ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಕ್ರೀಡಾ ತಾರೆಯರು ಸರ್ಕಾರಕ್ಕೆ ನೆರವು ನೀಡಿದ್ದಾರೆ. ತಮ್ಮ ವೇತನ ನೀಡೋ ಮೂಲಕ ಮಹಾಮಾರಿ ಕಾಯಿಲೆಯನ್ನು ತೊಲಗಿಸಲು ಪಣತೊಟ್ಟಿದ್ದಾರೆ.
ನವದೆಹಲಿ(ಮಾ.25): ವಿಶ್ವದೆಲ್ಲೆಡೆ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದ ಹೋರಾಟಕ್ಕೆ ಕ್ರೀಡಾ ತಾರೆಯರು ಕೈ ಜೋಡಿಸಿದ್ದಾರೆ. ಒಂದೆಡೆ ನಿರಂತರವಾಗಿ ಕ್ರೀಡಾತಾರೆಯರು ಸಾಮಾಜಿಕ ಜಾಲತಾಣದಲ್ಲಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಜೊತೆಗೆ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳು ಸಂಘಟಿತವಾಗಿ ನೆರವಿನ ಹಸ್ತ ಚಾಚಿದ್ದಾರೆ.
ಹೆಚ್ಚಿದ ಕೊರೋನಾ ವೈರಸ್; ಈ ವರ್ಷ ಐಪಿಎಲ್ ಟೂರ್ನಿ ರದ್ದು?
ರೈಲ್ವೇ ವಿಶೇಷ ಅಧಿಕಾರಿಯಾಗಿರುವ ಭಾರತದ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ ತಮ್ಮ 6 ತಿಂಗಳ ವೇತನ ನೀಡಿದ್ದಾರೆ. ವೈದ್ಯಕೀಯ ಸೇವೆಗಾಗಿ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್, ಸಂಸದರ ನಿಧಿಯಿಂದ 50 ಲಕ್ಷ ದೇಣಿಗೆ ನೀಡಿದ್ದಾರೆ. ಇನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ, ಲಂಕಾ ಸರ್ಕಾರಕ್ಕೆ ಎರಡೂವರೆ ಕೋಟಿ ರು.ಗಳ ಸಹಾಯ ಮಾಡಿದೆ.
ಭಾರತದಲ್ಲಿ ಕೋರನಾ ವೈರಸ್ ಪ್ರಕರಣ 400ರ ಗಡಿ ದಾಟಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ. ಗಂಭೀರ ಸ್ವರೂಪ ಪಡೆಯುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ(ಮಾ.25) 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ. ಮನೆಯಿಂದ ಯಾರೂ ಹೊರ ಬರದಂತೆ ಸೂಚಿಸಲಾಗಿದೆ.