ಮುಂಬೈ(ಜ.15): ಫಾರ್ಮುಲಾ 1ಗೆ(Formula) ಕಾಲಿಡುವ ಭಾರತದ ಅಗ್ರ ರೇಸರ್ ಜೇಹನ್ ದಾರುವಾಲಾ ಅವರ ಕನಸು ಸಾಕಾರಗೊಳ್ಳುವ ದಿನಗಳು ಹತ್ತಿರವಾದಂತಿದೆ. 2022ರ ಋತುವಿನಲ್ಲಿ 3 ಬಾರಿ F2 ಚಾಂಪಿಯನ್ ತಂಡ ಇಟಲಿಯ ಪ್ರೆಮಾ ರೇಸಿಂಗ್ ಪರ ಕಣಕ್ಕಿಳಿಯಲು ಜೇಹನ್(ehan Daruvala) ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಮುಂಬೈ ಮೂಲದ 23 ವರ್ಷದ ಚಾಲಕ ಸತತ 3ನೇ ವರ್ಷವೂ ರೆಡ್‌ಬುಲ್ ಕಿರಿಯರ ತಂಡದೊಂದಿಗೂ ಮುಂದುವರಿಯಲಿದ್ದಾರೆ. ರೆಡ್‌ಬುಲ್ ತಂಡವು 4 ಬಾರಿ F1 ಚಾಂಪಿಯನ್(F1 Champions) ಸೆಬಾಸ್ಟಿಯನ್ ವೆಟ್ಟಲ್, ಹಾಲಿ F1 ಚಾಂಪಿಯನ್ ಮ್ಯಾಕ್ಸ್ ವರ್ಸ್ಟಾಪ್ಪೆನ್, ರೇಸ್ ವಿಜೇತರಾದ ಡೇನಿಯಲ್ ರಿಕಾರ್ಡೊ, ಪೀಯರ್ ಗ್ಯಾಸ್ಲಿ ಸೇರಿ ಅನೇಕ ಚಾಲಕರನ್ನು ಬೆಳೆಸಿದೆ.
ಜೇಹನ್ ಈಗಾಗಲೇ F 2 ಚಾಂಪಿಯನ್‌ಶಿಪ್‌ನಲ್ಲಿ(F2 Championships) ಹಲವು ಗೆಲುವು, ಪೋಡಿಯಂ ಫಿನಿಶ್‌ಗಳನ್ನು ಸಾಧಿಸಿದ್ದಾರೆ. ತಮ್ಮ ಅತ್ಯದ್ಭುತ ಲಯವನ್ನು ಮುಂದುವರಿಸಿ, ತಮ್ಮ ಅಸಾಧಾರಣ ವೇಗದ ಸಹಾಯದಿಂದ ಪ್ರೆಮಾ ರೇಸಿಂಗ್ ತಂಡವು ಸತತ 3ನೇ ವರ್ಷ ಚಾಲಕರ ಚಾಂಪಿಯನ್‌ಶಿಪ್ ಗಳಿಸಲು ನೆರವಾಗುವುದು ಜೇಹನ್‌ರ ಗುರಿಯಾಗಿದೆ.
Formula One : ಹ್ಯಾಮಿಲ್ಟನ್ ಅಧಿಪತ್ಯ ಮುಗಿಸಿದ ವರ್ಸ್ಟಾಪೆನ್ ನೂತನ ಎಫ್ 1 ಚಾಂಪಿಯನ್!
`ಪ್ರೆಮಾ ರೇಸಿಂಗ್(PREMA Racing) ತಂಡದೊಂದಿಗೆ ಮತ್ತೊಮ್ಮೆ ಕೈಜೋಡಿಸುತ್ತಿರುವುದು ನನಗೆ ಬಹಳ ಖುಷಿ ನೀಡಿದೆ. ನಾನು ಈ ಅವಕಾಶದಿಂದ ಉತ್ಸುಕನಾಗಿದ್ದೇನೆ' ಎಂದು ಜೇಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. `ಚಾರ್ಲ್ಸ್(ಲೆಕ್ಲೆರ್ಕ್) ಹಾಗೂ ಮಿಕ್ (ಶೂಮಾಕರ್) ಪ್ರೆಮಾ ರೇಸಿಂಗ್ ಪರ F2 ಪ್ರಶಸ್ತಿಗಳನ್ನು ಜಯಿಸಿ ಮುಂದಿನ ವರ್ಷವೇ F1 ರೇಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಪಡೆದರು. ಅವರ ಮಾರ್ಗವನ್ನೇ ನಾನೂ ಅನುಸರಿಸುವ ವಿಶ್ವಾಸದಲ್ಲಿದ್ದೇನೆ' ಎಂದು ಜೇಹನ್ ತಿಳಿಸಿದ್ದಾರೆ.
ರೆಡ್ ಬುಲ್ ತಂಡದಲ್ಲೂ ಜೇಹನ್‌ಗೆ ಹೆಚ್ಚುವರಿ ಅವಕಾಶಗಳು ದೊರೆಯಲಿವೆ. ಅವರು ತಂಡದ ಮೂಲ ಮಿಲ್ಟನ್ ಫಾರ್ಮುಲಾ 1 ಸಿಮುಲೇಟರ್ ಚಲಾಯಿಸುವುದು ಮಾತ್ರವಲ್ಲ, ಆಸ್ಟ್ರೀಯಾದಲ್ಲಿರುವ ತಂಡದ ಫಿಟ್ನೆಸ್ ಸೌಕರ್ಯಗಳನ್ನು ಬಳಸಲಿದ್ದಾರೆ. ಮ್ಯಾಕ್ಸ್ ವರ್ಸ್ಟಾಪ್ಪೆನ್ ಹಾಗೂ ಸರ್ಜಿಯೊ ಪೆರೆಜ್‌ಗೂ ಈ ರೀತಿಯ ಅವಕಾಶ ದೊರೆತ್ತಿತ್ತು.
ಎಫ್1 ರೇಸ್: ಪ್ರಾಣಾಪಾಯದಿಂದ ಪಾರಾದ ಹ್ಯಾಮಿಲ್ಟನ್..!
ಪ್ರೆಮಾ ರೇಸಿಂಗ್ ಎಫ್ 2 ಚಾಂಪಿಯನ್‌ಶಿಪ್‌ನ ಅತ್ಯಂತ ಯಶಸ್ವಿ ತಂಡ ಆಗಿದ್ದು, ಜೇಹನ್ ಪಾಲಿಗೆ ಇದೊಂದು ಅದ್ಭುತ ಅವಕಾಶ ಎನಿಸಿದೆ. ಐಟಲಿಯ ರೇಸಿಂಗ್ ಪವರ್‌ಹೌಸ್ ಎನಿಸಿರುವ ಪ್ರೆಮಾ ರೇಸಿಂಗ್ ಚಾರ್ಲ್ಸ್ ಲೆಕ್ಲೆರ್ಕ್, 7 ಬಾರಿ ವಿಶ್ವ ಎಫ್1 ಚಾಂಪಿಯನ್ ಮೈಕ್ ಶೂಮಾಕರ್‌ರ ಪುತ್ರ ಮಿಕ್ ಶೂಮಾಕರ್‌ರಂತಹ ಹಲವು ಚಾಂಪಿಯನ್ನರನ್ನು ಪರಿಚಯಿಸಿದೆ.
ಜೇಹನ್ ಪ್ರೆಮಾ ರೇಸಿಂಗ್ ತಂಡಕ್ಕೆ ಹ್ಯಾಟ್ರಿಕ್ ಪ್ರಶಸ್ತಿ ತಂದುಕೊಡಲು ಎದುರು ನೋಡುತ್ತಿದ್ದಾರೆ. 2020ರಲ್ಲಿ ಮಿಕ್ ಶೂಮಾಕರ್ ಹಾಗೂ ಕಳೆದ ವರ್ಷ ಆಸ್ಟೇಲಿಯಾದ ಆಸ್ಕರ್ ಪಿಯಾಸ್ಟಿ ಪ್ರೆಮಾ ರೇಸಿಂಗ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2019ರಲ್ಲಿ ಪ್ರೆಮಾ ರೇಸಿಂಗ್ ಪರ ಫಾರ್ಮುಲಾ 3 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಜೇಹನ್, ಋತುವಿನ ಉದ್ದಕ್ಕೂ ತಮ್ಮ ಸಹ ಚಾಲಕರೊಂದಿಗೆ ನೇರಾನೇರ ಪೈಪೋಟಿ ನಡೆಸಿ 3ನೇ ಸ್ಥಾನ ಪಡೆದಿದ್ದರು.
2021ರ ಫಾರ್ಮುಲಾ 1 ರೇಸಲ್ಲಿ ಶೂಮಾಕರ್ ಮಗ
ಪ್ರೆಮಾ ಫಾರ್ಮುಲಾ 2 ತಂಡದ ಮುಖ್ಯಸ್ಥ ರೆನೆ ರೊಸಿನ್ ಮಾತನಾಡಿ, `ಜೇಹನ್ ಜೊತೆ ನಾನು ಅತ್ಯುತ್ತಮ ಬಾಂಧವ್ಯ ಹೊಂದಿದ್ದೇನೆ. ಎಫ್‌ಐಎ ಎಫ್3 ಚಾಂಪಿಯನ್‌ಶಿಪ್‌ನಲ್ಲಿ ಅವರು ನಮ್ಮ ತಂಡದೊಂದಿಗಿದ್ದರು. ಅವರ ಕೌಶಲ್ಯ ಹಾಗೂ ನೈತಿಕತೆಯ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ತಂಡಕ್ಕೆ ಅವರ ಬಹಳ ಚೆನ್ನಾಗಿ ಸರಿ ಹೊಂದುತ್ತಾರೆ. ಕಳೆದ ಒಂದೆರಡು ವರ್ಷಗಳಲ್ಲಿ ಅವರು ಎಷ್ಟರ ಮಟ್ಟಿಗೆ ಸುಧಾರಣೆ ಕಂಡಿದ್ದಾರೆ ಎನ್ನುವುದನ್ನು ನೋಡುವ ಕುತೂಹಲ ನನಗಿದೆ. ಋತು ಅಂತ್ಯದ ಪರೀಕ್ಷಾ ಸೆಷನ್‌ಗಳ ವೇಳೆ ಆಕರ್ಷಕ ಪ್ರದರ್ಶನ ತೋರಿದರು. ರೆಡ್‌ಬುಲ್ ಕಿರಿಯರ ಕಾರ್ಯಕ್ರಮದ ಜೊತೆಗೆ ನಾವೂ ಸಹ ಅವರು ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಬೇಕಿರುವ ಎಲ್ಲಾ ನೆರವನ್ನು ನೀಡಲಿದ್ದೇವೆ' ಎಂದಿದ್ದಾರೆ.
ಎಫ್‌ಐಎ ಫಾರ್ಮುಲಾ 2 ಚಾಂಪಿಯನ್‌ಶಿಪ್ ಫಾರ್ಮುಲಾ 1ಗಿಂತ ಒಂದೇ ಹೆಜ್ಜೆ ಕೆಳಗಿದ್ದು, ಇಂದಿನ ಅನೇಕ ಫಾರ್ಮುಲಾ 1 ಚಾಲಕರು ಎಫ್2 ಹಂತದಿAದಲೇ ಬಂದವರಾಗಿದ್ದಾರೆ. ಚಾರ್ಲ್ಸ್ ಲೆಕ್ಲೆರ್ಕ್, ಜಾರ್ಜ್ ರಸೆಲ್, ಲ್ಯಾಂಡೊ ನೋರಿಸ್, ಮಿಕ್ ಶೂಮಾಕರ್, ಗುವಾನ್ಯು ಝೊವೊ, ಯೂಕಿ ಸುನೊಡಾ, ಅಷ್ಟೇ ಏಕೆ ಲೆವಿಸ್ ಹ್ಯಾಮಿಲ್ಟನ್ ಸಹ ಎಫ್2 ಹಂತದಲ್ಲಿ ಮಿಂಚಿ ಎಫ್1ಗೆ ಕಾಲಿಟ್ಟಿದ್ದರು.
ಈ ವರ್ಷ ಎಫ್2 ಸೀರೀಸ್ ಒಟ್ಟು 14 ಸುತ್ತುಗಳನ್ನು ಒಳಗೊಂಡಿದ್ದು, 28 ರೇಸ್‌ಗಳು ನಡೆಯಲಿವೆ. ಮಾರ್ಚ್ 18, 2022ರಂದು ಬಹರೈನ್‌ನಲ್ಲಿ ಆರಂಭಗೊಳ್ಳಲಿರುವ ಋತುವು ನವೆಂಬರ್ 20, 2022ರಂದು ಅಬು ಧಾಬಿಯಲ್ಲಿ ಕೊನೆಗೊಳ್ಳಲಿದೆ. ಎಲ್ಲಾ ರೇಸ್‌ಗಳು ಎಫ್1 ಸ್ಪರ್ಧೆಗೆ ಪೂರಕವಾಗಿ ನಡೆಯಲಿವೆ. ಐತಿಹಾಸಿಕ ಟ್ರಾö್ಯಕ್‌ಗಳಾದ ಮೊನಾಕೊ, ಸಿಲ್ವರ್‌ಸ್ಟೋನ್, ಸ್ಪಾ ಹಾಗೂ ಮೊನ್ಜಾದಲ್ಲೂ ರೇಸ್‌ಗಳು ನಡೆಯಲಿವೆ.
ಜೇಹನ್ ದಾರುವಾಲಾ ಬಗ್ಗೆ
ಜೇಹನ್ ದಾರುವಾಲಾ ಭಾರತದ ಮುಂಬೈ ಮೂಲದ ರೇಸಿಂಗ್ ಚಾಲಕ. 2009ರಲ್ಲಿ ಅವರಿಗೆ 10 ವರ್ಷ ವಯಸ್ಸಿದಾಗ ಕಾರ್ಟಿಂಗ್ ಆರಂಭಿಸಿದರು. 2 ವರ್ಷಗಳ ಬಳಿಕ ಫೋರ್ಸ್ ಇಂಡಿಯಾದ `ಒನ್ ಇನ್ ಎ ಬಿಲಿಯನ್' ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಮೂವರ ಪೈಕಿ ಜೇಹನ್ ಸಹ ಒಬ್ಬರು. 2013ರಲ್ಲಿ ಬ್ರಿಟಿಷ್ ಕೆಎಫ್3 ಕಾರ್ಟಿಂಗ್ ಚಾಂಪಿಯನ್‌ಶಿಪ್ ಗೆದ್ದ ಏಷ್ಯಾದ ಮೊದಲ ಚಾಲಕ ಎನ್ನುವ ದಾಖಲೆಯನ್ನು ಅವರು ಬರೆದರು. ಜೇಹನ್ ತಾವು ಸ್ಪರ್ಧಿಸಿರುವ ಪ್ರತಿಯೊಂದು ವಿಭಾಗದಲ್ಲೂ ಗೆಲುವು ಸಾಧಿಸಿದ್ದಾರೆ ಎನ್ನುವುದು ಗಮನಾರ್ಹ.
ಸದ್ಯ ಜೇಹನ್ ಎಫ್‌ಐಎ ಫಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಫ್ 2 ವಿಭಾಗವು ಎಫ್ 1ಗೆ ಕಾಲಿಡುವ ಮೊದಲು ಚಾಲಕರಿಗೆ ಉತ್ಕೃಷ್ಟ ಮಟ್ಟದ ರೇಸಿಂಗ್ ಅನುಭವವನ್ನು ಒದಗಿಸಲಿವೆ. ಎಫ್1 ರೇಸ್‌ಗಳು ನಡೆಯುವ ಸಮಯದಲ್ಲೇ ಈ ರೇಸ್‌ಗಳು ನಡೆಯಲಿವೆ. ಎಫ್2 ವಿಭಾಗದಲ್ಲಿ ಈಗಾಗಲೇ ಹಲವು ರೇಸ್‌ಗಳನ್ನು ಗೆದ್ದಿರುವ ಜೇಹನ್, 2022ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಗುರಿ ಹೊಂದಿದ್ದಾರೆ. ಇದರೊಂದಿಗೆ ಫಾರ್ಮುಲಾ 1 ರೇಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ 3ನೇ ಚಾಲಕ ಎನ್ನುವ ಹಿರಿಮೆಗೆ ಪಾತ್ರರಾಗುವ ಕನಸು ಕಾಣುತ್ತಿದ್ದಾರೆ.