ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌‌: ಮೊದಲ ಬಾರಿಗೆ ಲಕ್ಷ್ಯ ಸೆನ್ ಟಾಪ್‌-10ಗೆ ಪ್ರವೇಶ!

By Naveen KodaseFirst Published Mar 23, 2022, 8:46 AM IST
Highlights

* ಬ್ಯಾಡ್ಮಿಂಟನ್ ವಿಭಾಗದಲ್ಲಿ ಹೊಸ ಬರವಸೆ ಮೂಡಿಸಿರುವ ಲಕ್ಷ್ಯ ಸೆನ್

* ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ

* ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್ಸೆನ್‌ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ

ನವದೆಹಲಿ(ಮಾ.23): ವಿಶ್ವದ ಪ್ರಮುಖ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಪದಕ ಗೆದ್ದು ಅಭೂತಪೂರ್ವ ಸಾಧನೆ ಮಾಡಿರುವ ಭಾರತದ ಯುವ ಶಟ್ಲರ್‌ ಲಕ್ಷ್ಯ ಸೆನ್‌ (Lakshya Sen) ಇದೇ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ (BWF World Rankings) ಅಗ್ರ 10ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಜೀವನಶ್ರೇಷ್ಠ 11ನೇ ಸ್ಥಾನ ಪಡೆದಿದ್ದ ಸೆನ್‌, ಮಂಗಳವಾರ ಬಿಡುಗಡೆಯಾದ ನೂತನ ರ‍್ಯಾಂಕಿಂಗ್‌ನಲ್ಲಿ 2 ಸ್ಥಾನ ಜಿಗಿತ ಕಂಡಿದ್ದಾರೆ. 74,786 ಅಂಕಗಳನ್ನು ಸಂಪಾದಿಸಿರುವ ಅವರು ಹಾಲಿ ವಿಶ್ವ ಚಾಂಪಿಯನ್‌, ಸಿಂಗಾಪೂರದ ಲೋ ಕೀನ್‌ ಯೆವ್‌ರನ್ನು ಹಿಂದಿಕ್ಕಿ 9ನೇ ಸ್ಥಾನ ಪಡೆದಿದ್ದಾರೆ. 

ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್ಸೆನ್‌ (Viktor Axelsen) ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು, ಆಲ್‌ ಇಂಗ್ಲೆಂಡ್‌ ಟೂರ್ನಿಯ ಸೆಮೀಸ್‌ ತಲುಪಿ ಗಮನ ಸೆಳೆದಿದ್ದ ಗಾಯತ್ರಿ ಗೋಪಿಚಂದ್‌ ಹಾಗೂ ತ್ರೀಸಾ ಜಾಲಿ ಮಹಿಳಾ ಡಬಲ್ಸ್‌ನಲ್ಲಿ 12 ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 34ನೇ ಸ್ಥಾನ ಪಡೆದಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ಪಿ.ವಿ.ಸಿಂಧು (PV Sindhu) ಮಹಿಳಾ ಸಿಂಗಲ್ಸ್‌ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಗ್ರ ಶಟ್ಲರ್‌ಗಳ ವಿರುದ್ದ ಗೆದ್ದಿದ್ದು ಖುಷಿ ನೀಡಿದೆ:

ನನ್ನ ಸಾಧನೆ ಬಗ್ಗೆ ನಿಜಕ್ಕೂ ಖುಷಿ ಇದೆ. ಕಳೆದ ಆರು ತಿಂಗಳಲ್ಲಿ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿ ತುಂಬಾ ಕಲಿತಿದ್ದೇನೆ. ವಿಶ್ವದ ಪ್ರಮುಖ ಆಟಗಾರರನ್ನು ಸೋಲಿಸಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ರನ್ನರ್‌-ಅಪ್‌, ಭಾರತದ ಯುವ ಶಟ್ಲರ್‌ ಲಕ್ಷ್ಯ ಸೆನ್‌ ಹೇಳಿದ್ದಾರೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿದ್ದ ಲಕ್ಷ್ಯ ಭಾನುವಾರ ಫೈನಲ್‌ನಲ್ಲಿ ವಿಶ್ವ ನಂ.1, ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ಧ ಪರಾಭವಗೊಂಡರು. ಆದರೆ 21 ವರ್ಷಗಳ ಬಳಿಕ ಪ್ರತಿಷ್ಠಿತ ಟೂರ್ನಿಯ ಫೈನಲ್‌ಗೇರಿದ್ದ ಭಾರತದ ಪುರುಷ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸೆನ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

Can't get bigger then this😍

After a SENnsational performance at All England, enters the Elite club of top 10 rankings. 🥳

Just the beginning many more to go.🙌🏻🤞🏻 pic.twitter.com/DQkZ4JrZvH

— BAI Media (@BAI_Media)

ಮಂಗಳವಾರ ನಗರದ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕ್ಟರ್‌ ಆಕ್ಸೆಲ್ಸೆನ್‌ ಸೇರಿದಂತೆ ವಿಶ್ವದ ಪ್ರಮುಖ ಆಟಗಾರರನ್ನು ಸೋಲಿಸಿದ್ದರಲ್ಲಿ ಖುಷಿ ಇದೆ. ದೊಡ್ಡ ದೊಡ್ಡ ಟೂರ್ನಿಗಳಿಗೂ ಮುನ್ನ ನಾನು ಅವರ ಆಟವನ್ನು ಟೀವಿಯಲ್ಲಿ ನೋಡುತ್ತಿದ್ದೆ. ಅದರಿಂದ ಅವರ ತಂತ್ರಗಳ ಬಗ್ಗೆ ಕಲಿಯುತ್ತಿದ್ದೆ. ಇದು ಗೆಲುವಿಗೆ ಪ್ರಮುಖ ಕಾರಣವಾಯಿತು. ದೇಶಕ್ಕಾಗಿ ಆಡುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕೋವಿಡ್‌ ಸಮಯದಲ್ಲೂ ಅಭ್ಯಾಸಕ್ಕೆ ಉತ್ತಮ ಸಮಯ ಸಿಕ್ಕಿತು. ನನ್ನ ಆಟ, ಫಿಟ್ನೆಸ್‌ ಸುಧಾರಣೆ ಹಿಂದೆ ಪೋಷಕರು, ಅಕಾಡೆಮಿಯ ಪಾತ್ರ ದೊಡ್ಡದು ಎಂದು ಹೇಳಿದರು.

Lakshya Sen ರನ್ನರ್ ಅಪ್ ಆಗಿದ್ದಕ್ಕೆ ಬೇಸರವಿಲ್ಲ, ಫಲಿತಾಂಶದ ಬಗ್ಗೆ ತೃಪ್ತಿ ಇದೆ

ಅಕಾಡೆಮಿಯ ಪ್ರಧಾನ ಕೋಚ್‌ ಹಾಗೂ ನಿರ್ದೇಶಕ ವಿಮಲ್‌ ಕುಮಾರ್‌ ಮಾತನಾಡಿ, ‘ಲಕ್ಷ್ಯ ಸೆನ್‌ ಈಗ ವಿಶ್ವದ ಓರ್ವ ಚಾಂಪಿಯನ್‌ ಆಟಗಾರ. ಪ್ರತಿ ದಿನವೂ ಆಟದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಫಿಟ್ನೆಸ್‌ ಕಾಯ್ದುಕೊಂಡಿರುವುದೇ ಲಕ್ಷ್ಯ ಸೆನ್‌ರ ಯಶಸ್ಸಿನ ಗುಟ್ಟು’ ಎಂದರು. ಸುದ್ದಿಗೋಷ್ಠಿ ವೇಳೆ ಲಕ್ಷ್ಯ ಅವರ ತಂದೆ ಧೀರೇಂದ್ರ ಕುಮಾರ್‌, ತಾಯಿ ನಿರ್ಮಲಾ, ವಿದೇಶಿ ಕೋಚ್‌ ಯೋ ಯಂಗ್‌ ಸುಂಗ್‌ ಸೇರಿದಂತೆ ಅಕಾಡೆಮಿಯ ಕೋಚ್‌ಗಳು ಉಪಸ್ಥಿತರಿದ್ದರು.

ಸತತ ಎರಡು ವಾರಗಳ ಕಾಲ ಆಡಿ ದಣಿದಿದ್ದೇನೆ. ಹೀಗಾಗಿ ಸ್ವಿಸ್‌ ಓಪನ್‌ಗೆ ತೆರಳಲಿಲ್ಲ. ಕೆಲವೇ ದಿನಗಳಲ್ಲಿ ಕೊರಿಯಾ ಓಪನ್‌ ಆರಂಭವಾಗಲಿದೆ. ಅದರಲ್ಲಿ ಆಡುತ್ತೇನೆ. ಥಾಮಸ್‌ ಕಪ್‌, ಥಾಯ್ಲೆಂಡ್‌ ಓಪನ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಗುರಿ ಇದೆ - ಲಕ್ಷ್ಯ ಸೆನ್. 

click me!