BWF Badminton World Tour Finals: ಶ್ರೀಕಾಂತ್, ಲಕ್ಷ್ಯ ಸೆನ್ ಕಣಕ್ಕೆ..!

By Kannadaprabha News  |  First Published Nov 30, 2021, 8:55 AM IST

* ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶ್ರೀಕಾಂತ್, ಲಕ್ಷ್ಯಾ ಭಾಗಿ

* ದೇ ಮೊದಲ ಬಾರಿಗೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಇಬ್ಬರು ಶಟ್ಲರ್‌ಗಳು ಕಣಕ್ಕಿಳಿಯಲಿದ್ದಾರೆ

* ಡಿಸೆಂಬರ್ 01ರಿಂದ 05ರ ವರೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಟೂರ್ನಿ


ಬಾಲಿ(ನ.30): ವರ್ಷಾಂತ್ಯದ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ (Badminton World Tour Finals) ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಇಬ್ಬರು ಶಟ್ಲರ್‌ಗಳು ಕಣಕ್ಕಿಳಿಯಲಿದ್ದಾರೆ. ಬುಧವಾರದಿಂದ ಆರಂಭಗೊಳ್ಳಲಿರುವ ಟೂರ್ನಿಗೆ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ (Kidambi Srikanth) ಹಾಗೂ ಲಕ್ಷ್ಯ ಸೆನ್‌ (Lakshya Sen) ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಪೈಕಿ ಲಕ್ಷ್ಯ ವಿಶ್ವ ಟೂರ್‌ ಫೈನಲ್ಸ್‌ಗೆ ಅರ್ಹತೆ ಪಡೆದ ಭಾರತದ ಅತೀ ಕಿರಿಯ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರೊಂದಿಗೆ ವಿಶ್ವ ನಂ.11, ಭಾರತದ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಸಹ ಕಣಕ್ಕಿಳಿಯಲಿದೆ. ಪುರುಷರ ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ಜೋಡಿ ಎನ್ನುವ ಹಿರಿಮೆಗೆ ಈ ಇಬ್ಬರು ಪಾತ್ರರಾಗಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು (PV Sindhu), ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. 2018ರಲ್ಲಿ ಸಿಂಧು ವಿಶ್ವ ಟೂರ್‌ ಫೈನಲ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಗೆದ್ದಿದ್ದು, ಭಾರತದ ಏಕೈಕ ಚಾಂಪಿಯನ್‌ ಎನಿಸಿಕೊಂಡಿದ್ದಾರೆ.

Tap to resize

Latest Videos

ಆಸ್ಪ್ರೇಲಿಯನ್‌ ಓಪನ್‌ಗೆ ಜೋಕೋವಿಚ್‌ ಗೈರು?

ಮೆಲ್ಬರ್ನ್‌: 2022ರ ಆಸ್ಪ್ರೇಲಿಯನ್‌ ಓಪನ್‌ (Australian Open) ಟೆನಿಸ್‌ ಟೂರ್ನಿಯಲ್ಲಿ 9 ಬಾರಿಯ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ (Novak Djokovic) ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಎಂದು ಅವರ ತಂದೆ ತಿಳಿಸಿದ್ದಾರೆ.  ‘ಒಬ್ಬ ಕ್ರೀಡಾಪಟುವಾಗಿ ಜೋಕೋವಿಚ್‌ ಟೂರ್ನಿಯಲ್ಲಿ ಆಡುವುದನ್ನು ಬಯಸಿದ್ದರು. ಆದರೆ ಇಂತಹ ಪರಿಸ್ಥಿತಿಯಲ್ಲಿ, ಬ್ಲ್ಯಾಕ್‌ಮೇಲ್‌ ನಡುವೆ ಅದು ಸಾಧ್ಯವಾಗುತ್ತೋ ಗೊತ್ತಿಲ್ಲ’ ಎಂದಿದ್ದಾರೆ. ಲಸಿಕೆ ಪಡೆಯುವುದು ವೈಯಕ್ತಿಕ ನಿರ್ಧಾರ. ಆ ಮಾಹಿತಿಯನ್ನು ಬಹಿರಂಗಗೊಳಿಸುವುದು ಅನಗತ್ಯ. ಲಸಿಕೆ ಪ್ರಮಾಣ (Vaccine certificate) ಪತ್ರವನ್ನು ಸಲ್ಲಿಸುವುದು ಕಡ್ಡಾಯಗೊಳಿಸಿದರೆ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲ ಎಂದು ಜೋಕೋವಿಚ್‌ ಹೇಳಿದ್ದರು. 

ಇದಕ್ಕೆ ಸ್ಪಷ್ಟನೆ ನೀಡಿದ್ದ ಆಸ್ಪ್ರೇಲಿಯಾ ಸರ್ಕಾರ (Australian Govt) ಹಾಗೂ ಟೂರ್ನಿಯ ಆಯೋಜಕರು, ಟೂರ್ನಿಯಲ್ಲಿ ಪಾಲ್ಗೊಳ್ಳಲು 2 ಡೋಸ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ ಎಂದಿದ್ದರು. ಟೂರ್ನಿ ಜನವರಿ 17ಕ್ಕೆ ಆರಂಭವಾಗಲಿದೆ.

ಐಎಸ್‌ಎಲ್‌: ಚೆನ್ನೈಯಿನ್‌ ಜಯಭೇರಿ

ಮಾರ್ಗೊ: 8ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) (Indian Super League) ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ (Chennaiyin FC) ತಂಡ, ನಾರ್ಥ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿದೆ. ಸತತ 2ನೇ ಗೆಲುವಿನೊಂದಿಗೆ ಒಟ್ಟು 6 ಅಂಕ ಗಳಿಸಿರುವ ಚೆನ್ನೈಯಿನ್‌ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. 

ISL 2021-22: ಬೆಂಗಳೂರು ಎಫ್‌ಸಿ-ಕೇರಳ ಪಂದ್ಯ ಡ್ರಾನಲ್ಲಿ ಅಂತ್ಯ..!

ಚೆನ್ನೈ ಪರ ಚಾಂಗ್ಟೆ 41ನೇ ನಿಮಿಷದಲ್ಲಿ ಮೊದಲ ಗೋಲು ಹೊಡೆದರೆ, 50ನೇ ನಿಮಿಷದಲ್ಲಿ ನಾಥ್‌ರ್‍ಈಸ್ಟ್‌ ಸಮಬಲ ಸಾಧಿಸಿತು. 74ನೇ ನಿಮಿಷದಲ್ಲಿ ಅನಿರುದ್ಧ್ ಥಾಪ ಗೋಲು ಬಾರಿಸಿ ಚೆನ್ನೈ ಗೆಲ್ಲಲು ಕಾರಣರಾದರು. ಮಂಗಳವಾರ ಒಡಿಶಾ ಎಫ್‌ಸಿ ಹಾಗೂ ಈಸ್ಟ್‌ಬೆಂಗಾಲ್‌ ತಂಡಗಳು ಮುಖಾಮುಖಿ ಆಗಲಿವೆ.

ಮಹಿಳಾ ಫುಟ್ಬಾಲ್‌: ಚಿಲಿ ವಿರುದ್ಧ ಭಾರತಕ್ಕೆ ಸೋಲು

ಮನೌಸ್‌(ಬ್ರೆಜಿಲ್‌): ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ (AFC Asian Cup) ಸಿದ್ಧತೆಗಾಗಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಚಿಲಿ ವಿರುದ್ಧ 0-3 ಗೋಲುಗಳ ಸೋಲು ಅನುಭವಿಸಿದೆ. ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರು ಸುಧಾರಿತ ಆಟ ಪ್ರದರ್ಶಿಸಿದರು. ಮೊದಲ ಪಂದ್ಯದಲ್ಲಿ ಮಾಜಿ ವಿಶ್ವಕಪ್‌ ರನ್ನರ್‌ ಅಪ್‌ ಬ್ರೆಜಿಲ್‌ ವಿರುದ್ಧ ಭಾರತ ದೊಡ್ಡ ಅಂತರದಲ್ಲಿ ಸೋಲು ಕಂಡಿತ್ತು. ಗುರುವಾರ ಭಾರತ ತಂಡ ವೆನೆಝುವೆಲಾ ವಿರುದ್ಧ ಕೊನೆ ಪಂದ್ಯ ಆಡಲಿದೆ.

click me!