ಹಳ್ಳಿ ಪ್ರತಿಭೆ ಪಿ.ಟಿ. ಉಷಾರನ್ನು ಬಂಗಾರದ ಹುಡುಗಿಯಾಗಿ ರೂಪಿಸಿದ್ದ ಕೋಚ್ ನಂಬಿಯರ್ ಇನ್ನಿಲ್ಲ

Suvarna News   | Asianet News
Published : Aug 20, 2021, 11:16 AM ISTUpdated : Aug 20, 2021, 11:19 AM IST
ಹಳ್ಳಿ ಪ್ರತಿಭೆ ಪಿ.ಟಿ. ಉಷಾರನ್ನು ಬಂಗಾರದ ಹುಡುಗಿಯಾಗಿ ರೂಪಿಸಿದ್ದ ಕೋಚ್ ನಂಬಿಯರ್ ಇನ್ನಿಲ್ಲ

ಸಾರಾಂಶ

* ಭಾರತದ ದಿಗ್ಗಜ ಅಥ್ಲೀಟ್‌ ಪಿ.ಟಿ. ಉಷಾ ಕೋಚ್‌ ನಂಬಿಯರ್(89) ಕೊನೆಯುಸಿರು * ಪಿ.ಟಿ. ಉಷಾ ಚಾಂಪಿಯನ್‌ ಆಟಗಾರ್ತಿ ಆಗುವಲ್ಲಿ ನಂಬಿಯರ್ ಪಾತ್ರ ಅನನ್ಯ * ಕೋಚ್ ನಿಧನಕ್ಕೆ ಕಂಬನಿ ಮಿಡಿದ ಪಿ.ಟಿ. ಉಷಾ

ತಿರುವನಂತಪುರಂ(ಆ.20): ಹಳ್ಳಿ ಹುಡುಗಿಯಾಗಿದ್ದ ಪಿ.ಟಿ. ಉಷಾ ಅವರನ್ನು ಏಷ್ಯಾದ ಬಂಗಾರದ ಹುಡುಗಿಯನ್ನಾಗಿ ಪರಿವರ್ತಿಸಿದ್ದ ದಿಗ್ಗಜ ಅಥ್ಲೆಟಿಕ್ಸ್ ಕೋಚ್ ಒ. ಎಂ. ನಂಬಿಯರ್(89) ಕೋಯಿಕ್ಕೋಡ್‌ನ ಪಯೋಲಿಯಲ್ಲಿ ಗುರುವಾರ(ಆ.19) ಸಂಜೆ ಕೊನೆಯುಸಿರೆಳೆದಿದ್ದಾರೆ. ನಂಬಿಯಾರ್ ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.

ದೇಶದ ಅತ್ಯಂತ ಪ್ರಖ್ಯಾತ ಅಥ್ಲೆಟಿಕ್ಸ್ ಕೋಚ್‌ಗಳಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ನಂಬಿಯರ್, ಚಿಕ್ಕ ವಯಸ್ಸಿನಲ್ಲೇ ಪಿ.ಟಿ. ಉಷಾ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಬಳಿಕ 1976ರಲ್ಲಿ ಕನ್ನೂರು ಸ್ಪೋರ್ಟ್ಸ್‌ ಡಿವಿಸನ್‌ನಲ್ಲಿ ಉಷಾ ಅವರಿಗೆ ಕೋಚಿಂಗ್ ನೀಡಲಾರಂಭಿಸಿದರು. ನಂಬಿಯರ್ ಮಾರ್ಗದರ್ಶನದಲ್ಲಿ ಓಟದ ಸ್ಪರ್ಧೆಯಲ್ಲಿ ಪಿ.ಟಿ. ಏಷ್ಯನ್‌ ಗೇಮ್ಸ್‌ಗಳಲ್ಲಿ ಪದಕದ ಬೇಟೆಯಾಡಿದ್ದರು. ಆದರೆ 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಉಷಾ ಕೂದಲೆಳೆ ಅಂತರದಲ್ಲಿ ಒಲಿಂಪಿಕ್ಸ್‌ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು. ಪಿ.ಟಿ ಉಷಾ ಕೊನೆಯ ಸೆಕೆಂಡ್‌ನಲ್ಲಿ ಪದಕ ಗೆಲ್ಲಲು ವಿಫಲವಾದರೂ ಸಹಾ ದೇಶದ ಸಾವಿರಾರು ಮಕ್ಕಳು ಅಥ್ಲೆಟಿಕ್ಸ್‌ನತ್ತ ಚಿತ್ತ ಹರಿಸಲು ಪ್ರೇರೇಪಿತರಾದರು. ಪಿ.ಟಿ ಉಷಾ ಸ್ವಾತಂತ್ರ್ಯ ಭಾರತದಲ್ಲಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚೊಚ್ಚಲ ಒಲಿಂಪಿಕ್ಸ್‌ ಪದಕ ಗೆಲ್ಲಲು ವಿಫರಾಗಿದ್ದರು. ಆದರೆ ಇತ್ತೀಚೆಗಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಜಾವಲಿನ್‌ ಥ್ರೋ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕದ ಬರವನ್ನು ನೀಗಿಸುವಲ್ಲಿ ಯಶಸ್ವಿಯಾಗಿದ್ದರು.

ನಂಬಿಯರ್ ನಿಧನಕ್ಕೆ ಪಿ.ಟಿ. ಉಷಾ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ. ನನ್ನ ಪಾಲಿನ ದಾರಿದೀಪವಾಗಿದ್ದ ನನ್ನ ಗುರು, ಕೋಚ್‌ ನಮ್ಮನ್ನು ಅಗಲಿದ್ದಾರೆ. ನನ್ನ ಪಾಲಿಗೆ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಜೀವನದಲ್ಲಿ ಅವರು ನೀಡಿದ ಕೊಡುಗೆಯನ್ನು ಪದಕಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಿಸ್ ಯೂ ಸರ್ ಎಂದು ಉಷಾ ಟ್ವೀಟ್ ಮಾಡಿದ್ದಾರೆ.

8 ತಿಂಗಳ ಮಗುವಿನ ಚಿಕಿತ್ಸೆಗೆ ಒಲಿಂಪಿಕ್ಸ್‌ ಪದಕವನ್ನೇ ಹರಾಜಿಗಿಟ್ಟ ಮರಿಯಾ

ಪಿ.ಟಿ. ಉಷಾ ಏಷ್ಯಾದಲ್ಲಿ ಮನೆಮಾತಾಗಿರುವ ಅಥ್ಲೀಟ್‌ ಎನಿಸಿಕೊಳ್ಳುವಲ್ಲಿ ನಂಬಿಯರ್ ಪಾತ್ರ ಅನನ್ಯವಾದದ್ದು. ಪಿ.ಟಿ ಉಷಾ 1983ರಿಂದ 1998ರ ಅವಧಿಯಲ್ಲಿ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 23 ಪದಕಗಳನ್ನು ಜಯಿಸಿದ್ದರು. ಇದರಲ್ಲಿ 14 ಚಿನ್ನ ಹಾಗೂ 6 ಬೆಳ್ಳಿ ಪದಕಗಳು ಸೇರಿವೆ. ಇನ್ನು 1985ರ ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಿ.ಟಿ ಉಷಾ 5 ಚಿನ್ನ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದು, ಇಂದಿಗೂ ಆ ದಾಖಲೆ ಅಚ್ಚಳಿಯದೇ ಉಳಿದಿದೆ. ಇದಾದ ಮರು ವರ್ಷವೇ ಸಿಯೋಲ್‌ನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ 4 ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿ ಭಾರತದ ಪಾಲಿಗೆ ಅಥ್ಲೆಟಿಕ್ಸ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದರು.

ನಂಬಿಯರ್ ಸ್ವತಃ ಅಥ್ಲೀಟ್‌ ಆಗಿದ್ದು, ಕಾಲೇಜು ಹಾಗೂ ಏರ್‌ ಫೋರ್ಸ್‌ನಲ್ಲಿದ್ದಾಗ ಅಥ್ಲೆಟಿಕ್ಸ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ನಂಬಿಯಾರ್ ಅವರಿಗೆ ಕಳೆದ ವರ್ಷ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!