150 ಕೋಟಿ ರು. ವೆಚ್ಚದ ಯೋಜನೆ| 8 ಹೊರಾಂಗಣ, 11 ಒಳಾಂಗಣ ಕ್ರೀಡಾ ಸಂಕೀರ್ಣ| 2023ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ| ಪ್ರಕಾಶ ಪಡುಕೋಣೆ, ರಾಹುಲ್ ದ್ರಾವಿಡ್ ಅಕಾಡೆಮಿ ಸೇರಿ ತಜ್ಞರು ಇಲ್ಲಿನ ಕ್ರೀಡೆಗಳ ಆಯೋಜನೆ ಹಾಗೂ ತರಬೇತಿ|
ಮಯೂರ ಹೆಗಡೆ
ಹುಬ್ಬಳ್ಳಿ(ಜ.30): ಇಲ್ಲಿನ ಆರ್.ಎಂ. ಲೋಹಿಯಾ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 158 ಕೋಟಿ ರು. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಾರ್ಗಸೂಚಿ ಅನ್ವಯ ಸುಸಜ್ಜಿತ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಗೊಳ್ಳಲಿದ್ದು, 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಯೋಜನೆಯ ಡಿಪಿಆರ್ ಅಂತಿಮಗೊಂಡಿದ್ದು, ಟೆಂಡರ್‌ನ್ನು ಸ್ಮಾರ್ಟ್‌ಸಿಟಿ ಬುಧವಾರ ಕರೆದಿದೆ. ಈ ಪ್ರಕ್ರಿಯೆ 2 ತಿಂಗಳ ಕಾಲ ನಡೆಯಲಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಿಂದ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ. ಕ್ರೀಡಾ ಸಂಕೀರ್ಣ ನಿರ್ಮಾಣದ ಬಳಿಕ ಇದರ ನಿರ್ವಹಣೆಗೆ ಪ್ರತ್ಯೇಕ ಟೆಂಡರ್ ಕರೆದು ನೀಡಲು ನಿರ್ಧರಿಸಲಾಗಿದೆ. ಇನ್ನು, ಸಚಿವರು, ಶಾಸಕರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಸೇರಿ ಮೇಲ್ವಿಚಾರಣಾ ಕಮೀಟಿ ರಚಿಸಿ ನಿರ್ಮಾಣ, ನಿರ್ವಹಣೆಯ ಪರಿಶೀಲನೆ ನಡೆಯಲಿದೆ.
15 ಎಕರೆ:
ಒಟ್ಟಾರೆ 15 ಎಕರೆ ಪ್ರದೇಶದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಗೊಳ್ಳಲಿದೆ. 8 ವಿವಿಧ ಹೊರಾಂಗಣ ಕ್ರೀಡೆಗಳಿಗಾಗಿ 6.75 ಎಕರೆ ಪ್ರದೇಶ ಮೀಸಲಾಗಿದೆ. ಹಾಗೂ 11 ಬಗೆಯ ಒಳಾಂಗಣ ಕ್ರೀಡೆಗಳಿಗಾಗಿ 2.75 ಎಕರೆಯಲ್ಲಿ 5 ಬ್ಲಾಕ್‌ಗಳಲ್ಲಿ ಜಿ+3 ಮಾದರಿಯ ಕಟ್ಟಡಗಳು ನಿರ್ಮಾಣಗೊಳ್ಳಲಿವೆ ಎಂದು ಸ್ಮಾರ್ಟ್‌ಸಿಟಿ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ. ಇದಲ್ಲದೆ, ಕ್ರೀಡಾಪಟುಗಳಿಗೆ, ತರಬೇತುದಾರರಿಗೆ ವಸತಿ ವ್ಯವಸ್ಥೆ, ಕ್ರೀಡಾಪಟುಗಳ ಪಾಲಕರಿಗೆ ವಿಶ್ರಾಂತಿ ಕೊಠಡಿ, 180 ಜನರ ಸಾಮರ್ಥ್ಯದ ಸಭಾಂಗಣ ನಿರ್ಮಾಣ ಆಗಲಿದೆ. ಇನ್ನು, ಸುಮಾರು 200 ವಾಹನ ಪಾರ್ಕಿಂಗ್‌ಗೆ ಅವಕಾಶ ಇರಲಿದೆ.
ಇವರು ಪ್ರತಿಭಟಿಸುವ ರೈತರಲ್ಲ! ಕೊರೆಯುವ ಚಳಿಯಲ್ಲೂ ರಸ್ತೆಯಲ್ಲೇ ಮಲಗಿದ ಕುಸ್ತಿಪಟುಗಳು!
ಒಳಾಂಗಣ ಸೌಲಭ್ಯಗಳು:
ಸ್ಪೋಟ್ಸ್‌ರ್ ಕಾಂಪ್ಲೆಕ್ಸ್‌ನ ಒಳಾಂಗಣದಲ್ಲಿ ಬ್ಯಾಡ್ಮಿಂಟನ್ ಅಂಕಣ 12 (ಸಿಂಥೆಟಿಕ್), ಟೇಬಲ್ ಟೆನಿಸ್ 6, ಆರ್ಚರಿ 25 ಮೀ. 4 ಲೇನ್, ಪಿಸ್ತೂಲ್ ಮತ್ತು ರೈಫಲ್ ಶೂಟಿಂಗ್ 10 ಮೀ. 6 ಲೇನ್, ಸಿಂಥೆಟಿಕ್ ಕುಸ್ತಿ ಕಣ 1, ಸಿಂಥೆಟಿಕ್ ಕಬಡ್ಡಿ ಅಂಕಣ 1, ಸಿಂಥೆಟಿಕ್ ಬಾಸ್ಕೆಟ್‌ಬಾಲ್ ಕೋರ್ಟ್ 2, ಸಿಂಥೆಟಿಕ್ ಮಾರ್ಷಲ್ ಆಟ್ಸ್‌ರ್ ಅಂಕಣ 2, ಸ್ಕಾ$್ವಶ್ 2, 10ಗಿ20 ಅಳತೆಯ ಸ್ವಿಮ್ಮಿಂಗ್ ಪೂಲ್ (ವ್ಯಾಯಾಮ), ಮಣ್ಣಿನ ಕುಸ್ತಿ ಅಂಕಣ 1 ನಿರ್ಮಾಣವಾಗಲಿದೆ.
ಹೊರಾಂಗಣ ಸೌಲಭ್ಯಗಳು:
ಹೊರಾಂಗಣ ವಿಭಾಗದಲ್ಲಿ ಸಿಂಥೆಟಿಕ್ ಹಾಕಿ ಅಂಕಣ 1, ಫಿಫಾ ಗುಣಮಟ್ಟಕ್ಕೆ ಅನುಗುಣವಾಗಿ ಫುಟ್‌ಬಾಲ್ ಅಂಕಣ 1, ಅಥ್ಲೆಟಿಕ್ ಟ್ರ್ಯಾಕ್ (ಸಿಂಥೆಟಿಕ್) 6 ಲೇನ್ 400 ಮೀ. ಟ್ರ್ಯಾಕ್, ಟೆನಿಸ್ ಅಂಕಣ 2, ಸ್ಕೇಟಿಂಗ್ ಅಂಕಣ 1, ಕೋಕೋ ಅಂಕಣ 1, ವಾಲಿಬಾಲ್ ಅಂಕಣ 2, ಈಜುಕೊಳ 1 ನಿರ್ಮಾಣವಾಗಲಿದೆ.
ಅಂತಾರಾಷ್ಟ್ರೀಯ ಮಾರ್ಗಸೂಚಿ
ಪ್ರತಿ ಕ್ರೀಡೆಗಳ ತರಬೇತಿಗೆ ತಜ್ಞರ ಕಮೀಟಿ ಇರಲಿದೆ. ಪ್ರಕಾಶ ಪಡುಕೋಣೆ, ರಾಹುಲ್ ದ್ರಾವಿಡ್ ಅಕಾಡೆಮಿ ಸೇರಿ ತಜ್ಞರು ಇಲ್ಲಿನ ಕ್ರೀಡೆಗಳ ಆಯೋಜನೆ ಹಾಗೂ ತರಬೇತಿಗೆ ಮುಂದಾಗಲಿದ್ದಾರೆ. ರಾಷ್ಟ್ರೀಯಮಟ್ಟದ ಇನ್ನೂ ಹಲವು ಸಂಸ್ಥೆಗಳನ್ನು ಸಂಪರ್ಕಿಸುವ ಚಿಂತನೆ ಇದೆ. ಅದಕ್ಕಾಗಿಯೇ ಫುಟ್ಬಾಲ್ ಅಂಕಣವನ್ನು ಫಿಫಾ ಮಾರ್ಗಸೂಚಿ ಅನ್ವಯ, ಅಥ್ಲೆಟಿಕ್ ಟ್ರ್ಯಾಕ್‌ನ್ನು ಐಎಎಎಫ್ (ಇಂಟರ್‌ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್) ಗುಣಮಟ್ಟಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಅಲ್ಲದೆ, ಐಟಿಎಫ್ ಮಾರ್ಗಸೂಚಿ ಅನ್ವಯ ಟೆನಿಸ್ ಅಂಕಣ, ಐಟಿಎಫ್ ಮಾರ್ಗಸೂಚಿಯ ಟೆನಿಸ್ ಕೋರ್ಟ್, ಎನ್‌ಸಿಜಿ ಅನ್ವಯ ಕೋಕೋ, ಎಫ್‌ಐಆರ್‌ಎಸ್ ಅನ್ವಯ ಸ್ಕೇಟಿಂಗ್ ಕೋರ್ಟ್ ನಿರ್ಮಾಣವಾಗಲಿದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.
150 ಕೋಟಿ ರು. ಯೋಜನೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಟೆಂಡರ್ ಕರೆಯಲಾಗಿದ್ದು, ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಸ್ಮಾರ್ಟ್‌ಸಿಟಿ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ಹೇಳಿದ್ದಾರೆ.