಮತ್ತೊಮ್ಮೆ ಚಾಂಪಿಯನ್‌ ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ. ಮತ್ತೊಂದೆಡೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಅವಿನಾಶ್‌ ಕೂಡಾ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ನೀರಜ್‌ 4ನೇ ಸ್ಥಾನಿಯಾಗಿ ಫೈನಲ್‌ಗೇರಿದ್ದರೆ, ಅವಿನಾಶ್‌ 14ನೇ ಸ್ಥಾನ ಪಡೆದಿದ್ದಾರೆ.

Tap to resize

Latest Videos

undefined

ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ದಕ್ಷಿಣ ಕೊರಿಯಾವನ್ನು ಬಗ್ಗುಬಡಿದ ಹರ್ಮನ್‌ಪ್ರೀತ್‌ ಸಿಂಗ್‌ ಪಡೆ

ಇಂದಿನಿಂದ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿ ಶುರು

ಕೋಲ್ಕತಾ: 11ನೇ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದೆ. ಕಳೆದ ಬಾರಿ ಫೈನಲ್‌ ಪ್ರವೇಶಿಸಿದ್ದ 2 ತಂಡಗಳಾದ ಮೋಹನ್‌ ಬಗಾನ್‌ ಹಾಗೂ ಮುಂಬೈ ಎಫ್‌ಸಿ ಕೋಲ್ಕತಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ. 

ಐ-ಲೀಗ್‌ನಲ್ಲಿ ಗೆದ್ದ ಮೊಹಮ್ಮೆದನ್‌ ಎಸ್‌ಸಿ ತಂಡ ಐಎಸ್‌ಎಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಈ ಬಾರಿ ಒಟ್ಟು 13 ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ. ಪ್ರತಿ ತಂಡಗಳು ಇತರ 12 ತಂಡಗಳ ವಿರುದ್ದ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಲೀಗ್‌ ಹಂತದಲ್ಲಿ ತಲಾ 2 ಬಾರಿ ಸೆಣಸಾಡಲಿದೆ. 

ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಈ ಬಾರಿ ಈಸ್ಟ್‌ ಬೆಂಗಾಲ್ ವಿರುದ್ಧ ಸೆ.14ರಂದು ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಪ್ಯಾರಿಸ್‌ನಲ್ಲಿ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ಸ್‌ಗೆ ಪಿಎಂ ಮೋದಿ ಪ್ರೀತಿಯ ಆತಿಥ್ಯ

ಕರ್ನಾಟಕದ ಉನ್ನತಿಗೆ ಬಂಗಾರ

ಚೆನ್ನೈ: ಇಲ್ಲಿ ನಡೆಯುತ್ತಿರುವ ದಕ್ಷಿನ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಪ್‌ನಲ್ಲಿ ಭಾರತ ಮತ್ತೆ ಪ್ರಾಬಲ್ಯ ಸಾಧಿಸಿದೆ. ಕೂಟದ 2ನೇ ದಿನವಾದ ಗುರುವಾರ 9 ಚಿನ್ನ, 9 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ.

ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ 13.93 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. ಭಾರತದವರೇ ಆದ ಸಬಿತಾ(13.96) ಕೂಡಾ ಕೂಟ ದಾಖಲೆ ಬರೆದು ಬೆಳ್ಳಿ ಗೆದ್ದರು. ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಅನೀಶಾ ಚಿನ್ನ, ಅಮಾನತ್ ಬೆಳ್ಳಿ, 3000 ಮೀ. ರೇಸ್‌ನಲ್ಲಿ ಪ್ರಾಚಿ ಚಿನ್ನ, ಶಿಲ್ಪಾ ಬೆಳ್ಳಿ, ಲಾಂಗ್‌ಜಂಪ್‌ನಲ್ಲಿ ಪ್ರತೀಕ್ಷಾ ಚಿನ್ನ, ಲಕ್ಷಣ್ಯ ಬೆಳ್ಳಿ, 400 ರೇಸ್‌ನಲ್ಲಿ ನೀರು ಪಾಠಕ್ ಚಿನ್ನ, ಸಂದ್ರಾಮೊಲ್ ಸಾಬು ಬೆಳ್ಳಿ ಗೆದ್ದರು. 

ಪುರುಷರ ಲಾಂಗ್‌ಜಂಪ್‌ನಲ್ಲಿ ಜಿತಿನ್ ಚಿನ್ನ, ಸಾಜಿದ್ ಬೆಳ್ಳಿ, 300 ಮೀ. ರೇಸ್‌ನಲ್ಲಿ ಶಾರುಖ್ ಚಿನ್ನ, ಮೋಹಿತ್ ಬೆಳ್ಳಿ, ಡಿಸ್ಕಸ್ ಎಸೆತದಲ್ಲಿ ರಿತಿಕ್ ಚಿನ್ನ, ರಮನ್ ಬೆಳ್ಳಿ, 400 ಮೀ.ನಲ್ಲಿ ಜಯ್ ಕುಮಾರ್ ಚಿನ್ನ, ಅಭಿರಾಮ್‌ ಕಂಚು, 110 ಮೀ. ಹರ್ಡಲ್ಸ್‌ನಲ್ಲಿ ನಯಾನ್ ಬೆಳ್ಳಿ ಗೆದ್ದರು.
 

click me!