ಇಂದು ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನು ಮೇಲೆ ಕಣ್ಣು..!

By Kannadaprabha News  |  First Published Aug 7, 2024, 12:24 PM IST

India at Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಪದಕದ ಬೇಟೆಗೆ ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್‌ ಕ್ರೀಡಾಕೂಟದ ಮಹಿಳೆಯರ ವೇಟ್‌ಲಿಫ್ಟಿಂಗ್‌ ಸ್ಪರ್ಧೆ ಬುಧವಾರ ನಡೆಯಲಿದ್ದು, ಸದ್ಯ ಎಲ್ಲರ ಕಣ್ಣು ಭಾರತದ ಮೀರಾಬಾಯಿ ಚಾನು(49 ಕೆ.ಜಿ. ವಿಭಾಗ) ಮೇಲೆ ನೆಟ್ಟಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚಾನು, ಮತ್ತೊಂದು ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆಯುವ ಕಾತರದಲ್ಲಿದ್ದಾರೆ. 

ಮೀರಾಬಾಯಿ ಚಾನು ಟೋಕಿಯೋದಲ್ಲಿ 202 ಕೆ.ಜಿ. (87 ಕೆ.ಜಿ. + 115 ಕೆ.ಜಿ.) ಭಾರ ಎತ್ತುವ ಮೂಲಕ 2ನೇ ಸ್ಥಾನ ಪಡೆದಿದ್ದರು. 2022ರಲ್ಲಿ 201 ಕೆ.ಜಿ. ಭಾರ ಎತ್ತಿರುವ ಚಾನುಗೆ ಆ ಬಳಿಕ ಲಯ ಹಾಗೂ ಫಿಟ್ನೆಸ್‌ ಸಮಸ್ಯೆ ಕಾಡುತ್ತಿದೆ. ಚಾನುಗೆ ಹಾಲಿ ಒಲಿಂಪಿಕ್‌ ಚಾಂಪಿಯನ್‌, ಚೀನಾದ ಹೊಯು ಝಿಹುಯಿ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.

Tap to resize

Latest Videos

undefined

ಇಂದು ಮಹಿಳಾ ಗಾಲ್ಫ್‌ ಶುರು: ಅದಿತಿ ಅಶೋಕ್ ಆಕರ್ಷಣೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನಿಯಾಗಿ, ಐತಿಹಾಸಿಕ ಪದಕವನ್ನು ಅಲ್ಪದರಲ್ಲೇ ತಪ್ಪಿಸಿಕೊಂಡಿದ್ದ ತಾರಾ ಗಾಲ್ಫರ್‌, ಕರ್ನಾಟಕದ ಅದಿತಿ ಅಶೋಕ್‌ ಬುಧವಾರದಿಂದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಜೊತೆ ಮಹಿಳಾ ವಿಭಾಗದದಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ದೀಕ್ಷಾ ಡಾಗರ್‌ ಕೂಡಾ ಸ್ಪರ್ಧಿಸುತ್ತಿದ್ದಾರೆ. 

ಅದಿತಿ 3 ವರ್ಷಗಳ ಹಿಂದಿನ ಕ್ರೀಡಾಕೂಟದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದರೂ, ಕೊನೆ ಕ್ಷಣದಲ್ಲಿ ಪದಕ ವಂಚಿತರಾಗಿದ್ದರು. ಅವರು ಈ ಬಾರಿ ಭಾರತದ ಪ್ರಮುಖ ಪದಕ ಭರವಸೆಯಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. 2ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ದೀಕ್ಷಾ ಮೇಲೂ ಭರವಸೆಯಿದೆ. ಒಟ್ಟು 4 ಸುತ್ತಿನ ಪಂದ್ಯಗಳು ನಡೆಯಲಿದ್ದು, ಶನಿವಾರ ಮುಕ್ತಾಯಗೊಳ್ಳಲಿದೆ.

ಸರ್ಫಿಂಗ್‌ ವೇಳೆ ತಿಮಿಂಗಿಲ ಪ್ರತ್ಯಕ್ಷ: ಫೋಟೋ ವೈರಲ್‌

ಒಲಿಂಪಿಕ್ಸ್‌ನ ಸರ್ಫಿಂಗ್‌ ಸ್ಪರ್ಧೆ ವೇಳೆ ಸಮುದ್ರದಲ್ಲಿ ತಿಮಿಂಗಿಲ ಪ್ರತ್ಯಕ್ಷವಾಗಿದ್ದು, ಸ್ಪರ್ಧಿಗಳು ಹಾಗೂ ಆಯೋಜಕರ ಆತಂಕಕ್ಕೆ ಕಾರಣವಾಗಿದೆ. ಪ್ಯಾರಿಸ್‌ನಿಂದ 16000 ಕಿ.ಮೀ. ದೂರದಲ್ಲಿರುವ ತಹಿಟಿ ಎಂಬಲ್ಲಿ ಸರ್ಫಿಂಗ್‌ ಸ್ಪರ್ಧೆಗಳು ನಡೆಯುತ್ತಿದೆ. ಸೋಮವಾರ ಮಹಿಳೆಯರ ಸೆಮಿಫೈನಲ್‌ ಸ್ಪರ್ಧೆ ವೇಳೆ ಕ್ರೀಡಾಪಟುಗಳ ಸ್ವಲ್ಪ ದೂರದಲ್ಲಿ ತಿಮಿಂಗಳ ಕಾಣಿಸಿಕೊಂಡಿದೆ. ಸದ್ಯ ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿವೆ.

ಒಲಿಂಪಿಕ್ಸ್‌ ಸ್ವಾರಸ್ಯ

ಬ್ರಿಟನ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ರೆಡ್ ಕಾರ್ಡ್‌ ಪಡೆದಿದ್ದ ಭಾರತದ ಹಾಕಿ ಆಟಗಾರ ಅಮಿತ್‌ ರೋಹಿದಾಸ್‌ರನ್ನು ಒಂದು ಪಂದ್ಯದಿಂದ ಅಮಾನತು ಮಾಡುವಂತೆ ಹಾಕಿಯ ತಾಂತ್ರಿಕ ಅಧಿಕಾರಿ, ಆಸ್ಟ್ರೇಲಿಯಾದ ಜೋಶುವಾ ಬರ್ಟ್‌ ಅವರು ಒಲಿಂಪಿಕ್ಸ್‌ ಆಯೋಜಕರಿಗೆ ಪತ್ರ ಬರೆದಿದ್ದರು. ಹೀಗಾಗಿ ಅಮಿತ್‌ ಅಮಾನತುಗೊಂಡಿದ್ದರು. ಸ್ವಾರಸ್ಯಕರ ಸಂಗತಿ ಏನೆಂದರೆ, ಇದೇ ಜೋಶುವಾ ಬರ್ಟ್‌ ಅವರು ಶಾರುಖ್‌ ಖಾನ್‌ ಅಭಿನಯದ ‘ಚಕ್‌ ದೇ ಇಂಡಿಯಾ’ ಸಿನಿಮಾದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಕೋಚ್‌ ಆಗಿ ನಟಿಸಿದ್ದರು. ಅಂದು ರೀಲ್‌ನಲ್ಲಿ ಭಾರತವನ್ನು ಕಾಡಿದ ಬರ್ಟ್‌, ಇಂದು ರಿಯಲ್‌ ಆಗಿ ಕಾಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
 

click me!